ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಶೀಘ್ರ ಕೇಂದ್ರಕ್ಕೆ ನಿಯೋಗ – ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ
ಬೆಂಗಳೂರು : ಕೋಲಿ ಸಮಾಜ ರಾಜಕೀಯ, ಸಾಮಾಜಿಕವಾಗಿ ಸಂಘಟಿತರಾಗಲು ಕಲಬುರಗಿಯಲ್ಲಿ ಈ ತಿಂಗಳ 25 ರಂದು ರಾಜ್ಯಮಟ್ಟದ ಬೃಹತ್ ಜನಜಾಗೃತಿ ಸಮಾವೇಶ ನಡೆಸುತ್ತಿದ್ದು, ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಅಂಗೀಕರಿಸಲಾಗುವುದು ಎಂದು ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.
ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಪ್ರಮುಖ ಬೇಡಿಕೆಯಾಗಿರುವ ಹಿಂದುಳಿದ ಕೋಲಿ, ಕಬ್ಬಲಿಗ ಸಮುದಾಯ 38 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ 38 ಪರ್ಯಾಯ ಬದಗಳಿಗೆ ಬದಲಾಗಿ ಐದು ಪದಗಳನ್ನು ಕಳುಹಿಸಿಕೊಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಚರ್ಚೆ ನಡೆಸಿದ್ದು, ತಿದ್ದುಪಡಿ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ನಂತರ ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗದ ಮೂಲಕ ತೆರಳಿ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸುವವಂತೆ ಆಗ್ರಹಿಸುತ್ತೇವೆ. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜ ಬಿಜೆಪಿಯನ್ನು ಬಹಿಷ್ಕರಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಕಲಬುರಗಿ ಸಮಾವೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ್ ಪಾಟೀಲ್, ಎನ್.ಎಸ್.ಭೋಸರಾಜು, ಶಿವರಾಜ ತಂಗಡಗಿ, ಮತ್ತಿತರೆ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೂ ಮುನ್ನ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಸಮಾಜವನ್ನು ಪರಿಣಾಮಕಾರಿಯಾಗಿ ಸಂಘಟನೆ ಮಾಡಲಾಗುತ್ತಿದೆ. ವಿಧಾನಸೌಧದ ಮುಂಭಾಗ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ, ಸಮುದಾಯದ ಶ್ರೇಯೋಭಿವೃದ್ದಿಗೆ ಬಜೆಟ್ ನಲ್ಲಿ 200 ಕೋಟಿ ರೂಪಾಯಿ, ನಿಗಮಕ್ಕೆ 500 ಕೋಟಿ ರೂ, ಬಿಡುಗಡೆ ಮಾಡಬೇಕು. ಕೋಲಿ ಸಮಾಜಕ್ಕೆ ಮೀನುಗಾರಿಕೆ ಉದ್ಯಮದಲ್ಲಿ ಶೇ.90ರಷ್ಟು ಮೀಸಲಾತಿ ನೀಡಬೇಕು ಎಂದು ತಿಪ್ಪಣ್ಣಪ್ಪ ಕಮಕನೂರ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಕೋಲಿ ಮತ್ತು ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನ ಕುಮಾರ್, ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ್, ಕೋಲಿ ಸಮುದಾಯದ ಸಾಯಿಬಣ್ಣ ಬೋರಬಂಡಾ, ಶರಣಪ್ಪ ನಾಟೀಕಾರ, ರಮೇಶ್ ಎನ್.ನಾಟೀಕಾರ, ಬಸವರಾಜ್ ಎಸ್ ಹರವಾಳ, ಸುನೀಲ್ ಭಾವಿಕಟ್ಟಿ, ಶಶಿಕಿರಣ, ಶರಣುಮಂದ್ರವಾಡ, ಚಂದ್ರಶೇಖರ್ ಭಂಕಲಗಿ, ಉದಯಕುಮಾರ್ ಕಮಕನೂರು ಮತ್ತಿತರರು ಉಪಸ್ಥಿತರಿದ್ದರು.