ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ‌ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮ- ಕೃಷ್ಣ ಬೈರೇಗೌಡ

ಜಕ್ಕೂರು ಕ್ರೀಡಾಂಗಣದಲ್ಲಿ ಎರಡು ದಿನಗಳ‌ ಕಾಲ ನಡೆದ ಕಾರ್ಯಕ್ರಮ

ಎರಡು ದಿನವೂ ಸದ್ದು ಮಾಡಿದ ಜನಪದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಕನಿಷ್ಠ 8 ಸಾವಿರಕ್ಕೂ ಅಧಿಕ ಜನ ಭಾಗಿ

ಜನರನ್ನು ಹುಚ್ಚೆದ್ದು ಕುಣಿಸಿದ ರಘು ದೀಕ್ಷಿತ್ ಕಾರ್ಯಕ್ರಮ

 

ಬೆಂಗಳೂರು: ಭೂಮಿ- ಪ್ರಕೃತಿಯನ್ನು ಆರಾಧಿಸುವ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿಯೇ ಸುಗ್ಗಿ-ಹುಗ್ಗಿ 2024 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಎರಡು ದಿನಗಳ ಕಾಲ ಜಕ್ಕೂರು ಕ್ರೀಡಾಂಗಣದಲ್ಲಿ ನಡೆದ ಸುಗ್ಗಿ-ಹುಗ್ಗಿ ಕಾರ್ಯಕ್ರಮದ‌ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ನಾವಿಂದು ಐಟಿ ಸಿಟಿ ಬೆಂಗಳೂರಿನಲ್ಲಿದ್ದೇವೆ. ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಈ ಕಾಂಕ್ರೀಟ್ ಕಾಡಿನಲ್ಲಿ ನೆಲೆಗೊಂಡಿದ್ದೇವೆ. ಆದರೆ, ನಮ್ಮ ಮೂಲ ಹಳ್ಳಿಗಳಲ್ಲಿವೆ ಎಂಬುದನ್ನು ನಾವು ಮರೆಯಬಾರದು” ಎಂದರು.

 

ನಗರ ಭಾಗದ ಇಂದಿನ ಮಕ್ಕಳಿಗೆ ನಮ್ಮ ಹಳ್ಳಿ ಹೇಗಿರುತ್ತೆ? ನಮ್ಮ ಹಳ್ಳಿಯ ಬದುಕಿನ ಖುಷಿ ಎಂತಾದ್ದು? ಭತ್ತ ರಾಗಿಯ ತೆನೆ ಹೇಗಿರುತ್ತದೆ? ಎಂಬ ಕುರಿತು ತಿಳುವಳಿಕೆ ಕಡಿಮೆ. ಹೀಗಾಗಿ ನಮ್ಮ ಮಕ್ಕಳಿಗೆ ಹಳ್ಳಿಯ ಬದುಕಿನ‌ ಶ್ರೀಮಂತಿಕೆಯನ್ನು ಪರಿಚಯಿಸುವ ಮತ್ತು ಆಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವೇ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಎಂದು ಅವರು ಅಭಿಪ್ರಾಯಪಟ್ಟರು.

ಸಂಕ್ರಾಂತಿ ಯಾವುದೇ ಧರ್ಮದ ಹಬ್ಬವಲ್ಲ ಬದಲಾಗಿ ಇದು ಮಣ್ಣಿನ ಹಬ್ಬ, ಎಲ್ಲಾ ರೈತರ ಹಬ್ಬ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕು. ಆ ಮೂಲಕ ನಮಗೆ ಅನ್ನ ನೀರು ಕೊಡುವ ಭೂಮಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.

 ಅಲ್ಲದೆ, ಈ ಉತ್ತರಾಯಣ ಎಲ್ಲರ ಬದುಕಲ್ಲೂ ಶಾಂತಿ ಸುಖ ಮತ್ತು ನೆಮ್ಮದಿ ನೀಡಲಿ.‌ ಎಲ್ಲರ ಬದುಕಲ್ಲೂ ಕತ್ತಲು ಸರಿದು ಬೆಳಕು ಹರಿಯಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶುಭ ಹಾರಿಸಿದರು.

 

ಸಮಾರಂಭದಲ್ಲಿ ಕಳೆದ‌ ಎರಡು ದಿನಗಳಿಂದ ರಂಗೋಲಿ, ಚಿತ್ರಕಲೆ ಹಾಗೂ ಜನಪದ ನೃತ್ಯ ಸ್ಫರ್ಧೆಯಲ್ಲಿ ಪಾಲ್ಗೊಂಡ ವಿಜೇತ ವಿದ್ಯಾರ್ಥಿಗಳು ಹಾಗೂ ನೃತ್ಯಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಸಮಾರೋಪ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಭೂಮ್ತಾಯಿ ಬಳಗ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಜನಪದ ಸಂಗೀತ ಕಾರ್ಯಕ್ರಮ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.

ಗಮನ ಸೆಳೆದ ಜನಪದ ನೃತ್ಯ ಕಾರ್ಯಕ್ರಮ

ಸುಗ್ಗಿ-ಹುಗ್ಗಿ 2024 ಕಾರ್ಯಕ್ರಮಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ 12 ಜನಪದ ನೃತ್ಯ ತಂಡ ನೀಡಿದ ಪ್ರದರ್ಶನ ಜನ ಗಮನ ಸೆಳೆಯಿತು.

 

ವೀರಗಾಸೆ, ಕಂಸಾಳೆ, ಹುಲಿ ಕುಣಿತ, ಸೋಮನ ಕುಣಿತ ಸೇರಿದಂತೆ ಎಲ್ಲಾ‌ 12 ಪ್ರಕಾರದ ಜನಪದ ನೃತ್ಯ ತಂಡಗಳನ್ನು ನಾಡಿನ‌ ಎಲ್ಲಾ ಮೂಲೆಗಳಿಂದಲೂ ಆಹ್ವಾನಿಸಲಾಗಿತ್ತು. ಉಪಾಂತ್ಯ ದಿನವಾದ ಭಾನುವಾರ ಬೆಳಗ್ಗಿನಿಂದಲೂ ಈ ತಂಡಗಳು ನೀಡಿದ ನೃತ್ಯ ಪ್ರದರ್ಶನ ನಗರ ಭಾಗದ ಜನರಿಗೆ‌‌ ಹೊಸ ಅನುಭವ ನೀಡಿತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top