ಬಳ್ಳಾರಿ: ಬಳ್ಳಾರಿ ಜಿಲ್ಲಾ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ನಾನು ಎಂದೆಂದಿಗೂ ಕೂಡಾ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಬಳ್ಳಾರಿಯಲ್ಲಿ ಏರ್‌ಪೋರ್ಟ್ ನಿರ್ಮಾಣ, ಏರ್‌ಪೋರ್ಟ್‌ನಿಂದ ಹಂಪಿವರೆಗೆ ಗ್ರೀನ್‌ಫೀಲ್ಡ್ ರಸ್ತೆ ಮತ್ತಿತರೆ ಯೋಜನೆಗಳು ಜಾರಿಗೆ ಈಗಿನ ಜಿಲ್ಲಾ ಸಚಿವ, ಶಾಸಕರು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಗಂಗಾವತಿಯ ಶಾಸಕರೂ ಆಗಿರುವ ಕೆಆರ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ನುಡಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ನಗರದ ಅವಂಭಾವಿಯಲ್ಲಿನ ಪಕ್ಷದ ಕಾರ್ಯಾಲಯದ ಬಳಿಯಲ್ಲಿನ ಮೈದಾನದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವರ್ಚ್ಯುವಲ್ ಮೂಲಕ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಸತತವಾಗಿ ೧೩ ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಸ್ರಾರು ಜೋಡಿಗಳ ಮದುವೆ ಮಾಡಿದ್ದೇವೆ. ಬಡಜನರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸ್ಪಂಧಿಸಿದ್ದೇನೆ. ನನ್ನ ಏಳ್ಗೆಯನ್ನು ಸಹಿಸಲಾಗದೆ, ಕುತಂತ್ರ ಮಾಡಿ ನನ್ನನ್ನು ಬಳ್ಳಾರಿಯಿಂದ ದೂರ ಮಾಡಲಾಯಿತು. ಆದರೂ ಸಹ ನಾನು ಎದೆಗುಂದಲಿಲ್ಲ. ಜನರ ಆಶೀರ್ವಾದ ಬಲದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ನಮ್ಮವರೇ ನನಗೆ ವಿಶ್ವಾಸ ದ್ರೋಹ ಬಗೆದರು, ಕುತಂತ್ರ ನಡೆಸಿದರು ಎಂದರು.
ನನಗೆ ದ್ರೋಹ ಮಾಡಿದವರು, ಸಹಕರಿಸಿದವರು, ನನ್ನ ಪತ್ನಿ ಲಕ್ಷ್ಮಿ ಅರುಣ ಅವರನ್ನು ಸೋಲಿಸಲು ಯತ್ನಿಸಿ, ಶತ್ರುಗಳೊಂದಿಗೆ ಕೈಜೋಡಿಸಿದರಿಂದ ವಿರೋಚಿತವಾಗಿ ಹೋರಾಡಿ ಸೋಲಬೇಕಾಯಿತಾದರೂ ನಮ್ಮನ್ನು ಸೋಲಿಸಲು ಹೋದವರು ಜನರಿಂದ ತಿರಸ್ಕೃತಗೊಂಡು ಸೋಲುಂಡು ಮನೆಯಲ್ಲಿ ಕುಳಿತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಅದಕ್ಕೆ ಎದೆಗುಂದಬೇಕಾಗಿಲ್ಲ. ನನ್ನನ್ನು ನಂಬಿಕೊಂಡಿರುವ ಕಾರ್ಯಕರ್ತರು, ಬೆಂಬಲಿಗರ ಹಿತ ಕಾಯುತ್ತೇನೆ. ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಕನಸು. ಅದನ್ನು ನನಸಾಗಿಸಲು ಹೋರಾಡೋಣ. ಬಳ್ಳಾರಿಯಲ್ಲಿ ಅಭಿವೃದ್ಧಿ ಕುಂಠಿತವಾದರೆ ಸಚಿವ – ಶಾಸಕರು ನಿರ್ಲಕ್ಷಿಸಿದರೆ ರಚನಾತ್ಮಕವಾಗಿ ಹೋರಾಡೋಣ ಎಂದು ಜನಾರ್ದನರೆಡ್ಡಿ ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ರಾಜಕೀಯ ಮಾಡೋಣ. ಉಳಿದ ಸಮಯದಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಎಲ್ಲರೂ ಶ್ರಮಿಸಬೇಕು. ಈ ಹಿಂದೆ ನಾನು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲೂ ಕೆಲವರಿಗೆ ಆಗೊಲ್ಲ. ಈಗಿನ ಶಾಸಕ – ಸಚಿವರು ಅಭಿವೃದ್ಧಿಗೆ ಪ್ರಯತ್ನಿಸಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರಗತಿಗೆ ಒತ್ತು ನೀಡಲಿ. ಅಭಿವೃದ್ಧಿಗೆ ಕೆಆರ್‌ಪಿಪಿ ಯಾವತ್ತೂ ಸಹಕರಿಸುತ್ತದೆ ಎಂದರು.
ಬಡವರು, ಸಾರ್ವಜನಿಕರು, ರೈತರ ಇಳಿತಿಗಾಗಿ ನಾನು ಎಂದೆಂದಿಗೂ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಬಳ್ಳಾರಿಯ ಬಗ್ಗೆ ನನಗಿದ್ದ ಕನಸು ? ಆಶಯಗಳನ್ನು ನನಸು ಮಾಡಲು ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಅವರು ಶ್ರಮಿಸುತ್ತಾರೆ, ಸಹಕರಿಸುತ್ತಾರೆ. ನಾನು ಎಂದೆಂದಿಗೂ ಕಾರ್ಯಕರ್ತರ ಜೊತೆ ಇರುತ್ತೇನೆ. ಯಾರೇ ಆಗಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ. ಆಡಳಿತ ಪಕ್ಷದ ಶಾಸಕ, ಸಚಿವರು ಅಭಿವೃದ್ಧಿಲ್ಲಿ ರಾಜಕೀಯ ಮಾಡದಿರಲಿ ಎಂದು ಆಗ್ರಹಿಸಿದರು.
ಕೆಆರ್‌ಪಿ ಪಕ್ಷದ ಪರವಾಗಿ ಕೆಲಸ ಮಾಡಿ ಶ್ರಮಿಸಿದವರಿಗಷ್ಟೇ ಕೆಲಸ ಮಾಡಿಕೊಡಬಾರದೆಂದು ಶಾಸಕರೊಬ್ಬರು ಹೇಳುತ್ತಿರುವುದು ಹುಚ್ಚುತನ. ಚುನಾವಣೆ ಆದ ಮೇಲೆ ರಾಜಕೀಯ ಬೆರೆಸಬಾರದು. ಇತ್ತೀಚಿಗೆ ವಿಧಾನಸಭೆ ಅಧಿವೇಶನದಲ್ಲಿಯೂ ನಾನು ಬಳ್ಳಾರಿ ವಿಮಾನ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿಯಿಂದ ಹಂಪಿಗೆ ಗ್ರೀನ್‌ಫೀಲ್ಡ್ ರಸ್ತೆ ನಿರ್ಮಾಣ ಕುರಿತಂತೆ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದಿದ್ದೇನೆ. ಸಚಿವ ಎಂ.ಬಿ.ಪಾಟೀಲ್‌ರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಈಗಿರುವ ಸಚಿವ ಶಾಸಕರು ಈ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸಿ ಉತ್ತಮವಾಗಿ ಕೆಲಸ ಮಾಡಲಿ ಎಂದು ಜನಾರ್ದನರೆಡ್ಡಿ ಹೇಳಿದರಲ್ಲದೆ, ಸಾಮೂಹಿಕ ವಿವಾಹದಲ್ಲಿ ಮ,ದುವೆಯಾಗುತ್ತಿರುವ ಜೋಡಿಗಳಿಗೆ ಶುಭ ಕೋರಿದರು.