ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಅವರಿಂದ ಧ್ವಜಾರೋಹಣ

ಬೆಳಗಾವಿ,ಜನವರಿ,26: ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ಪರೆಡಗಳ ಗೌರವ ವಂದನೆ ಸ್ವೀಕರಿಸಿದರು. ನಂತರ ಎಲ್ಲರಿಗೂ ಗಣರಾಜೋತ್ಸದ ಶುಭಾಶಯಗಳನ್ನು ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಬೆಳಗಾವಿ ಜಿಲ್ಲೆಯ ನಾಗರಿಕರು ರಾಷ್ಟ್ರಾಭಿಮಾನಿಗಳು. ರಾಷ್ಟ್ರ ಭಕ್ತಿ ಜಿಲ್ಲೆಯ ಜನತೆಯ ರಕ್ತ ಹಾಗೂ ನರನಾಡಿಗಳಲ್ಲಿ ಹರಿದಾಡುತ್ತಿದೆ. ಸ್ವಾತಂತ್ರ್ಯದ ಪೂರ್ವದಲ್ಲಿಯೇ ನಮ್ಮ ಜಿಲ್ಲೆಯ ಹೋರಾಟಗಾರರ ಕೊಡುಗೆ ಅನುಪಮವಾದುದು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಿಂದ ಹಿಡಿದು ಗಂಗಾಧರರಾವ್ ದೇಶಪಾಂಡೆಯವರವರೆಗೆ ಸಾವಿರಾರು ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಈ ನೆಲದಲ್ಲಿ ತ್ಯಾಗ ಬಲಿದಾನಗಳಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಇದು ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲೆ. ಅದಕ್ಕೂ ಪೂರ್ವದಲ್ಲಿ ಚನ್ನಮ್ಮ, ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ನೆಲ. ಮಧ್ಯಯುಗೀನ ಚರಿತ್ರೆಯಲ್ಲಿ ಶರಣರು ನಡೆದಾಡಿದ ವೀರ ತಪೋಭೂಮಿಯಿದು. ಇಂತಹ ಉತ್ಕøಷ್ಟ ಜನ್ಮಭೂಮಿ ಬೆಳಗಾವಿಯದು ಎಂದು ಹೇಳಲು ಹೆಮ್ಮೆ ಯೆನಿಸುತ್ತದೆ ಎಂದರು.

ಅಂತರರಾಜ್ಯ ಗಡಿ ವಿಷಯಗಳಲ್ಲಿ ಸರ್ಕಾರಗಳು ಸೂಕ್ತ ಕ್ರಮ ತೆಗೆದುಕೊಳ್ಳುವವು. ಭಾಷೆ, ಧರ್ಮ. ಜಾತಿ ಮುಂತಾದ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಕೆಲ ಸಾಮಾಜಿಕ ವಿಚ್ಚಿದ್ರಕಾರಿ ಮನಸ್ಸುಗಳು ಗಣತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿರುವ ಜನತೆಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಸರಕಾರವು ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಿದೆ. ಬೆಳಗಾವಿ ಜಿಲ್ಲೆ ಕರ್ನಾಟಕದ ಜಿಲ್ಲೆಗಳಲ್ಲಿ ಹಿರಿದಾದ ಸ್ಥಾನಪಡೆದಿದೆ. ಜೀವನ ಸ್ನೇಹಿ ವಾತಾವರಣವಿಲ್ಲಿದೆ. ಇಲ್ಲಿನ ಜನರು ಧರ್ಮ ಸಹಿಷ್ಣುಗಳು. ಗಣರಾಜ್ಯದ ಹಾಗೂ ಸಂವಿಧಾನದ ಮೇಲೆ ಗೌರವ ಇಟ್ಟವರು. ಇಲ್ಲಿ ಎಲ್ಲಾ ಭಾಷೆ, ಧರ್ಮ ಹಾಗೂ ಸಮುದಾಯಗಳವರು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿರುವರು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತಿದ್ದೇನೆ.

ಕರ್ನಾಟಕ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ರೈತ ವಿದ್ಯಾನಿಧಿ ಯೋಜನೆಯನ್ನು 8, 9 ಹಾಗೂ 10 ನೇ ತರಗತಿ ಹೆಣ್ಣು ಮಕ್ಕಳಿಗೆ ವಿಸ್ತರಣೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಸೇವೆಗಳನ್ನು ಒದಗಿಸುವ ಮಹತ್ವಾಕಾಂಕ್ಷಿ “ಗ್ರಾಮ ಒನ್” ಯೋಜನೆಯು ಬೆಳಗಾವಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ.
ಕಂದಾಯ, ಆರೋಗ್ಯ, ಕಾರ್ಮಿಕ ಸೇರಿದಂತೆ ವಿವಿಧ ಇಲಾಖೆಗಳ ಅಂದಾಜು 100 ಸೇವೆಗಳು “ಗ್ರಾಮ ಒನ್” ಕೇಂದ್ರದಲ್ಲಿ ಲಭ್ಯವಾಗಲಿವೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ 2021 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ಹೆಚ್ಚು ಮಳೆಯಿಂದ 98,677 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾದ ಜಿಲ್ಲೆಯ 1,09,428 ರೈತ ಫಲಾನುಭವಿಗಳಿಗೆ ಓಆಖಈ ಮಾರ್ಗಸೂಚಿಯ ಪ್ರಕಾರ ರೂ. 94.80 ಕೋಟಿ ಬೆಳೆಹಾನಿ ಪರಿಹಾರ ನೇರವಾಗಿ ರೈತರ ಬ್ಯಾಂಕ ಖಾತೆಗೆ ಜಮೆ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 86,000 ರೈತರಿಗೆ 20,718 ಕ್ವಿಂಟಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದ್ದು, ಅದಕ್ಕಾಗಿ ರೂ. 12.57 ಕೋಟಿ ಸಹಾಯಧನವನ್ನು ಪಾವತಿಸಲಾಗಿದೆ ಎಂದರು. ಎಸ್.ಎಸ್.ಎಲ್.ಸಿ ನಂತರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ರೈತರ ಮಕ್ಕಳಿಗೆ ವಿಶೇಷ ಶಿಷ್ಯವೇತನ ನೀಡುವ “ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಶಿಷ್ಯವೇತನ ಯೋಜನೆ”ಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯಡಿ ಡಿಸೆಂಬರ್ 2021 ತಿಂಗಳ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ 18,179 ರೈತ ಮಕ್ಕಳಿಗೆ ಒಟ್ಟು ರೂ. 4.97 ಕೋಟಿ ಶಿಷ್ಯವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ಹಣ ವರ್ಗಾಗಣೆ ಮೂಲಕ ಜಮೆ ಮಾಡಲಾಗಿದೆ. ಮುಂದುವರೆದು, ಈ ಶಿಷ್ಯವೇತನ ಯೋಜನೆಯನ್ನು ಪ್ರೌಡ ಶಿಕ್ಷಣ (8 ರಿಂದ 10 ನೇ ತರಗತಿಯವರಿಗೆ) ಪಡೆಯುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೂ ಕೂಡ ವಿಸ್ತರಿಸಿದೆ.

ರೈತರ ಆದಾಯವನ್ನು ಹೆಚ್ಚಿಸಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ, 10ನೇ ಕಂತಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.08 ಲಕ್ಷ ರೈತ ಕುಟುಂಬಗಳಿಗೆ ರೂ. 82.62 ಕೋಟಿ ರೂಪಾಯಿಗಳು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯ 5.56 ಲಕ್ಷ ರೈತ ಕುಟುಂಬಗಳಿಗೆ 1205.31 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top