ಬೆಂಗಳೂರು : ಎವರೆಸ್ಟ್ ಶಿಖರ ಏರಲು ದೇಹದ ಸಾಮರ್ಥ್ಯ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ನನ್ನ ದೃಷ್ಟಿಯಲ್ಲಿ ದೇಹದ ಸಾಮರ್ಥ್ಯ ಶೇ.40 ಮಾತ್ರ. ಶೇ.60 ರಷ್ಟು ಮಾನಸಿಕ ದೃಢತೆ ಮುಖ್ಯ. ಮನಸ್ಸು ಗಟ್ಟಿ ಇಲ್ಲ ಎಂದರೆ ದೇಹದ ಸಾಮರ್ಥ್ಯ ಲೆಕ್ಕಕ್ಕೆ ಬರುವುದಿಲ್ಲ ಎಂದು ಡಾ. ಉಷಾ ಹೆಗಡೆ ಹೇಳಿದ್ದಾರೆ.
ಅವರು ನಗರದಲ್ಲಿ ಆರ್ಕಿಟೆಕ್ಟ್ ಮತ್ತು ಪರ್ವತಾರೋಹಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರದ ನಡುವೆ ಪತ್ರಕತರೊಂದಿಗೆ ಮಾತನಾಡಿದ ಅವರು ತಮ್ಮ ಎವರೆಸ್ಟ್ ಪರ್ವತಾರೋಹಣದ ಅನುಭವವನ್ನು ಹಂಚಿಕೊಂಡರು. ಅವರು ಒಟ್ಟಾರೆ ಹೇಳಿದ್ದಿಷ್ಟು: ಅಟ್ಟಕ್ಕೆ ಹಾರದವಳು ಬೆಟ್ಟಕ್ಕೆ ಹಾರುವಳೆ ಎಂಬುದು ಗಾದೆ. ಅದನ್ನು ಸುಳ್ಳಾಗಿಸಿದವರು ಮೈಸೂರಿನ ಕನ್ನಡತಿ ಜೆಎಸ್‌ಎಸ್ ದಂತವೈದ್ಯಕೀಯ ಕಾಲೇಜಿನ ಡಾ. ಉಷಾ ಹೆಗಡೆ. ಪ್ರತಿದಿನ ಚಾಮುಂಡಿಬೆಟ್ಟವನ್ನು ಬೆನ್ನ ಮೇಲೆ 14 ಕೆಜಿ ಹೊರೆ ಹೊತ್ತು ಹತ್ತಿ ಇಳಿದು ಬರುತ್ತಿದ್ದವರು. ಮೇ ತಿಂಗಳಲ್ಲಿ ಜಗತ್ತಿನ ತುತ್ತ ತುದಿಯಲ್ಲಿರುವ ಸಮುದ್ರ ಮಟ್ಟದಿಂದ 29,031 ಅಡಿ ಎತ್ತರದಲ್ಲಿರುವ ಎವರೆಸ್ಟ್ ಶಿಖರವನ್ನು ಏರಿ ಬಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮಲ್ಲಿ ಇವರ ಸಾಹಸಕ್ಕೆ ಬೆಲೆ ಇಲ್ಲ. ಅದೇನು ಮಹಾ ಎಂದು ಮೂಗು ಮುರಿಯುವವರೇ ಹೆಚ್ಚು. ಉಷಾ ಜನರ ಅಭಿಪ್ರಾಯಗಳಿಗೆ ಎಂದೂ ಕಿವಿ ಕೊಟ್ಟವರಲ್ಲ. ತಮ್ಮ ಗುರಿ ಎವರೆಸ್ಟ್ ಶಿಖರ ಏರುವುದು. ಅದನ್ನು ಸಾಧಿಸುವುದಷ್ಟೇ ಮುಂದಿರುವ ಗುರಿ ಎಂದು ಭಾವಿಸಿ ಅದಕ್ಕಾಗಿ ಕಳೆದ 3 ವರ್ಷಗಳಿಂದ ಸತತ ಪರಿಶ್ರಮ ಪಟ್ಟವರು. ಹಲವು ಯುವಕ- ಯುವತಿಯರು ಚಾರಣವನ್ನು ಹವ್ಯಾಸವಾಗಿ ಕೈಗೊಂಡಿರುತ್ತಾರೆ. ಅದು ಅವರಿಗೆ ಮೋಜಿನ ತಾಣ. ಆದರೆ ಹಿಮಾಲಯದ ತಪ್ಪಲಿನಲ್ಲಿ ಈ ರೀತಿ ಮೋಜು ಮಾಡಲು ಬರುವುದಿಲ್ಲ. ಹಿಮಾಲಯ ಹತ್ತುವ ಮುನ್ನ 1 ತಿಂಗಳು ಬೇಸ್ ಕ್ಯಾಂಪ್‌ನಲ್ಲಿರಬೇಕು. ಅಲ್ಲಿಯ ಹವಾಮಾನಕ್ಕೆ ದೇಹ ಮನಸ್ಸು ಹೊಂದಿಕೊಳ್ಳಬೇಕು. ದೇಹದಾರ್ಡ್ಯತೆ ಇರುವವರೆಲ್ಲ ಎವರೆಸ್ಸ್ ಹತ್ತಲು ಸಾಧ್ಯವಿಲ್ಲ. ದೈಹಿಕ ಬಲ ಶೇ. 40 ಮಾತ್ರ. ಉಳಿದ ಶೇ.60 ಮನೋಬಲ. ಅದಿಲ್ಲದಿದ್ದಲ್ಲಿ ಏನೂ ಮಾಡಲು ಆಗುವುದಿಲ್ಲ. ಎವರೆಸ್ಟ್ ಶಿಖರದತ್ತ ಹೆಜ್ಜೆ ಹಾಕುತ್ತಿದ್ದಂತೆ ಧಾರ್ಮಿಕ ಮನೋಭಾವ ತಂತಾನೇ ಬಂದು ಬಿಡುತ್ತದೆ. ನಿಸರ್ಗದ ಮುಂದೆ ಮನುಷ್ಯ ತೃಣ ಸಮಾನ ಎಂಬುದು ತಿಳಿಯುತ್ತದೆ. ನಾನು ಬಿಟ್ಟರೆ ಮೂರುಲೋಕ ಇಲ್ಲ ಎಂದು ಹೇಳುವವರು ಮೊದಲು ಹಿಮಾಲಯದ ತಪ್ಪಲಿಗೆ ಹೋಗಿ ನಿಲ್ಲಬೇಕು. ಮೃತ್ಯು ನಿಮ್ಮ ಕಣ್ಣಮುಂದೆ ನಿಂತಿರುತ್ತಾನೆ. ಪ್ರತಿ ಕ್ಷಣವೂ ನಿಮ್ಮ ಉಸಿರಾಟ ನಿಮಗೇ ಕೇಳಿಸುತ್ತದೆ. ಎವರೆಸ್ಟ್ ಮುಂದೆ ಯಾವ ಶಕ್ತಿಯೂ ನಿಲ್ಲುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ ಎಂದು ಉಷಾ ಹೇಳಿದಾಗ ಅದರಲ್ಲಿ ಉತ್ಪೇಕ್ಷೆ ಏನೂ ಇಲ್ಲ ಎಂಬುದು ಅವರು ತಂದಿರುವ ಫೋಟೋಗಳೇ ಹೇಳುತ್ತವೆ.
ಮೈಸೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು.ಪ್ರತಿದಿನ ಪ್ರಾಣಾಯಾಮ. ಶೂನ್ಯದಲ್ಲಿರುವ ವಾತಾವರಣ. ಅದಕ್ಕೆ ಉಷಾ ಹೊಂದಿಕೊಂಡಿದ್ದರಿಂದಲೇ ಅವರಿಗೆ ಪರ್ವತಾರೋಹಣ ನೀರು ಕುಡಿದಷ್ಟು ಸುಲಭ. ಅದಕ್ಕೆ ಅವರ ಜಿತ ಮನಸ್ಸು ಕಾರಣ. ಎವರೆಸ್ಟ್ ಶಿಖರವನ್ನು ನೇಪಾಳಿಗಳು `ಸಾಗರಮಾತ ‘ಎಂದು ಕರೆಯುತ್ತಾರೆ. ಆ ಮಾತೆಯ ಅನುಗ್ರಹ ಇಲ್ಲದೆ ಯಾರೂ ಶಿಖರ ತಲುಪುವುದಕ್ಕೆ ಆಗುವುದಿಲ್ಲ. ಒಟ್ಟು 45 ದಿನಗಳ ಪರಿಶ್ರಮ ಒಂದು ತಪಸ್ಸು ಇದ್ದಂತೆ. ಹಗಲು ಇರುಳು ಲೆಕ್ಕಕ್ಕೆ ಬರುವುದಿಲ್ಲ.
ಡಾ. ಉಷಾ ತಮ್ಮ ಪಯಣವನ್ನು ಆರಂಭಿಸಿದ್ದು ಮೇ 13, 2024 ರಾತ್ರಿ 11.30. ಬೇಸ್ ಕ್ಯಾಂಪ್‌ನಿಂದ ಪಯಣ ಅರಂಭ. ಮೊದಲ ಕ್ಯಾಂಪ್ ತಲುಪಲು 8 ಗಂಟೆ ಸತತ ನಡಿಗೆ. `ಖುಂಬ ಹಿಮಾವೃತ ಪ್ರದೇಶ’ ದಾಟುವುದು ಎಂದರೆ ಯಮನ ದವಡೆಯಿಂದ ಹೊರಬಂದAತೆ. ಮೊದಲ ಕ್ಯಾಂಪ್‌ನಲ್ಲಿ ರಾತ್ರಿ ವಿರಾಮ. ಎರಡನೇ ಕ್ಯಾಂಪ್‌ನಲ್ಲಿ ಎರಡು ರಾತ್ರಿ ವಿಶ್ರಾಂತಿ. ಮೂರನೇ ಕ್ಯಾಂಪ್‌ನಲ್ಲೂ ರಾತ್ರಿ ಕಳೆದ ಮೇಲೆ ೪ ನೇ ಕ್ಯಾಂಪ್‌ನತ್ತ ಹೆಜ್ಜೆ ಹಾಕಬೇಕು. 9 ಗಂಟೆಗಳ ಸತತ ಚಾರಣ. ಕೊನೆಗೆ ಮೇ 18 ರಂದು ಸಂಜೆ 6 ಗಂಟೆಗೆ ಶಿಖರದ ಹತ್ತಿರ ಹೋಗಲು ಸಾಧ್ಯವಾಯಿತು. ಸುದೈವದಿಂದ ಹವಾಮಾನ ಕೂಡ ಅನುಕೂಲವಾಗಿತ್ತು. ಮೇ 19 ರಂದು ಬೆಳಗ್ಗೆ 6.30ಕ್ಕೆ ಶಿಖರದ ಮೇಲೆ ನಿಂತು ರಾಷ್ಟ್ರಧ್ವಜವನ್ನು ಹಿಡಿಯುವ ಕ್ಷಣ ಬಂದೇ ಬಿಟ್ಟಿತ್ತು. ಡಾ. ಉಷಾಅವರ ಸತತ 12 ಗಂಟೆಗಳ ಪರಿಶ್ರಮ ಕೊನೆಗೂ ಫಲ ನೀಡಿತ್ತು. ಆ ಸುಂದರ ಕ್ಷಣದಲ್ಲಿ ಪಕ್ಕದಲ್ಲಿದ್ದವರು ಫುರ್‌ಬಾ ಶೆರ್ಪಾ ನೇಪಾಳಿ. ಅವರ ನೆರವು ಇಲ್ಲದಿದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ.
ಎವರೆಸ್ಟ್ ಶಿಖರ ಏರಲು 5 ದಿನ, ಇಳಿಯಲು 3 ದಿನ ಬೇಸ್ ಕ್ಯಾಂಪ್‌ನಲ್ಲಿ ಹವಾಮಾನ ಉತ್ತಮವಾಗಲು 13 ದಿನ ಕಾಯಬೇಕು. ಡಾ. ಉಷಾಅವರಿಗಿಂತ ಮೊದಲು ಸೇನೆಯಲ್ಲಿದ್ದ ಕ್ಯಾಪ್ಟನ್ ಸ್ಮಿತಾ ಲಕ್ಷ್ಮಣ್ ತಮ್ಮ ತಂಡದೊಂದಿಗೆ ಎವರೆಸ್ಟ್ ಹತ್ತಿದ್ದರು. ಅವರು ಕೂಡ ಕನ್ನಡಿಗರು. ಉಷಾ ಅವರಿಗೆ ಲ್ಹೇ, ಲಡಾಖ್ ತವರು ಮನೆ ಇದ್ದಂತೆ. ಈಗ ಅವರಿಗೆ 52 ವರ್ಷ. ಪತಿ ಕೂಡ ವೈದ್ಯರು. ಇಬ್ಬರು ಗಂಡು ಮಕ್ಕಳು ಕೂಡ ವೈದ್ಯಕೀಯ ವೃತ್ತಿಯನ್ನು ಒಪ್ಪಿಕೊಂಡವರು.