ಬಳ್ಳಾರಿಯಲ್ಲಿ ಸಂಭ್ರಮದ 73ನೇ ಗಣರಾಜ್ಯೋತ್ಸವ

ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಬಿ.ಶ್ರೀರಾಮುಲು

ಬಳ್ಳಾರಿ: ಸಂವಿಧಾನದ ಆಶಯದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ದವಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.

73ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.

ಇಂದಿನ ಧ್ವಜಾರೋಹಣದೊಂದಿಗೆ ನವ ಬಳ್ಳಾರಿ ನಿರ್ಮಾಣದ, ಅಭಿವೃದ್ಧಿಯ ಹೊಸ ಶಖೆ ಆರಂಭ ಆಗಿದೆ ಎಂದು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ಬಿ.ಶ್ರೀರಾಮುಲು ಅವರು ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನಮ್ಮ ಜಿಲ್ಲೆಯ ಶಕ್ತಿಯಾಗಿವೆ.ಜಗತ್ತಿನ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ಕನಿಜ ಬಳ್ಳಾರಿ ಜಿಲ್ಲೆಯಲ್ಲಿ ಇದೆ ಎಂದರು.

2021-22 ಸಾಲಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಬಳ್ಳಾರಿ ಜಿಲ್ಲೆಯ 86,490 ರೈತರಿಗೆ 10ನೇ ಕಂತಿನ ವರೆಗೆ ಒಟ್ಟು 13,736 ಲಕ್ಷ ರೂ.ವರ್ಗಾವಣೆಯಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದ ರೈತರಿಗೆ ಆದ ನಷ್ಟದ ಹಿನ್ನೆಲೆಯಲ್ಲಿ 53,065 ರೈತರಿಗೆ 4,936 ಲಕ್ಷಗಳ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ 2222.15 ಕೋಟಿ ರೂ.ಗಳ 6 ಕ್ರಿಯಾಯೋಜನೆಗಳ ತಯಾರು:

ಜಿಲ್ಲಾ ಖನಿಜ ಪ್ರತಿಷ್ಠಾನದ ವತಿಯಿಂದ 2015-16 ಸಾಲಿನಿಂದ ಈವರೆಗೆ 1845.98 ಕೋಟಿ ರೂಪಾಯಿ ಸಂಗ್ರಹವಾಗಿರುತ್ತದೆ. 2222.15 ಕೋಟಿಯ 6 ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು, ಹೆಚ್ಚಿನ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು.

ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಲ್ಲಿ ಒಟ್ಟು 2422 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 737 ಕಾಮಗಾರಿಗಳು ಮುಕ್ತಾಯವಾಗಿದ್ದು, 603 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕೋವಿಡ್ 3ನೇ ಅಲೆಯ ಸವಾಲುಗಳನ್ನು ಎದುರಿಸಲು ಸಕಲ ಸಿದ್ಧತೆ: ಜಿಲ್ಲೆಯಲ್ಲಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದು, ಮೂರನೇ ಅಲೆಯಲ್ಲಿ ಬರಬಹುದಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು.

30 ಕೋಟಿ ವೆಚ್ಚದಲ್ಲಿ ಜಿಲ್ಲೆಯ 91 ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ಶಾಲಾ-ಕಾಲೇಜುಗಳ ಅಭಿವೃದ್ಧಿಗಾಗಿ 226.61 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿ ವಿವಿಧ ಕಾಮಗಾರಿಗಳಿಗೆ ಹಾಗೂ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ ಜಿಲ್ಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 441 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು.

ಬಳ್ಳಾರಿ ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವೆಗಳಿಗೆ ಚಾಲನೆ:

ಜಿಲ್ಲೆಯಲ್ಲಿ ಇಂದಿನಿಂದ 172 ಗ್ರಾಮ ಒನ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು. ಇಂದು ಮುಖ್ಯಮಂತ್ರಿಗಳು ಬಳ್ಳಾರಿ ಸೇರಿದಂತೆ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಕಂದಾಯ, ಆರೋಗ್ಯ, ಆಹಾರ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 100 ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ಬರಲಿದೆ. ಈ ಮೂಲಕ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇದೆ ನಮ್ಮ ಸಂವಿಧಾನದ ಶಕ್ತಿ ಎಂದರು.

ಜನರು ಸರ್ಕಾರದ ಬಾಗಿಲಿಗೆ ಹೋಗಬಾರದು, ಸರ್ಕಾರವೇ ಜನರ ಬಾಗಿಲಿಗೆ ಬರಬೇಕು. ಅದೇ ನಿಜವಾದ ಜನತಂತ್ರ. ಅದಕ್ಕೆ ಹೇಳಿದೆ ಜನರ ಬಾಗಿಲಿಗೆ ಸರ್ಕಾರವನ್ನ ಕೊಂಡೊಯ್ಯುವ ದಿನ, ಈ ದಿನ. ಅದನ್ನು ನಮ್ಮ ಸರ್ಕಾರ ಸಾಕಾರಗೊಳಿಸಿದೆ ಎಂದರು.

ಜಿಲ್ಲಾ ಪ್ರಮುಖ ಆಸ್ಪತ್ರೆಯಾಗಿರುವ ವಿಮ್ಸ್ ನಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು 4,499 ಲಕ್ಷ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಏಮ್ಸ್ ಮಾದರಿಯಲ್ಲಿ ವಿಮ್ಸ್ ಸಂಸ್ಥೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಲು ರಾಜ್ಯ ಸರ್ಕಾರವು 12,775 ಲಕ್ಷ ರೂ. ಅನುದಾನದಡಿ ಕಟ್ಟಡ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಇನ್ಮುಂದೆ ಇತಿಶ್ರೀ:

ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮೋಕಾ ಗ್ರಾಮದ ಹತ್ತಿರ 800 ದಶಲಕ್ಷ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಸಂಗ್ರಹಗಾರ  ಹಾಗೂ 13.50 ದಶಲಕ್ಷ ಲೀಟರ್ ಸಾಮಥ್ರ್ಯದ ಮದರ್ ಟ್ಯಾಂಕನ್ನು ಉಜ್ಜಿವನಪಡಿಸಲಾಗಿದ್ದು/ ಅಭಿವೃದ್ಧಿಪಡಿಸಲಾಗಿದ್ದು, ಇಂದು ಬಳ್ಳಾರಿ ಜನರಿಗೆ ಲೋಕಾರ್ಪಣೆ ಆಗಲಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಸುಮಾರು 5616 ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 2592 ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೊಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನಗರೋತ್ಥಾನ ಹಂತ-4 ರಲ್ಲಿ 80 ಕೋಟಿ ಅನುದಾನವನ್ನು ಬಳ್ಳಾರಿ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಿರಿಸಲಾಗಿದ್ದು, ಶೀಘ್ರದಲ್ಲಿಯೇ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ, ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

2021-22 ಸಾಲಿನಲ್ಲಿ 6,949 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗಿದ್ದು, ಮೆಟ್ರಿಕ್ ಪೂರ್ವ 24,032 ವಿದ್ಯಾರ್ಥಿಗಳಿಗೆ ಹಾಗೂ ಮೆಟ್ರಿಕ್ ನಂತರ 2,300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ 1,500 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದಲ್ಲದೆ, ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗಾಗಿ ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಸುಮಾರು 26 ಸಾವಿರ ಕೋಟಿ ರೂ.ಗಳಷ್ಟು ಮೀಸಲಿಡಲಾಗಿದೆ ಎಂದು ವಿವರಿಸಿದ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಿಟ್ಟ ಹೆಜ್ಜೆಗಳು ಇಂದು ಜಗತ್ತು ಮೆಚ್ಚುವಂತೆ ಮಾಡಿದೆ ಎಂದರು.

ಒಂದು ದಿನಕ್ಕೆ ಸೀಮಿತವಾಗದಿರಲಿ ಈ ಹಬ್ಬ: ಈ ಗಣರಾಜ್ಯೋತ್ಸವದ ಹಬ್ಬ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.

ಯುವಕರಲ್ಲಿ ದೇಶ ಪ್ರೇಮ ಬೆಳೆಸಲು, ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು, ಸಂವಿಧಾನದ ಆಶಯಗಳ ಆಚರಣೆ – ಪ್ರತಿ ದಿನದ ಆಚರಣೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಣ, ಕೃಷಿ-ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ, ಬಡವರ ಕಲ್ಯಾಣ, ಸಾಮಾಜಿಕ ನ್ಯಾಯ, ಆರ್ಥಿಕತೆಯಲ್ಲಿ, ರಾಜ್ಯ – ರಾಷ್ಟ್ರವನ್ನು ಶ್ರೇಷ್ಠ ಶಕ್ತಿಯನ್ನಾಗಿ ಮಾಡಬೇಕಿದೆ. ಇದೇ ನಮ್ಮ ಸಂವಿಧಾನದ ಆಶಯ.ಪ್ರತಿ ಹಳ್ಳಿಯು ಅಭಿವೃದ್ಧಿಯ ಕತೆ ಹೇಳಬೇಕು;ಅದುವೆ ನಮ್ಮ ಸಂವಿಧಾನದ ಆಶಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ನಾಸೀರ್‍ ಹುಸೇನ್ , ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top