ಮರಿಯಮ್ಮನಹಳ್ಳಿ: ಕಸ ಎತ್ತುವ ವಾಹನಗಳಿಂದ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುವುದು. ಪಟ್ಟಣವನ್ನು ಸ್ವಚ್ಛವಾಗಿಡುವುದು ಇದರ ಉದ್ದೇಶ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಹೇಳಿದರು. ಅವರು ಕಳೆದ 4 ದಿನಗಳಿಂದ ವಾರ್ಡುಗಳಿನ ನಿವಾಸಿಗಳಿಗೆ ತಮ್ಮ ಸುತ್ತ, ಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಆರೋಗ್ಯವಾಗಿರಬೇಕೆಂದು ಸಲಹೆ ಮಾಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.

ಮನೆ–ಮನೆಯಿಂದ ಕಸ ಸಂಗ್ರಹಿಸುವ ಯೋಜನೆಯ ಭಾಗವಾಗಿ ಘನತ್ಯಾಜ್ಯ ವಿಲೇವಾರಿಗಾಗಿ ಪಟ್ಟಣ ಪಂಚಾಯತಿಯಿಂದ ನೂತನ 4 ವಾಹನಗಳಲ್ಲಿ ಪ್ರತಿ ಮನೆ- ಮನೆ ಬಾಗಿಲಿಗೆ ಹಸಿಕಸ – ಒಣಕಸ ವಿಲೇವಾರಿ ವಾಹನ ಹೋಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಬಳಸುವ ವಾಹನಗಳ ಚಾಲಕರು ಕಡಿಮೆಯಿದ್ದು, ಅವುಗಳಿಂದ ತ್ಯಾಜ್ಯ ವಿಲೇವಾರಿ ಮಾಡುವುದು. ಪಟ್ಟಣದಲ್ಲಿ ಒಟ್ಟು 4 ವಾಹನಗಳು ಇದ್ದು 18 ವಾರ್ಡುಗಳಿಗೆ ಮನೆ ಮನೆ ಕಸ ಸಂಗ್ರಹದ ಕಾರ್ಯ ನಡೆಸುತ್ತಿದ್ದೆವೆ. ಮೂರು ಟಾಟಾ ಏಸ್ ಆಟೋಲಿಫ್ಟ್ ವಾಹನಗಳು ಕಾರ್ಯಾಚರಿಸುತ್ತಿವೆ. ಜತೆಗೆ ಒಂದು ಟ್ರಾಕ್ಟರ್ ಕಸದ ವಿಲೇವಾರಿ ವಾಹನ ಕೂಡ ಇದೆ. ಖಾಲಿ ನಿವೇಶನಗಳನ್ನು ಶುಚಿಯಾಗಿಟ್ಟುಕೊಳ್ಳದ ಮಾಲೀಕರು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನು ಅನುಷ್ಠಾನಕ್ಕೆ ಸಹಕರಿಸಿದವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಾರ್ವಜನಿಕ ಸ್ಥಳಗಳು, ಖಾಸಗಿ ಜಾಗಗಳಲ್ಲೂ ಕಸ ಹಾಕಬಾರದು. ವಾಹನಗಳಿಂದ ಕಸ ಎಸೆಯಬಾರದು. ನಿಷೇಧಿತ ಪ್ಲಾಸ್ಟಿಕ್ ಚೀಲ,ವಸ್ತುಗಳನ್ನು ಮಾರಾಟ ಮತ್ತು ಬಳಕೆ ಮಾಡಬಾರದು. ಕಸ ಸಂಗ್ರಹಿಸುವ ವಾಹನವು ಬರುವ ವೇಳೆಯಲ್ಲಿ ನೀವು(ಸಾರ್ವಜನಿಕರು) ಮನೆಯಲ್ಲಿ ಇಲ್ಲದಿದ್ದರೆ ಕಸದ ಬುಟ್ಟಿಗಳನ್ನು ಯಾವ ಪ್ರಾಣಿಗಳಿಗೂ ಎಟುಕದಂತೆ ಸುರಕ್ಷಿತ ಸ್ಥಳದಲ್ಲಿ ಇರಿಸಿ, ಮುಂಚಿತವಾಗಿ ಪೌರಕಾರ್ಮಿಕರಿಗೆ ಮಾಹಿತಿ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಕ್ರುದೀನ್ ರವರು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿಯ ಆರೋಗ್ಯ ನಿರೀಕ್ಷಕಿ ಲತಾ, ಶಾಸ್ತ್ರೀ, ಜಗದೀಶ್, ಮತ್ತು ಪ.ಪಂ.ಸಿಬ್ಬಂದಿಗಳಿದ್ದರು.