ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆ- ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆವಹಿಸುವಂತೆ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು: ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಿದ್ದು, ಮುಂಜಾಗರೂಕತೆವಹಿಸದಿದ್ದಲ್ಲಿ
ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇರುವುದರಿಂದ ಗ್ರಾಮೀಣ ನೀರು ಸರಬರಾಜು
ಇಲಾಖೆಯ ಎಂಜನಿಯರುಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ
ಎಚ್ಚರಿಕೆವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ
ಸಚಿವರಾದ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೊದಲ ಬಾರಿಗೆ ಕರೆದಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯದ ಎಲ್ಲ ಎಂಜನಿಯರುಗಳ ಸಭೆಯಲ್ಲಿ ಮಾತನಾಡುತ್ತಿದ್ದ ಸಚಿವರು ರಾಜ್ಯದ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಜೂನಿಯರ್‌ ಎಂಜನಿಯರುಗಳು, ವಾಟರ್‌ಮನ್‌ಗಳು ಹಾಗೂ ಇನ್ನಿತರರಿಗೆ ನೀರಿನ ಗುಣಮಟ್ಟ ಪರೀಕ್ಷೆ ಕುರಿತಂತೆ ತರಬೇತಿ ನೀಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ವಾರಕ್ಕೆ ಒಂದು ದಿನ ಪ್ರವಾಸ ಮಾಡಿ ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿ ಆಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿದರು. ಪ್ರತಿ ತಿಂಗಳು 2ನೆಯ ತಾರೀಕು ತಾವು ನಡೆಸುವ ರಾಜ್ಯ ಮಟ್ಟದ ವಿಡಿಯೊ ಸಭೆಯಲ್ಲಿ ಈ ವರದಿಗಳನ್ನು ಪರಿಶೀಲಿಸುವುದಾಗಿ ಸಚಿವರು ಹೇಳಿದರು.

ಕೊಳವೆಬಾವಿಗಳ ಸುತ್ತಮುತ್ತಲೂ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದು, ತ್ಯಾಜ್ಯನೀರು ಕಾಲುವೆಗಳಲ್ಲಿ ಕುಡಿಯವ ನೀರಿನ ಕೊಳವೆಗಳು ಹಾದು ಹೋಗದಂತೆ ಎಚ್ಚರವಹಿಸುವುದು, ನೀರು ಸರಬರಾಜು ಕೊಳವೆಗಳ ಕೊನೆಗಳಲ್ಲಿ ಬಿಗಿಯಾಗಿ ಎಂಡ್‌ಕ್ಯಾಪ್‌ ಅಳವಡಿಸುವುದು ಸೇರಿದಂತೆ ಹಲವು ಮೂಂಜಾಗರೂಕತಾ ಕ್ರಮಗಳ ಮೂಲಕ ನೀರು ಕಲುಷಿತಗೊಳ್ಳುವುದನ್ನು ತಡೆಯಬಹುದೆಂದು ಸಚಿವರು ಕಿವಿಮಾತು ಹೇಳಿದರು.

ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ: ಗಂಭೀರ ಪರಿಗಣನೆ

ಜಲಜೀವನ ಮಿಷನ್‌ ಹಾಗೂ ಬಹುಗ್ರಾಮ ಯೋಜನೆ ಕಾರ್ಯಕ್ರಮಗಳಡಿ ಕೈಗೆತ್ತಿಕೊಂಡಿರುವ ಕೆಲವು ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬೇರೆಲ್ಲ ಯೋಜನೆಗಳಿಗೆ ಹೋಲಿಸಿದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾದುದು ಎಂದು ಹೇಳಿದರಲ್ಲದೆ  ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರಗತಿಯಲ್ಲಿರುವ  ಜಿಲ್ಲಾವಾರು ಕಾಮಗಾರಿಗಳ ವಿಮರ್ಶೆ ಮಾಡಿದ ಸಚಿವರು ಹಲವಾರು ಸೂಚನೆ, ಸಲಹೆಗಳನ್ನು ನೀಡಿದರು.

 

ಸಭೆಗೆ ಗೈರುಹಾಜರಾದ ಎರಡು ಜಿಲ್ಲೆಗಳ ಎಂಜನಿಯರುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರವೇಜ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಯುಕ್ತ ಕೆ.ನಾಗೇಂದ್ರ ಪ್ರಸಾದ್‌, ಮುಖ್ಯ ಅಭಿಯಂತರರಾದ ಎಜಾಜ್‌ ಹುಸೇನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top