ಅಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನೆಂಟರ ಮನೆಯಲ್ಲಿದ್ದೆ. ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಡಾ. ತಾ.ನಂ.ಕುಮಾರಸ್ವಾಮಿಯವರು ನಾಡಿನ ಹಿರಿಯ ಲೇಖಕರು ಪೋನ್ ಮಾಡಿದ್ದರು. ಆಗ ಅವರ ಪರಿಚಯ ನನಗಿರಲಿಲ್ಲ. ಪತ್ರಿಕೆಯಲ್ಲಿ ನನ್ನ ಒಂದು ಪುಸ್ತಕ ವಿಮರ್ಶೆ ಓದಿ ಆ ಪುಸ್ತಕ ಇದ್ದರೆ ಕಳಿಸಿಕೊಡಿ ಎಂದರು. ನನ್ನ ಬಳಿಗೆ ಬಂದಿದ್ದು ಒಂದೇ ಪ್ರತಿ. ಆದರೂ ಆಗಲಿ ಸಾರ್ ಎಂದು ತಮ್ಮ ಪರಿಚಯ ನನಗಾಗಲಿಲ್ಲ ಎಂದೆ. ಮಾತನಾಡುತ್ತಾ ಮಿತ್ರರಾದರು. ಅದಾಗಿ ಒಂದು ವಾರದಲ್ಲಿ ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು ಒಂದು ಅಧ್ಯಯನ ಮತ್ತು ಕರ್ನಾಟಕದಲ್ಲಿ ಸಾಮ್ರಾಟ ಚೋಳರ ಮೂರು ಮಹಾ ಶಾಸನಗಳು ಪುಸ್ತಕಗಳು ಬಂದವು.
500 ಪುಟಗಳ ಇವರ ಪಿಹೆಚ್‌ಡಿ ನಿಬಂಧ ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು. ಮಾರ್ಗದರ್ಶಿ ಡಾ.ತಮಿಳ್ ಶೆಲ್ವಿ. ತುಮಕೂರು ತಾ. ತಾವರೆಕೆರೆಯಲ್ಲಿ ತಾ. ೨೩.೦೧.೧೯೪೩ರಂದು ಜನಿಸಿದ ಇವರು ಡಾಕ್ಟರೇಟ್ ಪಡೆದಿರುವುದು ತಾ.೬-೮-೨೦೨೩ರಲ್ಲಿ. ೮೦ರ ಇಳಿವಯಸ್ಸಿನಲ್ಲೂ ಅವರ ಓದು ಅಧ್ಯಯನ ನಮಗೂ ಮಾರ್ಗದರ್ಶಿ.
ಡಾ. ಬಸವರಾಜು ಕಲ್ಗುಡಿಯವರ ಅಭಿಪ್ರಾಯದಂತೆ ಚೋಳರ ಕುರಿತು ಕನ್ನಡದಲ್ಲಿ ಕೆಲಸ ಮಾಡಿದವರು ವಿರಳ. ದಕ್ಷಿಣ ಭಾರತ ಇತಿಹಾಸದಲ್ಲಿ ಚೋಳ ರಾಜಮನೆತನ ಬಹಳ ಪ್ರಸಿದ್ಧವಾದದ್ದು. ದಕ್ಷಿಣದಲ್ಲಿ ಶೈವ ಧರ್ಮದ ಪ್ರಾಬಲ್ಯ ಹೆಚ್ಚುವುದಕ್ಕೂ ಚೋಳ ರಾಜರ ಆಳ್ವಿಕೆಗೂ ಗಾಢ ಸಂಬಂಧವಿದೆ. ತಲಕಾಡು ಕೊಳ್ಳೆಗಾಲ ಚಾಮರಾಜನಗರ ಊಟಿನೀಲಗಿರಿ ಮೊದಲಾಗಿ ಚೋಳರ ಆಕ್ರಮಣ ವಿವರಗಳು ಶಾಸನಗಳಿಂದ ತಿಳಿಯುತ್ತದೆ. ರಾಷ್ಟ್ರಕೂಟ, ಚಾಲುಕ್ಯ, ಗಂಗರ ಆಳ್ವಿಕೆಯಲ್ಲಿ ಚೋಳರಿಗೂ ಇವರಿಗೂ ಸಾಕಷ್ಟು ಕದನಗಳಾಗಿವೆ.
ಚೋಳರ ಕುರಿತು ಅಧ್ಯಯನ ಮಾಡ ಹೊರಟ ಲೇಖಕರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಇವರ ಬಂಧು ದೊಮ್ಮನಕುಪ್ಪೆ ಅಯ್ಯನವರು ಎದುರು ಸಿಕ್ಕಾಗಲೆಲ್ಲ ಚೋಳರ ಬಗ್ಗೆ ಇತಿಹಾಸ ಬರೆಯಪ್ಪ. ಅವರನ್ನು ಚರಿತ್ರೆಕಾರರು ಕಡೆಗಣಿಸಿದ್ದಾರೆ.. ಎನ್ನುತ್ತಿದ್ದರಂತೆ.! ನನಗೆ ಚೋಳರ ಬಗ್ಗೆ ತಲೆ ಬುಡಗೊತ್ತಿರಲಿಲ್ಲ. ನನ್ನ ಕೆಲವು ಪದ್ಯಗಳು ಕಥೆಗಳು ಲೇಖನಗಳು ಅಂದಿನ ಗೋಕುಲ ತಾಯಿನಾಡು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು..
ಇವರ ಪ್ರಕಟಿತ ಕೃತಿಗಳು ಸಂಕ್ರಾಂತಿ ಕವನ ಸಂಕಲನ, ಯಾನ, ಮರಳುಗಾಡಿನಲ್ಲಿ ಒಂಟಿ ಸಲಗ, ಹರಿಶ್ಚಂದ್ರ, ದಮಯಂತಿ ಪರಿಣಯ ಪ್ರಸಂಗ, ಸಮುದ್ರಯಾನ, ರಾಜವಿಕ್ರಮ ಕಾದಂಬರಿಗಳು, ತಿಮ್ಮರಾಯನ ವಚನ ಇವು ಒಂದಿಷ್ಟು. ಇನ್ನೂ ಚೋಳರ ಕುರಿತಾದ ಐತಿಹಾಸಿಕ ಕಾದಂಬರಿಗಳು ಸುನಾಮಿ, ಚಂಡಮಾರುತ, ಜಲಪ್ರಳಯ, ಶಾಂತಸಾಗರ, ಮೇರು ಶಿಖರ, ಚೋಳ ವಿಜಯ.
ಓದು ಸಾಗಿದಂತೆ ಚೋಳರ ಬಗ್ಗೆ ಅಲ್ಲಿಷ್ಟು ಇಲ್ಲಿಷ್ಟು ಮಾಹಿತಿ ಲಭ್ಯವಾಗುತ್ತಿತ್ತು. ಆದರೂ ನನ್ನ ಆಸಕ್ತಿ ಸಾಮ್ರಾಟ ಚೋಳರ ಬಗ್ಗೆ ಕುದುರಲಿಲ್ಲ. ಇಲ್ಲಿಗೆ ಮರೆತು ಬಿಟ್ಟೆ.. ಪಾಪ, ಇವರು ಮರೆತರೂ ಚೇಳು ಕುಟುಕಿದಂತೆ ಚೋಳರು ಯಾರು? ಇವರ ಇತಿಹಾಸವೇನೆಂಬ ಗೊಂದಲದಲ್ಲಿ ಮುಳುಗಿರಲು ಎಂ.ಎ. ತರಗತಿಗೆ ಜ್ಞಾನ ಭಾರತಿಗೆ ಸೇರುತ್ತಾರೆ. ಅಲ್ಲಿ ತಾಳೆಗಿರಿ ಹಸ್ತಪ್ರತಿ ವಿಭಾಗದಲ್ಲಿದ್ದ ಅತ್ತಿಬೆಲೆ ಶಿವಣ್ಣನವರು ಚೋಳರ ಶಾಸನಗಳ ಬಗ್ಗೆ ಸಂಶೋಧನೆ ಮಾಡಿ ಎಂದು ಮತ್ತೂ ಹೇಳುತ್ತಾ ಇವರ ತಲೆ ಅತ್ತ ಓಡುವಂತೆ ಮಾಡುತ್ತಾರೆ. ಶಾಸನ ಅಧ್ಯಯನ ಕಷ್ಟ. ಕಲ್ಲು ಮುಳ್ಳು ತುಳಿಯಬೇಕು. ಪಾಳು ಬಿದ್ದ ದೇವಸ್ಥಾನ, ಹಾಳು ಬಿದ್ದ ಹೊಲಗದ್ದೆಗಳಲ್ಲಿ ಸುತ್ತಾಡಿ ಕಾಲು ಕೆಸರು ಮಾಡಿಕೊಳ್ಳಬೇಕು ಎಂದು ಗೆಳೆಯರು ಎದುರಿಸಿದರೂ ಈ ಹಾದಿಯಲ್ಲಿ ಸಾಗಿ ಬರೆದಿದ್ದೆ ನಮ್ಮ ಮುಂದಿರುವ ಕೃತಿ.
ಆ ವೇಳೆಗೆ ೨ ಮಕ್ಕಳ ತಂದೆ. ೧೯೭೬ರಲ್ಲಿ ಗ್ರಾಮಸುದ್ಧಿ ವಾರಪತ್ರಿಕೆ ಆರಂಭವಾಯ್ತು. ಅದರಲ್ಲಿ ಸಂಪಾದಕೀಯ ಮತ್ತು ದೇವಸ್ಥಾನಗಳ ಬಗ್ಗೆ ಪುಟ್ಟ ಲೇಖನ ಬರೆಯುತ್ತಿದ್ದೆ. ಶಾಸನಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ವಿಶ್ವಕೋಶ ವಿಷಯ ಕೋಶಗಳ ಬೆನ್ನು ಬಿದ್ದೆ. ಓದಿದೆ. ನಿದ್ದೆಗೆಟ್ಟು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಓದಿನಲ್ಲಿ ಮೈಮರೆತು ಸಂಸಾರ ಮರೆತು ಬಿಟ್ಟೆ. ಬಿಡಲಿಲ್ಲ ಅಷ್ಟೆ. ಅಂಧನಿಗೆ ಚೋಳರ ಇತಿಹಾಸ ಅರಿವಾಗಲು ಎಪ್ಪತ್ತು ವರ್ಷ ಬೇಕಾಯಿತು.. ಇದಿಷ್ಟು ಇವರ ಓದು ಅಧ್ಯಯನದ ಹೆಜ್ಜೆಗುರುತು.
ಕ್ರಿ.ಪೂ.೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಇವರನ್ನು ಸಂಗಮ್‌ಕಾಲದ ಚೋಳರೆಂದು ಗುರುತಿಸಿದೆ. ಕ್ರಿ.ಶ. ೪-೫ನೇ ಶತಮಾನದ ವೇಳೆಗೆ ಚೋಳರು ಕಂಚಿಯ ಪಲ್ಲವರ ಸಾಮಂತರಾಗಿ ಕ್ರಿ.ಶ.೮೫೦ರ ವೇಳೆಗೆ ಪ್ರಬಲರಾಗಿ ಮುಂದೆ ಪಲ್ಲವರನ್ನೇ ಸೋಲಿಸಿ ಅವರ ರಾಜಧಾನಿ ಕಂಚಿಯನ್ನು ಆಕ್ರಮಿಸಿ ತಮಿಳುನಾಡನ್ನು ಆಳುತ್ತಾರೆ. ತಂಜಾವೂರು ಇವರ ರಾಜಧಾನಿ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಮಳಖೇಡದ ರಾಷ್ಟ್ರಕೂಟರು ಹೆಚ್ಚು ಪ್ರಬಲರಾಗಿದ್ದು ಚೋಳರು ಅವರೊಂದಿಗೆ ವೈವಾಹಿಕ ಸಂಬಂಧ ಹೊಂದಿ, ಕಾಲಾಂತರದಲ್ಲಿ ಇವರ ನಡುವೆ ಒಡಕು ಮೂಡಿ ಕ್ರಿ.ಶ.೯೪೩ರಲ್ಲಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನು ಚೋಳರ ವಿರುದ್ಧ ಅರಕೋಣಂ ಸಮೀಪದ ತಕ್ಕೋಲಂನಲ್ಲಿ ತನ್ನ ಸಾಮಂತರೂ ಬಂಧುಗಳು ಆಗಿದ್ದ ತಲಕಾಡಿನ ಗಂಗರು ಮತ್ತು ಅವರ ಸಾಮಂತರು ಬಾಣರು, ನೊಳಂಬರ ನೆರವಿನಿಂದ ಯುದ್ಧ ಮಾಡಿ ಚೋಳರ ರಾಜಾದಿತ್ಯನನ್ನು ಕೊಂದವನು ಗಂಗರ ಬೂತುಗ. ಈ ಯುದ್ಧದ ಕಾರಣ ಮುಂದೆ ೨೪ ವರ್ಷ ಕಾಲ ಆ ಪ್ರದೇಶ ರಾಷ್ಟ್ರಕೂಟರ ಅಧೀನದಲ್ಲಿತ್ತು. ಮುಮ್ಮಡಿ ಕೃಷ್ಣನ ಆಳ್ವಿಕೆಯ ೧೦೬ ಶಾಸನಗಳು ಕ್ರಿ.ಶ.೯೪೩-೯೬೭ರ ಅವಧಿಯಲ್ಲಿ ತೊಂಡೈ ಮಂಡಲ ಪ್ರದೇಶದಲ್ಲಿ ಕಂಡುಬರುತ್ತದೆ. ಕ್ರಿ.ಶ.೯೬೭ರಲ್ಲಿ ಮುಮ್ಮಡಿ ಕೃಷ್ಣನು ಮರಣ ಹೊಂದಲು ರಾಷ್ಟ್ರಕೂಟ ಸಾಮ್ರಾಜ್ಯ ದುರ್ಬಲವಾಗಿ ಆ ಸಂದರ್ಭ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಚೋಳರ ಸಾರ್ವಭೌಮತ್ವ ಸ್ಥಾಪಿತವಾಗುತ್ತದೆ.
ಚೋಳರ ಕೇಂದ್ರ ಸ್ಥಾನ ತಮಿಳುನಾಡು ಆದರೂ ಅವರು ತಮ್ಮ ಸಾಮ್ರಾಜ್ಯವನ್ನು ಕರ್ನಾಟಕ ಆಂಧ್ರ ಕೇರಳ ರಾಜ್ಯಗಳಿಗೂ ವಿಸ್ತರಿಸಿದರು. ಚೋಳ ಸಂತತಿಯು ಕರಿಕಾಲಚೋಳನಿಂದ ಆರಂಭವಾಗುತ್ತದೆ. ೧ನೇ ರಾಜರಾಜಚೋಳ, ೧ನೇ ರಾಜೇಂದ್ರಚೋಳ, ಕುಲೋತ್ತುಂಗ ಚೋಳ ಮೊದಲಾದವರ ಕಾಲದಲ್ಲಿ ವಿಶಾಲ ಸಾಮ್ರಾಜ್ಯ ಬೆಳೆಯುತ್ತದೆ. ರಾಜರಾಜ ಚೋಳನು ಕರ್ನಾಟಕದ ಗಂಗವಾಡಿಯನ್ನು ಆಕ್ರಮಿಸಿದನು. ೧ನೇ ರಾಜೇಂದ್ರಚೋಳನ ಕಾಲದಲ್ಲಿ ಕರ್ನಾಟಕದ ಹಲವು ಪ್ರದೇಶಗಳು ಚೋಳ ಸಾಮ್ರಾಜ್ಯದೊಳಗೆ ಸೇರಿಕೊಂಡವು. ೧ನೇ ರಾಜರಾಜ ಕ್ರಿ.ಶ.೯೯೧ರಲ್ಲಿ ಬಾಣ ನೊಳಂಬಗಂಗರ ಮೇಲೆ ದಾಳಿ ಮಾಡಿಗೆದ್ದ ಪ್ರದೇಶಗಳಲ್ಲಿ ಚೋಳರು ಕನ್ನಡದಲ್ಲಿ ತಮ್ಮ ಶಾಸನಗಳನ್ನು ಹಾಕಿಸಿದರು. ಗಂಗರು ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರು ಹಾಗೂ ಹೊಯ್ಸಳರು ನಿರಂತರ ಚೋಳರ ಮೇಲೆ ಆಕ್ರಮಣ ನಡೆಸುತ್ತಲೇ ಬಂದು ಅಂತಿಮವಾಗಿ ಕ್ರಿ.ಶ.೧೧೧೬ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಸೋಲಿಸಿ ಅವರು ಗಂಗವಾಡಿ ನೊಳಂಬವಾಡಿ ಪ್ರಾಂತ್ಯಗಳಿಂದ ಕಾಲ್ತೆಗೆಯುವಂತೆ ಮಾಡುತ್ತಾನೆ.
ಕರ್ನಾಟಕ ಸಂಸ್ಕೃತಿಯ ಇತಿಹಾಸವನ್ನು ಅರಿಯುವಲ್ಲಿ ಶಾಸನಗಳು ಒಳ್ಳೆಯ ಆಕರಗಳು. ಚೋಳರ ಶಾಸನಗಳು ಪ್ರದಾನತ: ದಾನಶಾಸನಗಳು. ಬಹುಮಟ್ಟಿಗೆ ದೇವಾಲಯದ ಸಮೀಪದಲ್ಲೇ ಅವುಗಳು ಸ್ಥಾಪಿಸಿವೆ. ಅವುಗಳಲ್ಲಿ ಕೆಲವು ದಾನ ನೀಡಿದ್ದ ಹೊಲ ಕೆರೆಗಳ ಸಮೀಪದಲ್ಲಿವೆ. ವೀರಗಲ್ಲು, ಸ್ಮಾರಕ ಶಿಲೆಗಳ ಮೇಲಿನ ಶಿಲ್ಪಗಳು ಆ ಕಾಲದ ವೀರರ ಜೀವನ, ಶಿಲ್ಪಕಲೆ, ಭಾಷೆ ಲಿಪಿ ಇತ್ಯಾದಿಗಳ ಅಭಿವ್ಯಕ್ತಿಯನ್ನು ಮಾಡಿಕೊಡುತ್ತವೆ. ಕ್ರಿ.ಶ.೯೪೬ರಿಂದ ಕ್ರಿ.ಶ.೧೧೧೬ ವರೆಗಿನ ೧೭೦ ವರ್ಷಗಳ ಅವಧಿಯಲ್ಲಿ ದೊರಕಿರುವ ಸು.೭೧ ಚೋಳರ ಕನ್ನಡ ಶಾಸನಗಳು ತಮಿಳಿನ ೧೭೨ ಶಾಸನಗಳನ್ನು ಲೇಖಕರು ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಕ್ರಿ.ಶ.೯೮೫ರಲ್ಲಿ ಪಟ್ಟಕ್ಕೆ ಬಂದ ೧ನೇ ರಾಜರಾಜಚೊಳನ ಕಾಲದಲ್ಲಿ ಚೋಳರು ತಮ್ಮ ರಾಜ್ಯದ ಉತ್ತರದ ಕಡೆ ಆಕ್ರಮಣ ಮುಂದುವರಿಸಿ ದಕ್ಷಿಣ ಕರ್ನಾಟಕದ ಕೋಲಾರ, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಕೊಳ್ಳೆಗಾಲ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಹಾಸನ ಜಿಲ್ಲೆಗಳು, ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ಚಿತ್ತೂರು ಜಿಲ್ಲೆಗಳು, ತಮಿಳುನಾಡಿನ ಕೃಷ್ಣಗಿರಿ, ವೆಲ್ಲೂರು, ಸೇಲಂ, ಧರ್ಮಪುರಿ, ಕೊಯಮತ್ತೂರು ಇವೆಲ್ಲವೂ ಚೋಳರ ಆಡಳಿತಕ್ಕೊಳಪಟ್ಟಿದ್ದ ಪ್ರಾಂತ್ಯಗಳಾಗಿದ್ದವು. ಈ ಪ್ರದೇಶಗಳಲ್ಲಿ ದೊರೆತಿರುವ ಶಾಸನಗಳು ಅವರ ಕಾಲದಲ್ಲಿ ಬಹುಭಾಷೆ ಬಳಕೆಯಲ್ಲಿತ್ತು ಎಂಬುದನ್ನು ಸ್ಫಷ್ಟಪಡಿಸುತ್ತದೆ.
ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಅವರ ಶಾಸನಗಳು ಕಂಡು ಬರುತ್ತವೆ, ಅವರ ಆಡಳಿತದ ಘಟಕಗಳು ಯಾವುವು, ಚೋಳರು ಅವರ ಸಮಕಾಲೀನ ಅರಸರ ಹೋರಾಟ ಅಧ್ಯಾಯ ಮೂರರಲ್ಲಿ ವಿವರಿಸಿದೆ. ೫ರಲ್ಲಿ ಚೋಳರ ಶಾಸನಗಳನ್ನು ಪ್ರಮುಖವಾಗಿ ಸ್ಮಾರಕ ಶಾಸನಗಳು, ಮಾಸ್ತಿ ಕಲ್ಲುಗಳು, ವೀರಗಲ್ಲುಗಳು, ತುರುಕಾಳಗ. ನಿಸದಿ ಸ್ಮಾರಕಗಳು ಹೀಗೆ ವಿಂಗಡಿಸಿಕೊಂಡು ಅಧ್ಯಯನ ಮಾಡಿದ್ದಾರೆ. ಚೋಳರ ಕಾಲದ ಸಾಮಾಜಿಕ ವ್ಯವಸ್ಥೆ, ಜಾತಿ, ವರ್ಣ ವ್ಯವಸ್ಥೆ, ಸ್ತ್ರೀಯರ ಸ್ಥಾನಮಾನ, ಉಡುಗೆ ತೊಡುಗೆ, ಆಚರಣೆಗಳು, ಹಬ್ಬ ಹರಿದಿನ, ಉತ್ಸವಗಳು, ಶಿಕ್ಷಣ, ತಮಿಳು ಕನ್ನಡಿಗರ ಸಾಮರಸ್ಯ, ಆರ್ಥಿಕ, ಧಾರ್ಮಿಕ ಸ್ಥಿತಿಗತಿಗಳು, ಕಲೆ ವಾಸ್ತುಶಿಲ್ಪಕ್ಕೆ ಚೋಳರಕೊಡುಗೆ, ಚೋಳರ ದೇವಾಲಯಗಳು ಇತ್ಯಾದಿ ವಿಷಯಗಳು ಶಾಸನಗಳ ಅಧ್ಯಯನದಲ್ಲಿ ಚರ್ಚಿಸಿದ್ದಾರೆ. ಪುಸ್ತಕದ ವರ್ಣ ಛಾಯಾಚಿತ್ರಗಳು ಕಣ್ ಸಾಕ್ಷಿ ಒದಗಿಸಿವೆ.
ಬೆನ್ನುಡಿಯಲ್ಲಿ ಡಾ.ಪಿ.ವಿ.ಕೃಷ್ಣಮೂರ್ತಿಯವರು ಬರೆದಂತೆ ಡಾ.ತಾ.ನಂ.ಕು ನಮ್ಮ ನಾಡಿನ ಇತಿಹಾಸ ಸಂಸ್ಕೃತಿಗಳ ಬಗೆಗೆ ಅಪಾರ ಪ್ರೇಮವುಳ್ಳವರು. ಇವರು ಅನೇಕಲ್ ಪಟ್ಟಣದಲ್ಲಿ ನೆಲೆಸಿ ವಿದ್ಯಾದಾನ ಕೈಂಕರ್ಯದಲ್ಲಿ ತೊಡಗಿಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಓದು ಬರಹದ ಜೊತೆಗೆ ಶಾಸನ ಕ್ಷೇತ್ರಕಾರ್ಯದಲ್ಲಿ ತೊಡಗಿ ತಮ್ಮ ಜ್ಞಾನದಾಹದ ಉತ್ಕರ್ಷತೆ ಮೆರೆದಿದ್ದಾರೆ..
ಪುಸ್ತಕ ಓದಿ ಲೇಖಕರಿಗೆ ಪೋನಾಯಿಸಿದೆ. ಅನಂತರಾಜು, ಈ ಪುಸ್ತಕ ಹಾಸನದ ಹೇಮ ಗಂಗೋತ್ರಿ, ಯುನಿವರ್ಸಿಟಿ ಮೊದಲಾಗಿ ಪದವಿ ಕಾಲೇಜುಗಳಿಗೆ ಉಪಯುಕ್ತ. ಈಗಲೂ ನನಗೆ ಇತಿಹಾಸ ಪಠ್ಯದ ಉಪನ್ಯಾಸ ನೀಡುವ ಉತ್ಸುಕತೆ ಇದೆ. ನಾನು ಹಾಸನದತ್ತ ಬರುತ್ತೇನೆ. ಯಾವುದಾದರೂ ಡಿಗ್ರಿ ಕಾಲೇಜಿನಲ್ಲಿ ಗೆಸ್ಟ್ ಲೆಕ್ಚರಿಂಗ್‌ಗೆ ಪ್ರಾಂಶುಪಾಲರೊಂದಿಗೆ ಮಾತನಾಡಿ ಎಂದರು. ಅಬ್ಬಾ.! ಅವರ ಇಳಿವಯಸ್ಸಿನ ಉತ್ಸಾಹ ನಿಜಕ್ಕೂ ಶ್ಲಾಘನೀಯ.!
* ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನರಸ್ತೆ, ಹಾಸನ.