ಎಲ್ಲಾ ಹಬ್ಬಗಳಿಗೆ ಮುನ್ನುಡಿ ಈ ನಾಗರ ಪಂಚಮಿ: ಹಬ್ಬದ ಮಹತ್ವ ಹಾಗೂ ಐತಿಹ್ಯ
ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ , ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.
ಶ್ರಾವಣ ಮಾಸ ಆರಂಭವಾಗುತ್ತಿದಂತೆ ಕರ್ನಾಟಕದಲ್ಲಿ ಹಬ್ಬಗಳ ಸಂಭ್ರಮ ನೋಡುವುದೇ ಆನಂದ. ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೂ ಕೂಡ.
ನಾಗರ ಪಂಚಮಿ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಜನಪದರು ಮೂರು ದಿನಗಳ ಕಾಲ ಪಂಚಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ನಾಗರ ಅಮಾವಾಸ್ಯೆ, ಚೌತಿ ಮತ್ತು ಪಂಚಮಿ ಎಂಬ ಆಚರಣೆಗಳು ನಡೆದುಕೊಂಡು ಬಂದಿವೆ.
ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.
ನಾಗರ ಪಂಚಮಿ ಮಹತ್ವ:
ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ-ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ಎಂಬುದು ಭಕ್ತರ ನಂಬಿಕೆ.
ನಾಗರ ಪಂಚಮಿ ವಿಶೇಷ ಆಚರಣೆ:
ನಾಗಪ್ಪನ ನೈವೇದ್ಯಕ್ಕಾಗಿ ಅರಳು, ಅರಳಿಟ್ಟು, ತಂಬಿಟ್ಟು, ವಿಧ ವಿಧದ ಉಂಡಿ, ಚಕ್ಕಲಿಗಳನ್ನು ತಯಾರಿಸುತ್ತಾರೆ. ನಾಗರ ಅಮಾವಾಸ್ಯೆಯ ದಿನ ಹಣತೆಯ ಪೂಜೆ ಮಾಡಲಾಗುತ್ತದೆ. ನಾಗಚೌತಿಯ ದಿನ ಹುತ್ತವನ್ನು ಪೂಜಿಸಿ, ಅದೇ ಮಣ್ಣಿನಿಂದ ನಾಗಪ್ಪನನ್ನು ಮಾಡಿ ಹೊಸ ಮಡಕೆಯೊಂದರಲ್ಲಿ ಕುಂಬಳದ ಎಲೆಯೊಳಗೆ ನಾಗಪ್ಪನನ್ನು ಪ್ರತಿಷ್ಠಾಪಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ.
ರೊಟ್ಟಿ ಪಂಚಮಿ:
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಅಂಗವಾಗಿ ರೊಟ್ಟಿ ಪಂಚಮಿಯನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಎಣ್ಣೆಗಾಯಿ, ಹೆಸರು, ಮಡಕೆ ಕಾಳು ಪಲ್ಯ, ಉಸುಳಿ, ಮೊಸರಿನ ಉಂಡೆ, ಶೇಂಗಾ-ಗುರೆಳ್ಳು ಚಟ್ನಿಯೊಂದಿಗೆ ಎಳ್ಳು ಹಚ್ಚಿದ ಸಜ್ಜೆ, ಜೋಳದ ಖಡಕ್ ರೊಟ್ಟಿಯನ್ನು ನೆರೆಮನೆಯವರೊಂದಿಗೆ ಪರಸ್ಪರ ಹಂಚಿಕೊಂಡು ಸವಿಯುವ ಪದ್ಧತಿಯಿದೆ.
ಜೋಕಾಲಿ:
ಪಂಚಮಿ ಹಬ್ಬ ಬಂದರೆ ಎಲ್ಲರೂ ಸೇರಿ ಜೋಕಾಲಿ ಆಡುವುದು ಕಂಡು ಬರುತ್ತದೆ. ಗೆಳತಿಯರೆಲ್ಲ ಕೂಡಿ ಜೋಕಾಲಿ ಆಡುತ್ತಾರೆ. ಬೇರೆ ಬೇರೆ ಊರುಗಳಿಂದ ತವರಿಗೆ ಬಂದ ಹಣ್ಣು ಮಕ್ಕಳು ಅವರ ಗೆಳತಿಯರೊಂದಿಗೆ ಸಿಹಿ ತಿಂಡಿಗಳ ಜೊತೆ ತಮ್ಮ ಅತ್ತ ಮನೆಯ ಅನುಭವಗಳನ್ನು ಹಂಚಿಕೊಳ್ಳುತ್ತ ತಮ್ಮದೇ ಆದ ಪ್ರಪಂಚದಲ್ಲಿ ಮೈಮರೆಯುತ್ತಾರೆ.
ನಾಗರ ಪಂಚಮಿ ಐತಿಹ್ಯ:
ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದದ ಒಂದು ಐತಿಹ್ಯದ ಪ್ರಕಾರ ರೈತನೊಬ್ಬ ಹೊಲ ಉಳುತ್ತಿದ್ದಾಗ, ರಂಟೆಯ ಕುಡಕ್ಕೆ ಸಿಕ್ಕ ಹಾವಿನ ಮರಿಗಳೆಲ್ಲ ಸತ್ತು ಹೋದವು. ಇದರಿಂದ ಸಿಟ್ಟಿಗೆದ್ದು ತಾಯಿ ಹಾವು ರೈತನ ಮನೆಯ ಜನರನ್ನೆಲ್ಲ ಕಚ್ಚಿ ಕೊಲ್ಲುತ್ತದೆ. ಅಷ್ಟೇ ಅಲ್ಲ, ಅತ್ತೆಯ ಮನೆಯಲ್ಲಿರುವ ರೈತನ ಮಗಳನ್ನು ಕಚ್ಚಲು ಅಲ್ಲಿಗೂ ಹೋಗುತ್ತದೆ. ಆ ಸಂದರ್ಭದಲ್ಲಿ ರೈತನ ಮಗಳು ಮಣ್ಣಿನಿಂದ ನಾಗನನ್ನು ಮಾಡಿ, ಹಾಲೆರೆಯುತ್ತಿರುತ್ತಾಳೆ. ಇದನ್ನು ಕಂಡು, ಹಾವಿನ ರೋಷ ಇಳಿಯುತ್ತದೆ.
ರೈತನ ಮಗಳು ಹೇಗಾದರ ಮಾಡಿ ತನ್ನ ತವರನ್ನು ಉಳಿಸಿಕೊಡು ಎಂದು ಕೇಳಿಕೊಳ್ಳುತ್ತಾಳೆ. ಆಗ ನಾಗರ ಹಾವಿಗೆ ಕರುಣೆ ಹುಟ್ಟಿ, ರೈತನ ಮನೆಗೆ ಹಿಂತಿರುಗಿ ಬಂದು ವಿಷವನ್ನು ಮರಳಿ ಹೀರಿ, ಅವರನ್ನೆಲ್ಲ ಬದುಕಿಸುತ್ತದೆ. ಅಂದಿನಿಂದ ನಾಗವನ್ನು ಪೂಜಿಸುವ ಪರಂಪರೆ ಬೆಳೆದು ಬಂದಿದೆ ಎಂಬುದು ಜನಪದರ ನಂಬಿಕೆ. ಮಗಳು ನಾಗ ಪೂಜೆಯಿಂದ ತವರ ಜನರನ್ನು ಉಳಿಸಿಕೊಂಡಿದ್ದರಿಂದ ಪಂಚಮಿ ಹಬ್ಬಕ್ಕೆ ಮಗಳನ್ನು ತವರಿಗೆ ಕರೆಸುವ ಪದ್ಧತಿ ರೂಢಿಗೆ ಬಂದಿದೆ ಎನ್ನುವುದು ಜನಪದವಿಶ್ವ ಕೋಶದಲ್ಲಿ ಉಲ್ಲೇಖವಾಗಿದೆ.
ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ.
ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.
ಹೆಣ್ಣುಮಕ್ಕಳ ಹಬ್ಬ:
ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.
ಕ್ಷೀರಾಬಿಶೇಕ ಮಾಡೋದು ಯಾಕೆ?
“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಬಿಶೇಕ ಮಾಡುವ ಪದ್ಧತಿಯಿದೆ.
ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.
ಸಿಂಧೂ ಜನರಲ್ಲೂ ನಂಬಿಕೆಯಿತ್ತು:
ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕøತಿಯ ಉತ್ಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.
ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕಅಷ್ಟೇ ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕøತಿಯುಳ್ಳ ಜನತೆ ನಾಗ ಪೂಜೆ ಮಾಡುತ್ತಿದ್ದರು. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸಲಾಗುತ್ತದೆ.