ಬಸ್ ನಿಗಮಗಳಿಗೆ ಶಕ್ತಿ ತುಂಬಿದ ಯೋಜನೆ

ಬಳ್ಳಾರಿ: ರಾಜ್ಯದ ನೂತನ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದು ನೂರು ದಿನ ಪೂರೈಸಿದೆ. ನೂರು ದಿನಗಳ ತನ್ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಶತದಿನಗಳಲ್ಲಿ ತಮ್ಮ ಚುನಾವಣಾ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

          ನೂರು ದಿನಗಳಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಕರ್ನಾಟಕ ಮಾದರಿ ಅಭಿವೃದ್ಧಿಯ ಆಡಳಿತವೆಂಬ ಪರಿಕಲ್ಪನೆಯೊಂದಿಗೆ ಹೆಜ್ಜೆ ಇಡುತ್ತಿದೆ. ನೂರು ದಿನಗಳ ಸರ್ಕಾರ ಬಹುತೇಕ ಆಡಳಿತ ಪರಿವರ್ತನೆಯ ಹಂತದಲ್ಲಿದೆ.

          ಪಂಚ ಗ್ಯಾರಂಟಿಗಳಿಗೆ ಕೇಂದ್ರೀಕೃತ ಆಡಳಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ  ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಬಹುತೇಕ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕೆ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಜಾರಿಗೆಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಸ್ವಾವಲಂಬಿ:

 

          ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಾಗಲು ನೂತನ ಸರ್ಕಾರ ಚಾಲನೆ ನೀಡಿದ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಹಣ ಪಾವತಿಸುವ ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸ್ವಾವಲಂಬಿಯಾಗುತ್ತಿವೆ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾದಂತೆ ಆದಾಯವು 20-40 ಪ್ರತಿಶತದಷ್ಟು ಹೆಚ್ಚಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಮಾತ್ರವಲ್ಲದೆ ಹಣ ಪಾವತಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಇದು ನಿಗಮಗಳು ಶೀಘ್ರದಲ್ಲೇ ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಶಕ್ತಿ ಯೋಜನೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಯೋಜನೆಯು ಉದ್ಯೋಗಗಳ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ.

ತುಂಬಿ-ತುಳುಕುತ್ತಿರುವ ಬಸ್ಸುಗಳು:

          ಸರ್ಕಾರಿ-ಚಾಲಿತ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆ ಬಸ್ಸುಗಳಲ್ಲಿ ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿದೆ. ಸರ್ಕಾರವು ಶಕ್ತಿ ಯೋಜನೆಯನ್ನು ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಾಧನವಾಗಿ ಪರಿಗಣಿಸುತ್ತದೆ, ಇದು ಬಡ ಮತ್ತು ಕೆಳ-ಮಧ್ಯಮ ವರ್ಗದವರಿಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ಉಂಟುಮಾಡುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

          ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಹಣಕಾಸು ವರ್ಷದ ವಾರ್ಷಿಕ 2,800 ಕೋಟಿ ರೂ. ಐದು ಪ್ರಮುಖ ಖಾತರಿಗಳಲ್ಲಿ, ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) 4000 ಕೋಟಿ ವಾರ್ಷಿಕ ವೆಚ್ಚದೊಂದಿಗೆ ಎರಡನೇ ಅಗ್ಗದ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ 3 ತಿಂಗಳಲ್ಲಿ 44 ಲಕ್ಷಕ್ಕೂ ಹೆಚ್ಚು ಮಹಿಳೆಯರಿಂದ ಸೌಲಭ್ಯ ಬಳಕೆ:  ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೊಂಡು ಮೂರು ತಿಂಗಳು ಪೂರ್ಣಗೊಂಡಿದ್ದು, ಯೋಜನೆ ಆರಂಭವಾದ ದಿನದಿಂದ ಈವರೆಗೂ 44 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸೌಲಭ್ಯ ಬಳಕೆ ಮಾಡಿಕೊಂಡಿದ್ದಾರೆ.

          ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂಕಿ-ಅಂಶಗಳ ಪ್ರಕಾರ, ಜೂನ್ 11ರಿಂದ ಆಗಸ್ಟ್ 27ರವರೆಗೆ 44,79,303 ಹೆಚ್ಚು ಮಹಿಳೆಯರು ಸೌಲಭ್ಯವನ್ನು ಪಡೆದುಕೊಂಡಿದ್ದು, ಈ ಅವಧಿಯಲ್ಲಿ ನೀಡಲಾದ ಶೂನ್ಯ ಮೊತ್ತದ ಟಿಕೆಟ್‍ಗಳ ಒಟ್ಟು ಮೌಲ್ಯ 16.47 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.

 

          ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ದಿಢೀರ್ ಏರಿಕೆಯಾಯಿತು. ಇದಲ್ಲದೆ ಪುರುಷ ಸವಾರರ ಸಂಖ್ಯೆಯಲ್ಲಿಯೂ ಕೂಡ ಹೆಚ್ಚಾಗಿದ್ದು, ಬಸ್ ನಿಗಮಗಳ ಆದಾಯದಲ್ಲೂ ಜಿಗಿತ ಕಂಡು ಬಂದಿದೆ.

ಶಕ್ತಿ ಯೋಜನೆಯಿಂದ ಕರ್ನಾಟಕದ ದೇವಾಲಯಗಳಲ್ಲಿ ಜನಸಾಗರ, ಆದಾಯ ಹೆಚ್ಚಳ: ಶಕ್ತಿ ಯೋಜನೆಯ ಫಲದಿಂದ ಕರ್ನಾಟಕದ ದೇವಾಲಯಗಳು ಶ್ರೀಮಂತವಾಗುವತ್ತ ದಾಪುಗಾಲು ಹಾಕುತ್ತಿವೆ. ಶಕ್ತಿ ಯೋಜನೆಯಿಂದ ರಾಜ್ಯದ ಅಮ್ಮಂದಿರು, ಹೆಣ್ಣು ಮಕ್ಕಳು ಹೇಗೂ ಫುಲ್‍ಖುಷ್ ಆಗಿದ್ದಾರೆ. ಅದರ ಜೊತೆ ಜೊತೆಗೆ ರಾಜ್ಯ ಸಾರಿಗೆ ಸಂಸ್ಥೆಯ ನಿಗಮಗಳೂ ಆದಾಯ ಹೆಚ್ಚಳದಿಂದ ಹೊಸ ಚೈತನ್ಯ ಪಡೆದುಕೊಂಡಿವೆ.

          ಶಕ್ತಿ ಯೋಜನೆ ಜಾರಿಯಾದ ನಂತರ ಮುಜರಾಯಿ ದೇಗುಲಗಳಿಗೆ ಭಕ್ತರ ಭೇಟಿ ಹೆಚ್ಚಿದೆ. ಇದರಿಂದ ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ. ಮಹಿಳೆಯರಿಗೆ ಟಿಕೆಟ್ ಫ್ರೀ ಎಂದು ಹೊರಟರೆ ಅವರ ಜೊತೆ ಅವರ ಮನೆಯ ಪುರುಷರೂ, ಮಕ್ಕಳೂ ಬರ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಳ. ಅತ್ತ ಪ್ರವಾಸಿಗರಿಂದ ಆಯಾ ಊರುಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಳ. ಒಟ್ಟಾರೆ ಇದರಿಂದ ಆರ್ಥಿಕ ಚಟುವಟಿಕೆಗೆ ಬೂಸ್ಟ್ ಸಿಕ್ಕಂತಾಗಿದೆ.

          ಮುಂಚೆ ದೇವಸ್ಥಾನಗಳನ್ನು ನೋಡಲು ಮತ್ತೆ ಅಲ್ಲಿಗೆ ಹೋಗಲು ಆಗುತ್ತಿರಲಿಲ್ಲ, ಬಸ್ ಫ್ರೀ ಬಂದಾಗಿನಿಂದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಬಂದಿರುವೆ, ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಹುಲಿಗೆಮ್ಮ, ವೃದ್ದೆ, ಕುರುಗೋಡು ನಿವಾಸಿ.

 

          ಈ ಹಿಂದೆ ಬಸ್‍ನಲ್ಲಿ ಓಡಾಡಲು ಬಸ್‍ಪಾಸ್ ಮಾಡಿಸಬೇಕಿತ್ತು. ಈಗ ಶಕ್ತಿ ಯೋಜನೆಯಿಂದ ಬಸ್‍ನಲ್ಲಿ ಓಡಾಡಲು ಉಚಿತ ಸೌಲಭ್ಯ ಸಿಕ್ಕಿದೆ. ಬಸ್‍ಪಾಸ್‍ಗೆ ವ್ಯಯಿಸುತ್ತಿದ್ದ ಹಣವನ್ನು ಪುಸ್ತಕ, ಪೆನ್ನು ಮತ್ತಿತರ ಲೇಖನ ಸಾಮಗ್ರಿ ಕೊಂಡುಕೊಳ್ಳಲು ಅನುಕೂಲ ಆಗಿದೆ.

 

ಅರುಣಾ, ವಿದ್ಯಾರ್ಥಿನಿ, ಬಳ್ಳಾರಿ.

Facebook
Twitter
LinkedIn
WhatsApp
Telegram
Print
Email

Leave a Comment

Your email address will not be published. Required fields are marked *

Translate »
Scroll to Top