ಕೋ-ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ

ಬೆಂಗಳೂರು : ಪ್ರತಿಷ್ಟಿತ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಐದು ದಶಕಗಳ ತನ್ನ ಯಶಸ್ವಿ ಸಾರ್ಥಕ ಸೇವೆ ಸವಿನೆನಪಿನಲ್ಲಿ ಇದೇ 23ರಂದು ಅರಮನೆ ಮೈದಾನದ ಕಿಂಗ್ಸ್‍ಕೋರ್ಟ್‍ನಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ. ಈ ಕುರಿತು ಬ್ಯಾಂಕ್ ಅಧ್ಯಕ್ಷರಾದ ಎಚ್.ಸಿ.ಗೋಪಾಲ್, ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿ, 2019ರಲ್ಲೇ ಬ್ಯಾಂಕ್‍ನ ಸುವರ್ಣ ಮಹೋತ್ಸವ ಸಮಾರಂಭ ಆಚರಣೆ ಮಾಡಬೇಕಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸಾಧ್ಯವಾಗದ ಕಾರಣ ಈಗ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಸಿದ್ದಗಂಗಾ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಗಂಗಾ ಸ್ವಾಮೀಜಿ 50 ವರ್ಷಗಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೆರವೇರಿಸಲಿದ್ದಾರೆ. ಬ್ಯಾಂಕ್‍ನ ಸಾಕ್ಷ್ಯಚಿತ್ರವನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆಗೊಳಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಸನ್ಮಾನಿತರಿಗೆ ನೆನಪಿನ ಕಾಣಿಕೆ ವಿತರಿಸಲಿದ್ದಾರೆ ಎಂದು ಹೇಳಿದರು. ಸಚಿವರಾದ ವಿ.ಸೋಮಣ್ಣ , ಕೆ.ಗೋಪಾಲಯ್ಯ, ಆರ್.ಮುನಿರತ್ನ, ಶಾಸಕರಾದ ಎಂ.ಕೃಷ್ಣಪ್ಪ , ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಸಹಕಾರಿ ಧುರೀಣ ಎಚ್.ಕೆ.ಪಾಟೀಲ್, ಮಾಜಿ ಶಾಸಕ ಪ್ರಿಯಕೃಷ್ಣ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಹಾಲು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ಸಹಕಾರ ಇಲಾಖೆ ಅಪರಧಿ ನಿಬಂಧಕ ವೈ.ಎಚ್.ಗೋಪಾಲಕೃಷ್ಣ, ಕೆ.ಎಸ್.ನವೀನ್, ಸಹಕಾರ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅರುಣ್‍ಕುಮಾರ್, ಸಹಕಾರ ಇಲಾಖೆಯ ಜಂಟಿ ನಿಬಂಧಕರಾದ ಅಶ್ವಥ್ ನಾರಾಯಣ್, ಲಕ್ಷ್ಮಿಪತಯ್ಯ, ನಿವೃತ್ತ ಐಎಎಸ್ ಅಧಿಕಾರಿ ಚಿಕ್ಕಣ್ಣ, ಅಭಿಮಾನಿ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್, ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಂಕ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಬ್ಯಾಂಕ್ ನಡೆದು ಬಂದ ದಾರಿ: 1969ರಲ್ಲಿ ಕೇವಲ 30 ಸದಸ್ಯರೊಂದಿಗೆ ಪ್ರಾರಂಭವಾದ ಸೊಸೈಟಿ ಕ್ರೆಡಿಟ್ ಸೊಸೈಟಿಯಾಗಿ ಕಾರ್ಯ ನಿರ್ವಹಿಸಿ ನಂತರದಲ್ಲಿ ಸಹಕಾರಿ ಬ್ಯಾಂಕ್ ಆಗಿ ಪರಿವರ್ತನೆಯಾಗಿ, ಮಾಗಡಿ ರಸ್ತೆಯಲ್ಲಿ ಕಾರ್ಯಾರಂಭ ಮಾಡಿ ಹಲವು ಏಳುಬೀಳುಗಳೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರಸ್ತುತ 14 ಸಾವಿರ ಸದಸ್ಯರು ಬ್ಯಾಂಕ್‍ನ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. 1969ರಲ್ಲಿ ಮಂದಗತಿಯಲ್ಲಿ ಪ್ರಾರಂಭಗೊಂಡು 20 ವರ್ಷಗಳ ಕಾಲ ಯಾವುದೇ ಪ್ರಗತಿ ಕಾಣದೇ ಶೋಚನೀಯ ಸ್ಥಿತಿಯಲ್ಲಿದ್ದ ಸಂಸ್ಥೆಯನ್ನು 1989ರಲ್ಲಿ ಸಿ.ಎಚ್.ಸುಬ್ಬೋಜಿರಾವ್ ಅಧ್ಯಕ್ಷರಾಗಿ ಹಾಗೂ ಸಿ.ರಾಮು ಕಾರ್ಯದರ್ಶಿಯಾಗಿ ನೇತೃತ್ವ ವಹಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿ ಬ್ಯಾಂಕ್‍ನ್ನು ಪ್ರಗತಿಪಥದತ್ತ ಕೊಂಡೊಯ್ದರು. ಮನೆ ಮನೆಗೆ ತೆರಳಿ ಬ್ಯಾಂಕ್‍ನ ಬಗ್ಗೆ ಪ್ರಚಾರ ಮಾಡಿ, ಠೇವಣಿ ಸಂಗ್ರಹಿಸಿ ಹೊಸ ಸದಸ್ಯರನ್ನು ಮಾಡಿಕೊಂಡು ಸಾಲ ವಿತರಣೆ ಆರಂಭಿಸಲಾಯಿತು. ಬ್ಯಾಂಕ್‍ನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹಾಲಿ ಶಾಸಕರು ಹಾಗೂ ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಕೊಡುಗೆ ಅಪಾರವಾದದ್ದು. ಬ್ಯಾಂಕ್‍ನ ಹಾಲಿ ಅಧ್ಯಕ್ಷರಾದ ಎಚ್.ಸಿ.ಗೋಪಾಲ್ ಅಧ್ಯಕ್ಷತೆಯಲ್ಲೂ ಕೂಡ ಬ್ಯಾಂಕ್ ಯಶಸ್ವಿನ ಹಾದಿಯಲ್ಲಿ ಸಾಗುತ್ತಿದ್ದು, ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೋವಿಡ್-19 ಮಹಾಮಾರಿ ಸಮಯದಲ್ಲೂ ಸಾಲ ವಸೂಲಾತಿಯನ್ನು ಗಣನೀಯವಾಗಿ ಮಾಡಿ ಎಸ್.ಪಿ.ಎ ಪ್ರಮಾಣವನ್ನು ಕಡಿಮೆ ಮಾಡಿ 2020-21ನೇ ಸಾಲಿಗೆ ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ನೀಡುವಲ್ಲಿ ಯಶಸ್ವಿಯಾಗಿದೆ.

ಬ್ಯಾಂಕ್‍ನ ಎಲ್ಲಾ ಶಾಖೆಗಳಲ್ಲಿ ಭದ್ರತಾ ಕಪಾಟುಗಳ ಸೌಲಭ್ಯ, ಸಿಬಿಎಸ್ ತಂತ್ರಜ್ಞಾನ ಅಳವಡಿಕೆ, 5 ಲಕ್ಷದವರೆಗಿನ ಠೇವಣಿಗೆ ವಿಮಾ ಸೌಲಭ್ಯ, ಎಸ್‍ಎಂಎಸ್ ಸೇವೆ, ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸದಸ್ಯರಿಗೆ ಠೇವಣಿ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ, ಆರ್‍ಟಿಜಿಎಸ್, ಎನ್‍ಇಎಫ್‍ಟಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಜಯನಗರದಲ್ಲಿ ಪ್ರಧಾನ ಕಚೇರಿ, ಮೂಡಲಪಾಳ್ಯ, ಮಹಾಲಕ್ಷ್ಮಿಪುರಂ, ರಾಜರಾಜೇಶ್ವರಿನಗರ, ಸುಂಕದಕಟ್ಟೆಗಳಲ್ಲಿ ನಾಲ್ಕು ಶಾಖೆಗಳನ್ನು ಬ್ಯಾಂಕ್ ಹೊಂದಿದೆ. 28ಕೋಟಿ ಷೇರು ಬಂಡವಾಳ, , 1200 ಕೋಟಿ ಠೇವಣಿ, 140 ಕೋಟಿ ಆಪತ್ ನಿಧಿ ಮತ್ತು ಇತರೆ ನಿಧಿಗಳು, 512 ಕೋಟಿ ರೂ. ಸಾಲ ವಿತರಣೆ, 819 ಕೋಟಿ ಹೂಡಿಕೆಗಳು ಸೇರಿದಂತೆ 1450 ಕೋಟಿ ವಹಿವಾಟು ನಡೆಸುತ್ತಿರುವ ಬ್ಯಾಂಕ್ 15 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿಎಸ್ ಕನ್ಯಾಕುಮಾರಿ, ನಿರ್ದೇಶಕರುಗಳಾದ ಡಾ ಪಿಎಲ್ ವೆಂಕಟೇಶಮೂರ್ತಿ, ಜಿ ಸಿದ್ದಪ್ಪ, ಎಮ್. ಜಯರಾಮ್, ಕೆ .ಜಯರಾಮು, ಎಸ್ ಚಂದ್ರಮೌಳಿ, ಟಿ .ಆರ್ ಸ್ವಾಮಿ, ಆರ್ ಸಂತೋಷ್, ಚಂದ್ರಕಲಾ. ಕೆ, ಎಂ.ಟಿ ವೀರಣ್ಣಗೌಡ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

Translate »
Scroll to Top