ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲ ಮನ್ನಾ – ರಕ್ಷಾ ರಾಮಯ್ಯ: ವ್ಯಾಪಕ ಪ್ರಚಾರ

ನೆಲಮಂಗಲ:  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಂಪುರ, ಸೋಲೂರು ಹೋಬಳಿ ಭಾಗಗಳಲ್ಲಿ ತೀವ್ರ ಪ್ರಚಾರ ನಡೆಸಿದರು.

ನೆಲಮಂಗಲ ಶಾಸಕರಾದ ಎನ್.‌ ಶ್ರೀನಿವಾಸ್‌ ಅವರ ಜೊತೆಗೂಡಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಮತದಾರರು ಭಾರೀ ಕರತಾಡನ, ಶಿಳ್ಳೆಗಳ ಮೂಲಕ ಪ್ರಚಾರಕ್ಕೆ ರಂಗು ತಂದರು. ಎಲ್ಲೆಡೆ ಪಟಾಕಿ ಸಿಡಿಸಿ, ಪುಷ್ಪಾರ್ಚಣೆ, ಹಣ್ಣು, ಹೂವಿನ ಮಾಲೆಗಳ ಮೂಲಕ ಕಾರ್ಯಕರ್ತಯರು ರಕ್ಷಾ ರಾಮಯ್ಯ ಅವರನ್ನು ಸ್ವಾಗತಿಸಿದರು.

ನೆಲಮಂಗಲ ಕ್ಷೇತ್ರದ ಕುಲುವನಹಳ್ಳಿ, ಅರೆಬೊಬ್ಬನಹಳ್ಳಿ, ಶಿವಗಂಗೆ, ಸೋಂಪುರ, ನರಸೀಪುರ, ಬಾಣವಾಡಿ, ಬೆಟ್ಟಸಂದ್ರ, ಲಕ್ಕೇನಹಳ್ಳಿ, ಗುಡೇಮಾರನೇನ ಹಳ್ಳಿ, ಮೋಟಗೊಂಡನಹಳ್ಳಿ ಮತ್ತು ಸೋಲೂರು ಗ್ರಾಮಗಳಲ್ಲಿ ಮತಯಾಚಿಸಿದರು. ಕಾರ್ಯಕರ್ತರ ಸಮೂಹ ರಕ್ಷಾ ರಾಮಯ್ಯ ಅವರ ಜೊತೆಗೂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಸಂವಿಧಾನದ ಆಶಯಗಳ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್‌ ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಿದ್ದು, ಯುವಕನಾದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ತಮಗೆ ಮತಚಲಾಯಿಸಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದ್ದು, ರೈತರ ಸಾಲ ಮನ್ನಾ ಮಾಡದೆ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಮಾದರಿ ಸರ್ಕಾರವಾಗಿ ಹೊರ ಹೊಮ್ಮಿತ್ತು.  ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲದ ಹೊರೆಯನ್ನು ಇಳಿಸಿ ಕೃಷಿಕರಿಗೆ ನೆಮ್ಮದಿಯ ವಾತಾವರಣ ನಿರ್ಮಿಸಲಿದೆ. ಬಡವರ ಪರ ಕೆಲಸ ಮಾಡದ. ಬಡವರ ವಿರೋಧಿ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ, ಈ ಬಾರಿ ಕಾಂಗ್ರೆಸ್ ಬೆಂಬಲಿಸಿ, ನನಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

 

ಮುಂಬರುವ ದಿನಗಳಲ್ಲಿ ನೆಲಮಂಗಲ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಶಾಸಕರ ಜೊತೆ ಸೇರಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆಗಳ ಮೂಲಕ ಜನರನ್ನು ವಂಚಿಸುತ್ತಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಡವರು, ರೈತರು, ಯುವ ಜನಾಂಗದ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ನನಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಕೋರಿದರು.

ಕಾಂಗ್ರೆಸ್‌ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ನೀಡಿದ್ದು, ಲಕ್ಷಾಂತರ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಜ್ಞಾನದ ಜ್ಯೋತಿ ಹೊತ್ತಿಸಿದೆ. ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ಹತ್ತು ವರ್ಷಗಳ ಹಿಂದೆ ಭರವಸೆ ನೀಡಿತ್ತು. ಆದರೆ ಈ ವರೆಗೆ ಒಂದು ಕೋಟಿ ಉದ್ಯೋಗ ನೀಡಿಲ್ಲ ಎಂದರು.

 

ಪಕ್ಷದ ಮುಖಂಡರಾದ ಸಿ.ಆರ್. ಗೌಡರು, ರಾಮಾಂಜುನೇಯ, ಶೈಲೇಂದ್ರ, ಗೋವಿಂದರಾಜ್, ನಾಗರಾಜ್, ಶೈಲೇಂದ್ರ, ಸಂಬಂಧಪಟ್ಟ ಗ್ರಾಮಗಳ ಹಿರಿಯ ಮುಖಂಡರು, ಗ್ರಾ.ಪಂ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸದಸ್ಯರು, ಯುವ ಸಮೂಹ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top