ವಿದ್ಯಾರ್ಥಿಗಳು, ಸಾರಿಗೆ ಸಂಸ್ಥೆ, ಸರ್ಕಾರದ ವಿವಿಧ ಇಲಾಖೆ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ತರಬೇತಿ – ಸಚಿವ ದಿನೇಶ್‌ ಗುಂಡೂರಾವ್

ಸರ್ಜಿಕಲ್‌ ಸೊಸೈಟಿ ಆಫ್ ಬೆಂಗಳೂರು ಘಟಕದಿಂದ ಸಿಪಿಆರ್‌ – ಪ್ರಥಮ ಚಿಕಿತ್ಸೆ ತರಬೇತಿ : 2200 ಕ್ಕೂ ಅಧಿಕ ಪೊಲೀಸರಿಗೆ ತರಬೇತಿ – ವಿಶ್ವದಾಖಲೆ ನಿರ್ಮಾಣ

ಬೆಂಗಳೂರು : ‌ ಸರ್ಜಿಕಲ್‌ ಸೊಸೈಟಿ ಬೆಂಗಳೂರು ಘಟಕದಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 2200 ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗಾಗಿ ಆಯೋಜಿಸಿದ್ದ ಹೃದಯಾಘಾತ ಸಂದರ್ಭದಲ್ಲಿ ನೀಡುವ ಸಿಪಿಆರ್‌ – ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ವಿಶ್ವ ದಾಖಲೆ ನಿರ್ಮಿಸಿದೆ.

 

ಅತ್ಯಂತ ದೊಡ್ಡ ಮಟ್ಟದ ಪ್ರಥಮ ಚಿಕಿತ್ಸೆ ತರಬೇತಿ ನೀಡಿದ ಹಿನ್ನೆಲೆಯಲ್ಲಿ ಸರ್ಜಿಕಲ್‌ ಸೊಸೈಟಿ ಬೆಂಗಳೂರು ಘಟಕಕ್ಕೆ “ವರ್ಲ್ಡ್‌ ರೆಕಾರ್ಡ್‌ ಆಫ್‌ ಲಂಡನ್‌ ಸಂಸ್ಥೆಯು ಪ್ರಮಾಣ ಪತ್ರ ನೀಡಿತು.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತರಬೇತಿ ಶಿಬಿರ ಉದ್ಘಾಟಿಸಿದರು. ಅಲ್ಲದೇ ಸ್ವತಃ ಪ್ರಥಮ ಚಿಕಿತ್ಸೆ ತರಬೇತಿ ಪಡೆದು ಮಾದರಿಯಾದರು.

 

ನಂತರ ಮಾತನಾಡಿದ ಸಚಿವರು, ಜೀವ ಉಳಿಸುವ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಸಚಿವರು ಒಳಗೊಂಡಂತೆ ಪ್ರತಿಯೊಬ್ಬರೂ ಪಡೆಯಬೇಕು. ಇಂತಹ ರಚನಾತ್ಮಕ ಕೆಲಸಗಳಿಂದ ಅಮೂಲ್ಯ ಜೀವ ಉಳಿಸಲು ಸಾಧ್ಯವಿದೆ. ಇದು ನಿಜಕ್ಕೂ ಒಳ್ಳೆಯ ಕೆಲಸ. ತಾವೂ ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದು, ಇದು ತಮ್ಮಲ್ಲಿ ಸಾರ್ಥಕತೆಯ ಭಾವನೆ ಮೂಡಿಸಿದೆ. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಆರೋಗ್ಯ ಇಲಾಖೆಯವರಿಗೂ ಸೂಕ್ತ ತರಬೇತಿ ನೀಡುವುದು ಅಗತ್ಯವಿದೆ. ತರಬೇತಿ ಇರುವವರು ಜೀವ ಉಳಿಸುತ್ತಾರೆ. ಇದನ್ನು ಪ್ರತಿಯೊಬ್ಬರೂ ಉದಾಹಣೆಯಾಗಿ ತೆಗೆದುಕೊಳ್ಳಬೇಕು ಎಂದರು.  

ಪೊಲೀಸರ ಮುಂದೆ ಪ್ರತಿನಿತ್ಯ ಹಲವಾರು ಘಟನೆಗಳು ನಡೆಯುತ್ತವೆ. ಹೀಗಾಗಿ ಪೊಲೀಸರಿಗೆ ಪ್ರಥಮ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಹೃದಯಾಘಾತವಾಗುವ ಸಂದರ್ಭದಲ್ಲಿ ತರಬೇತಿ ಪಡೆದಿದ್ದರೆ ಜೀವ ಉಳಿಸಲು ಸಾಧ್ಯವಿದೆ. ಎಲ್ಲರಿಗೂ ಈ ಕುರಿತು ತರಬೇತಿ ನೀಡಿದರೆ ಅನೇಕ ಜೀವಗಳನ್ನು ರಕ್ಷಿಸಬಹುದು. ಪ್ರತಿಯೊಂದು ಜೀವ ಅಮೂಲ್ಯ. ನಿಮ್ಮ ಮೇಲೆ ಇಡೀ ಕುಟುಂಬ ಅವಲಂಬಿತವಾಗಿರುತ್ತದೆ. ಒಂದು ಜೀವ ಉಳಿಸಿದರೆ ದೊಡ್ಡ ಸೇವೆ ಮಾಡಿದಂತೆ. ಇದು ಅತ್ಯಂತ ಸರಳವಾದ ತರಬೇತಿ ತಂತ್ರಗಳಾಗಿವೆ ಎಂದರು.

 

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್ ಮಾತನಾಡಿ, ಪೊಲೀಸರಿಗೆ ಜೀವ ಉಳಿಸಲು ಇದು ಸಹಕಾರಿಯಾಗಿದ್ದು, ನಮ್ಮ ಸಿಬ್ಬಂದಿಯನ್ನು ರಕ್ಷಿಸಲು ಸಹ ಇದರಿಂದ ಸಾಧ್ಯವಾಗಲಿದೆ. ಸಾಮಾನ್ಯ ನಾಗರಿಕರ ರಕ್ಷಣೆಗೂ ಇದು ಪ್ರಯೋಜನಕಾರಿಯಾಗಿದೆ ಎಂದರು.

ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಘಟಕದ ಅಧ್ಯಕ್ಷ ಡಾ. ರಾಜಶೇಖರ್‌ ಸಿ ಜಕ್ಕಾ ಮಾತನಾಡಿ, ಪುನಿತ್‌ ರಾಜ್‌ ಕುಮಾರ್‌, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗೆ ಸ್ಥಳದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ದೊರೆತಿದ್ದರೆ ಅಮೂಲ್ಯ ಜೀವ ಉಳಿಸಬಹುದಾಗಿತ್ತು. ಜೀವ ರಕ್ಷಣೆಗಾಗಿ ಇಂತಹ ವಿನೂತ ತರಬೇತಿ ಆಯೋಜಿಸಲಾಗಿದೆ. ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಘಟಕ ತನ್ನ 50 ವರ್ಷಾಚರಣೆ ಸಂದರ್ಭದಲ್ಲಿ ವರ್ಷ ಪೂರ್ತಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಐಸಿಎಟಿಟಿ ಫೌಂಡೇಷನ್‌ ಅಧ್ಯಕ್ಷರಾದ ಡಾ, ಶಾಲಿನಿ ನಲ್ವಾಡ್‌ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top