ಬಿಜೆಪಿ ಸರ್ಕಾರದಂತೆಯೇ ರೈತರಿಗೆ ಪರಿಹಾರ ನೀಡಿ, ಇಲ್ಲ ಕುರ್ಚಿ ಬಿಡಿ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

ಮನಮೋಹನ್‌ ಸಿಂಗ್‌ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ಕಾಂಗ್ರೆಸ್‌ ತಿಳಿಸಲಿ

 ಮೋದಿ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ನಾನು ತಿಳಿಸುವೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು

ರೈತರ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕೋಲಾರ : ಬರ ಮತ್ತು ನೆರೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮೂರು, ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಿತ್ತು. ಅದೇ ಮಾನದಂಡದಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಕೋಲಾರದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಟಿ ಯಲ್ಲಿ ಆರ್‌.ಅಶೋಕ ಮಾತನಾಡಿದರು.

 

ಬರಗಾಲ ಬಂದು ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನ ಕಳೆದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಪರಿಹಾರಕ್ಕೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇದೆ. ಆದರೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ 1 ಸಾವಿರ ಕೋಟಿ ರೂ. ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ ಎನ್ ಡಿ ಆರ್ ಎಫ್ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಮೂರು ಸಾವಿರ ಕೋಟಿ ರೂ. ಗೂ ಅಧಿಕ ಪರಿಹಾರವನ್ನು ಒಂದೇ ತಿಂಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದೆವು. ಕೇಂದ್ರ ಸರ್ಕಾರ ಆಗಲೂ ತಡವಾಗಿ ನಮ್ಮ ಪಾಲಿನ ಹಣ ನೀಡಿತ್ತು. ಕೇಂದ್ರ ಸರ್ಕಾರ ಯಾವಾಗಲೂ ದೇಶವ್ಯಾಪಿ ಪರಿಹಾರ ನೀಡುತ್ತದೆ. ಅದು ನಿಗದಿತ ಪ್ರಕ್ರಿಯೆ ಪ್ರಕಾರವೇ ನಡೆಯುತ್ತದೆ. ಹೀಗಾಗಿ ಯಾವುದೇ ಪಕ್ಷವಿದ್ದರೂ ಸಹಜವಾಗಿಯೇ ತಡವಾಗುತ್ತದೆ ಎಂದರು.

ಏಳು ತಾಸು ಮೂರು ಫೇಸ್ ಕರೆಂಟ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದರು. ಆದರೆ ಮೂರು ತಾಸು ನೀಡುತ್ತಿಲ್ಲ. ನಿರಂತರವಾಗಿ ವಿದ್ಯುತ್‌ ಕಡಿತ ಮಾಡುತ್ತಿದ್ದು, ಅದನ್ನು ರಿಪೇರಿ ಕೆಲಸ ಎಂದು ತೇಪೆ ಹಚ್ಚಲಾಗುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ. ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಲು ಮಾತ್ರ ಇವರಿಗೆ ಹಣವಿದೆ. ರೈತರಿಗೆ ಹಣ ಕೊಡಿ, ಇಲ್ಲ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆ ಬಳಿಕ ಎಲ್ಲ ಗ್ಯಾರಂಟಿಗಳು ಗೋವಿಂದ ಆಗಲಿದೆ. ಮೂಗಿಗೆ ತುಪ್ಪ ಸವರಲು ತಿರುಗಿಬಿದ್ದ ಕಾಂಗ್ರೆಸ್‌ ಶಾಸಕರಿಗೆ ಅನುಕೂಲ ಮಾಡಲಾಗುತ್ತಿದೆ. ಕೆಲವು ಶಾಸಕರು ಬಿಟ್ಟು ಹೋಗುತ್ತಾರೆ ಎಂದು ತಿಳಿದುಬಂದಿರುವುದರಿಂದ ಹೈಕಮಾಂಡ್‌ ಈ ರೀತಿ ನಾಟವಾಡುತ್ತಿದೆ ಎಂದರು.

 

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸಲು ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆ. ರಾಮ ಸೇವಾ ಸಮಿತಿಯವರು ಹಣ ಸಂಗ್ರಹಿಸಿ ಸ್ತಂಭ ಅಳವಡಿಸಿದ್ದಾರೆ. ಇದನ್ನು ಸರ್ಕಾರ ಮಾಡಿಕೊಟ್ಟಿಲ್ಲ. ಅದನ್ನು ಆಂಜನೇಯನ ದೇವಸ್ಥಾನದ ಮುಂಭಾಗ ಅಳವಡಿಸಲಾಗಿದೆ. ಹಿಂದೆಯೂ ಹನುಮನ ಧ್ವಜ ಹಾರಿಸಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಎಟಿಎಂನಂತೆ  ಲೂಟಿ ಮಾಡುತ್ತಿದೆ. ಅಧಿಕಾರಿಗಳು ಲಂಚ ತಿನ್ನುತ್ತಿದ್ದು, ನಮಗೆ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೊಟ್ಟರೆ ಇಂಥವರನ್ನು ಐದು ನಿಮಿಷದಲ್ಲಿ ಎತ್ತಂಗಡಿ ಮಾಡುತ್ತೇವೆ ಎಂದರು.

ಭಿಕ್ಷೆ ತಗೊಳಿ

ಪ್ರತಿ ರೈತರಿಗೆ ಸರ್ಕಾರ 25 ಸಾವಿರ ರೂ. ಪರಿಹಾರ ನೀಡಬೇಕು. ಪಾಪರ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಾವೇ ಹಣ ಕೊಡುತ್ತೇವೆ. ನಮ್ಮ ರೈತರಿಂದಲೇ ನೀವು ಭಿಕ್ಷೆ ಪಡೆಯಿರಿ. ಎಲ್ಲ ರೈತರೇ ಸರ್ಕಾರಕ್ಕೆ 2 ಸಾವಿರ ರೂ. ನೀಡುತ್ತಾರೆ. ಇಂತಹ ಸ್ಥಿತಿಗೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆರ್.ಅಶೋಕ ಆಕ್ರೋಶ ಹೊರಹಾಕಿದರು.

ಬಹಿರಂಗ ಸವಾಲು

 ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಇದ್ದಾಗ ಎಷ್ಟು ಕಿಲೋಮೀಟರ್‌ ರೈಲ್ವೆ ಬಂದಿದೆ, ಹೆದ್ದಾರಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ನವರು ತಿಳಿಸಲಿ, ನಾನು ನರೇಂದ್ರ ಮೋದಿಯವರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು ತಿಳಿಸುತ್ತೇನೆ. ಈ ಕುರಿತು ಬಹಿರಂಗ ಸವಾಲು ಹಾಕುತ್ತೇನೆ ಎಂದು ಆರ್.ಅಶೋಕ ಹೇಳಿದರು.

 

ರಾಮ ಮಂದಿರ ಕಟ್ಟುವುದು ಬಿಜೆಪಿಯ ಪ್ರಣಾಳಿಕೆಯಲ್ಲೇ ಇದೆ. ಕಾಂಗ್ರೆಸ್‌ಗೆ ರಾಮ ಆಯಿತು, ಈಗ ಆಂಜನೇಯನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಅಭಿವೃದ್ಧಿಯನ್ನೇ ಹೇಳುತ್ತೇವೆ ಎಂದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top