ಬೇರೆ ಪಕ್ಷಗಳಲ್ಲಿದ್ದರೂ ಶ್ರೀನಿವಾಸ್ ಪ್ರಸಾದ್ ಹಾಗೂ ನನ್ನ ನಡುವೆ ಉತ್ತಮ ಸ್ನೇಹ ಬಾಂಧವ್ಯ ಮತ್ತು ಒಡನಾಟವಿತ್ತು – ಸಿಎಂ ಸಿದ್ದರಾಮಯ್ಯ

ಮೈಸೂರು: ಬೇರೆ ಪಕ್ಷಗಳಲ್ಲಿದ್ದರೂ ನನ್ನ ಹಾಗೂ ಶ್ರೀನಿವಾಸ್ ಪ್ರಸಾದ್ ರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಹಾಗೂ ಒಡನಾಡವಿದ್ದು, ಪರಸ್ಪರ ರಾಜಕೀಯ ವೈರುಧ್ಯಗಳಿದ್ದರೂ ತಮ್ಮ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ರವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಮೈರೂರಿನಲ್ಲಿ ನಡೆದ ರಾಜಕೀತಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮೊದಲು ಜನತಾ ದಳ ಪಕ್ಷದಿಂದ ಶ್ರೀನಿವಾಸ್ ಪ್ರಸಾದ್ ರವರು ಲೋಕಸಭೆ ಹಾಗೂ ನಂತರ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ ಶ್ರೀನಿವಾಸ್ ಪ್ರಸಾದ್ ಹಾಗೂ ನಾನು ಬೇರೆ ಪಕ್ಷಗಳಲ್ಲಿದ್ದರೂ , ನಮ್ಮಲ್ಲಿ ಪರಸ್ಪರ ಸ್ನೇಹ ಹಾಗೂ ಗೌರವಗಳಿದ್ದವು.  ಅವರು ವಿವಿಧ ಪಕ್ಷಗಳಲ್ಲಿ ಹಲವು ನಾಯಕರೊಂದಿಗೆ ಸ್ನೇಹ ಹಾಗೂ ಒಡನಾಟವನ್ನು ಹೊಂದಿದ್ದರು. ಮನುಷ್ಯತ್ವದಿಂದ ಕೂಡಿದ ಸಜ್ಜನರು. ಅವರು ಯಾವುದೇ ಪಕ್ಷದಲ್ಲಿದ್ದರೂ, ಡಾ. ಅಂಬೇಡ್ಕರ್ ರವರ ವಿಚಾರಧಾರೆಗಳ ಅನುಯಾಯಿಯಾಗಿದ್ದರು ಎಂದರು.

ರಾಜಕೀಯ ಟೀಕೆಗಳು ಸ್ವಾಭಾವಿಕ:

ಸಂವಿಧಾನದ ಬಗ್ಗೆ ಅಪಾರ ಗೌರವ ಹೊಂದಿದ್ದರು.ಅವಕಾಶ ವಂಚಿತರಿಗೆ ಜಾತ್ಯಾತೀತವಾಗಿ ಸಮಾನ ಅವಕಾಶವನ್ನು ನೀಡಬೇಕೆಂಬುದನ್ನು ನಂಬಿ ಸಂವಿಧಾನದ ಬಗ್ಗೆ ಬದ್ಧತೆಯನ್ನು ಹೊಂದಿದ್ದರು.  ಬುದ್ಧ,ಬಸವಣ್ಣ,ಗಾಂಧೀಜಿಯವರ ವಿಚಾರಧಾರೆಗಳನ್ನು ನಂಬಿ ನಡೆಯುವವರು ಎಂದಿಗೂ ಮನುಷ್ಯತ್ವವನ್ನು ಪಾಲಿಸುವವರಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪರಸ್ಪರ ಗೌರವಿಸಬೇಕೇ ಹೊರತು ದ್ವೇಷಿಸಬಾರದು. ರಾಜಕೀಯ ವೈರುಧ್ಯಗಳಿಂದಾಗಿ ಪರಸ್ಪರ ಟೀಕಿಸುವುದು ಸ್ವಾಭಾವಿಕವಾಗಿದ್ದರೂ, ನಮ್ಮ ಸ್ನೇಹಕ್ಕೆಂದೂ ಧಕ್ಕೆ ಬಂದಿಲ್ಲ. ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದ ನಂತರ, ನನ್ನ ಕೆಲವು ಶಾಸಕಮಿತ್ರರೊಂದಿಗೆ ಅವರನ್ನು ಭೇಟಿ ಮಾಡಿದ್ದೆ. ಅವರೊಂದಿಗಿನ ಅರ್ಧ ಗಂಟೆಯ ಭೇಟಿಯಲ್ಲಿ ನಮ್ಮ ಹಿಂದಿನ ಸ್ನೇಹ ಮರುಕಳಿಸಿತ್ತು. ನಮ್ಮ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆಯಲಿಲ್ಲ.  ಆದರೆ ಶ್ರೀನಿವಾಸ್ ಪ್ರಸಾದ್ ಅವರು, ರಾಜಕೀಯದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿತ್ತು ಎಂದು ಹೇಳಿದ್ದರು ಎಂದರು.

ಸ್ವಾಭಿಮಾನವಿಲ್ಲದಿದ್ದರೆ ಗುಲಾಮಗಿರಿಗೆ ಬಲಿಯಾಗಬೇಕಾಗುತ್ತದೆ:

 

ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಹಾಗೂ  ಬಡವರಿಗೆ ಸ್ವಾಭಿಮಾನವಿರಲೇಬೇಕು. ನಮ್ಮಲ್ಲಿ ಸ್ವಾಭಿಮಾನವಿದ್ದರೆ  ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯ, ಇಲ್ಲದಿದ್ದರೆ ಗುಲಾಮಗಿರಿಗೆ ಗುರಿಯಾಗಬೇಕಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಅವರು ಎಂದೂ ಗುಲಾಮಗಿರಿಗೆ ಬಲಿಯಾಗಿರಲಿಲ್ಲ. ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದವರು. ಹಳೆಯ ತಲೆಮಾರಿನ ಈ ರಾಜಕೀಯ ಮುತ್ಸದ್ದಿಯ ನಿಧನದಿಂದ ಮಹತ್ತರವಾದ ರಾಜಕೀಯ ಕೊಂಡಿ ಕಳಚಿದಂತಾಗಿದೆ. ಅವರ ವಿಚಾರಧಾರೆಗಳು ಇಂದಿನ ಯುವಜನರಿಗೆ ಆದರ್ಶವಾಗಿರಬೇಕು ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top