ಯಶಸ್ವಿಯಾಗಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ, ನಗರದ ಅವ್ವಂಭಾವಿ ರಸ್ತೆಯಲ್ಲಿರುವ ಕೆಆರ್‌ಪಿ ಪಕ್ಷದ ಕಾರ್ಯಾಲಯದ ಬಳಿಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ, ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು. 36 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

 

ಕಲ್ಯಾಣಮಠದ ಶ್ರೀಗಳಾದ ಕಲ್ಯಾಣ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕೆಆರ್‌ಪಿ ಪಕ್ಷದ ಅಧಿನಾಯಕಿ ಲಕ್ಷ್ಮೀ ಅರುಣಾ ಜನಾರ್ದನರೆಡ್ಡಿಯವರು ಮಾತನಾಡಿ, ಸಾಮೂಹಿಕ ವಿವಾಹಕ್ಕೆ ಇತಿಹಾಸವಿದೆ. ಬಳ್ಳಾರಿಯಲ್ಲಿ ಹಲವಾರು ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹಗಳನ್ನು ಅದ್ಧೂರಿಯಾಗಿ ನೆರವೇರಿಸಿದ ಜನಾರ್ದನರೆಡ್ಡಿಯವರು ಇತಿಹಾಸ ನಿರ್ಮಿಸಿದ್ದಾರೆ. ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಜಿ ಸಚಿವ ಜನಾರ್ದನರೆಡ್ಡಿಯವರ ಕನಸು. ಕೆಲ ವರ್ಷಗಳು ಇವು ನಡೆದಿರಲಿಲ್ಲ. ಈಗ ಮತ್ತೆ ಇದಕ್ಕೆ ಚಾಲನೆ ನೀಡಲಾಗಿದೆ ಎಂದರು.

ಜನಾರ್ದನರೆಡ್ಡಿಯವರ ಜನಪ್ರಿಯತೆ ಸಹಿಸದೇ ಅವರ   ವಿರೋಧಿಗಳು ಷಡ್ಯಂತ್ರ ಮಾಡಿ, ಬಳ್ಳಾರಿಯಿಂದ ದೂರ ಇರುವಂತೆ ಮಾಡಲಾಯಿತು. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಅವರು ಅನೇಕ ಕನಸು ಕಂಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇನ್ನುಳಿದ ಕೆಲಸ -ಕಾರ್ಯಗಳನ್ನು ನೆರವೇರಿಸಲು ನಾನು ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ, ನನ್ನ ಪುತ್ರಿ ‘ಬ್ರಹ್ಮಿಣಿ’ಯವರು ಕೂಡಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಥ್ ನೀಡಿದ್ದಾಳೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಅದೇನೇ ಇದ್ದರೂ, ಬಳ್ಳಾರಿಯ ಅಭಿವೃದ್ಧಿಗೆ, ಪಕ್ಷದ ಕಾರ್ಯಕರ್ತರ ಹಿತ ಕಾಪಾಡಲು ನಾನು ಸದಾ ಸಿದ್ಧ ಎಂದರು.

 

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನೂತನ ದಂಪತಿಗಳು ಪರಸ್ಪರರು ಅರ್ಥ ಮಾಡಿಕೊಂಡು, ಸಾಮರಸ್ಯದ ಜೀವನ ನಡೆಸಬೇಕು, ತಾಳ್ಮೆ , ಸಹನೆ ಮೈಗೂಡಿಸಿಕೊಂಡು, ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.

1999ರಲ್ಲಿ ಮಾಜಿ ಕೇಂದ್ರ ಸಚಿವೆ ಸುಷ್ಮಾಸ್ವರಾಜ್ ಅವರ ಆಶಯ, ಆಶೀರ್ವಾದದೊಂದಿಗೆ ಶ್ರೀವರಮಹಾಲಕ್ಷ್ಮಿ ಪೂಜೆ, ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಯಿತು. ಆದರೆ ಕೆಲವರ ಕುತಂತ್ರದಿಂದಾಗಿ ಜನಾರ್ದನರೆಡ್ಡಿ ಬಳ್ಳಾರಿಯಿಂದ ದೂರ ಇರಬೇಕಾಗಿ ಬಂದಿತ್ತು. ಇದೀಗ ಮತ್ತೆ ಅವರ ಮಾರ್ಗದರ್ಶನ, ನೇತೃತ್ವದೊಂದಿಗೆ ಈ ವರ್ಷದಿಂದ ಮತ್ತೆ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು, ಇನ್ನು ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ನುಡಿದರು.

ಕೆಆರ್‌ಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರ್‌ಗೌಡ ಮಾತನಾಡಿ, ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಕಾರ್ಯಕ್ರಮವು ಜನಾರ್ದನರೆಡ್ಡಿಯವರ ಕನಸಿನ ಯೋಜನೆ. ಅನೇಕ ವರ್ಷಗಳ ಕಾಲ ಅವರ ನೇತೃತ್ವದಲ್ಲಿ ಇದನ್ನು ಯಶಸ್ವಿಯಾಗಿ ನಡೆಸಿ, ಸಹಸ್ರಾರು ಜೋಡಿಗಳಿಗೆ ವಿವಾಹ ಮಾಡಲಾಗಿದೆ. ಕೆಲ ಕಾರಣಗಳಿಂದ ನಿಂತಿದ್ದ ಈ ಕಾರ್ಯಕ್ಕೆ ಈ ವರ್ಷದಿಂದ ಮತ್ತೆ ಚಾಲನೆ ನೀಡಲಾಗಿದೆ. ಜನಾರ್ದನರೆಡ್ಡಿ ಅವರ ಧರ್ಮಪತ್ನಿ, ಕೆಆರ್‌ಪಿಪಿ ಅಧಿನಾಯಕಿ ಲಕ್ಷ್ಮೀ ಅರುಣಾ ಅವರ ನೇತೃತ್ವದಲ್ಲಿ ಇಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಜನಾರ್ದನರೆಡ್ಡಿ ಅವರಿಗೆ ಸಾಮಾಜಿಕ ಬದ್ಧತೆ, ಕಳಕಳಿ-ಕಾಳಜಿ ಇದ್ದು, ಬಡವರಿಗೆ ನೆರವಾಗುವ ಮಾನವೀಯ ಸೇವಾಗುಣ ಅವರಲ್ಲಿದೆ ಎಂದರು.

 

ಸಂಡೂರು ಕ್ಷೇತ್ರದ ಕೆಆರ್‌ಪಿಪಿ ಧುರೀಣ ಕೆ.ಎಸ್.ದಿವಾಕರ್ ಮಾತನಾಡಿ, ಗಾಲಿ ಜನಾರ್ದನರೆಡ್ಡಿಯವರ ಜನಪರ ಕಾಳಜಿ ಬಗ್ಗೆ ತಿಳಿಸಿ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಅವರು ಶ್ರಮಿಸಿದ ಪರಿ ಎಲ್ಲರಿಗೂ ಮಾದರಿಯಾಗಿದೆ. ರೆಡ್ಡಿಯವರು ಅಭಿವೃದ್ಧಿಯ ಹರಿಕಾರರು. ಅವರ ನೇತೃತ್ವದಲ್ಲಿ ಕೆಆರ್‌ಪಿ ಪಕ್ಷವನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಕಟ್ಟಿ ಬೆಳೆಸೋಣ. ಮುಂಬರುವ ಜಿಲ್ಲಾ-ತಾಲ್ಲೂಕು ಪಂಚಾಯ್ತಿ ಚುನಾವಣೆ, ಲೋಕಸಭೆ ಚುನಾವಣೆಗಾಗಿ ಜನಾರ್ದನರೆಡ್ಡಿ ಮಾರ್ಗದರ್ಶನದಲ್ಲಿ ಪಕ್ಷವನ್ನು ಅಣಿಗೊಳಿಸಿ, ವಿಜಯಭೇರಿ ಮೊಳಗಿಸೋಣ. ರೆಡ್ಡಿಯವರ ನಾಯಕತ್ವದಲ್ಲಿ ನಾವೆಲ್ಲರೂ ವೀರ ಸೇನಾನಿಗಳಂತೆ ಹೋರಾಡಿ, ಗೆಲುವು ಸಾಧಿಸೋಣ. ಸೋಲೇ ಗೆಲುವಿನ ಮೆಟ್ಟಿಲು ಎಂದು ಅರಿತು, ಸಂಡೂರಿನಲ್ಲಿ ಪಕ್ಷವನ್ನು ಪ್ರಬಲವಾಗಿ ಕಟ್ಟುತ್ತಿದ್ದು, ಮುಂದಿನ ದಿನಗಳಲ್ಲಿ ವಿಜಯಪತಾಕೆ ಹಾರಿಸುತ್ತೇವೆ ಎಂದರು.

ಸಿರುಗುಪ್ಪ ಅಭ್ಯರ್ಥಿ ಧರಪ್ಪ ನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವನ್ನು ಆರಂಭಿಸಿದವರೇ ನಮ್ಮ ನಾಯಕ ಜನಾರ್ದನರೆಡ್ಡಿಯವರು. ಅವರು ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದವು. ಅವರ ಅಧಿಕಾರದ ಅವಧಿಯಲ್ಲಿ, ಬಳ್ಳಾರಿಯು ಸುವರ್ಣ ವೈಭೋಗ ಪಡೆದುಕೊಂಡಿತ್ತು ಎಂದರಲ್ಲದೇ, ನಾವೆಲ್ಲರೂ ಸೇರಿ, ಕೆಆರ್‌ಪಿಪಿಯನ್ನು ಬಲಿಷ್ಠವಾಗಿ ಕಟ್ಟೋಣ ಎಂದರು.

 

ಕಲ್ಯಾಣಮಠದ ಶ್ರೀಗಳಾದ ಕಲ್ಯಾಣ ಸ್ವಾಮೀಜಿಗಳು ನೂತನ ದಂಪತಿಗಳನ್ನು ಹರಸಿ, ಆಶೀರ್ವಚನ ನೀಡಿ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿಯವರ ಜನಪರ ಚಿಂತನೆ, ಅಭಿವೃದ್ಧಿ ಪರ ಕಳಕಳಿ, ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು.

ಜನಾರ್ದನರೆಡ್ಡಿಯವರ ಪುತ್ರಿ ಬ್ರಹ್ಮಿಣಿ, ನಗರ ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಕಲ್ಪನಾ ವೆಂಕಟರಾಮರೆಡ್ಡಿ, ಕೆಆರ್‌ಪಿಪಿ ಧುರೀಣರಾದ ಬಿ.ವಿ.ಶ್ರೀನಿವಾಸರೆಡ್ಡಿ, ವೆಂಕಟರಮಣ, ಬಿ.ಕೆ.ಬಿ.ಎನ್.ಮೂರ್ತಿ, ಹಂಪಿ ರಮಣ, ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರಗೌಡ, ರಾಜ್ಯ ಯುವ ಅಧ್ಯಕ್ಷ ಭೀಮಾ ಶಂಕರ್ ಪಾಟೀಲ್, ಎಂ.ಅಲಿಖಾನ್, ಉಮಾರಾಜ್, ಮುನ್ನಾಭಾಯಿ, ಶಿವಾರೆಡ್ಡಿ, ಮಲ್ಲಿಕಾರ್ಜುನ್‌ಆಚಾರ್, ಹುಂಡೇಕರ್ ರಾಜೇಶ್, ಕೊಳಗಲ್ಲು ಅಂಜಿನಿ, ಫಾರುಕ್, ನರಸಿಂಹ ಬಾಬು, ಪ್ರಕಾಶ್ ರೆಡ್ಡಿ, ಸುನಿಲ್ ರೆಡ್ಡಿ ಮತ್ತಿತರೆ ಅನೇಕರು ಪಾಲ್ಗೊಂಡಿದ್ದರು. ಪಕ್ಷದ ವಕ್ತಾರ ಸಂಜಯ್‌ಬೆಟಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು.

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top