ಬಳ್ಳಾರಿ : ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿಕೊಂಡಿದ್ದು, ಕೂಡಲೇ ಅದನ್ನು ತೆಗೆಸುವಂತೆ ತುಂಗಭದ್ರಾ ಮಂಡಳಿಯವರು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡ ಹೂಳಿನಿಂದ ಸುಮಾರು 300 ಟಿಎಂಸಿಗೂ ಹೆಚ್ಚು ನೀರು ನದಿಯ ಮೂಲಕ ಸಮುದ್ರಕ್ಕೆ ಸೇರುತ್ತಿದ್ದು, ಅದನ್ನು ತಡೆಗಟ್ಟುವ ಮೂಲಕ ನೀರನ್ನು ಸದ್ಭಳಕೆ ಮಾಡಿಕೊಳ್ಳುವತ್ತ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.
ಜಲಾನಯನ ಪ್ರದೇಶದ ಸುಮಾರು 28,180 ಚದರ ಕಿಲೋಮೀಟರ್ ಸಂಗ್ರಹಣಾ ಪ್ರದೇಶದಲ್ಲಿ 132 ಟಿಎಂಸಿ ನೀರು ಅಣೆಕಟ್ಟು ನಿರ್ಮಾಣಗೊಂಡ ಆರಂಭದಲ್ಲಿ ಸಂಗ್ರಹವಾಗುತ್ತಿತ್ತು. ಆ ನೀರಿನಲ್ಲಿ ಕರ್ನಾಟಕಕ್ಕೆ 65%, ಆಂಧ್ರಪ್ರದೇಶಕ್ಕೆ 35% ಪ್ರಮಾಣದಲ್ಲಿ ಹಂಚಿಕೆಯಾಗಿರುತ್ತಿತ್ತು. ಇದರಿಂದ 3,62,795 ಹೆಕ್ಟೇರ್ ಪ್ರದೇಶ ನಿರಾವರಿಯಾಗಿರುತ್ತದೆ. ಆದರೆ ಜಲಾಶುಕ್ಕೆ ಸೇರುವ ಹೂಳು ತಡೆಯಲು, ಸೇರಿದ ಹೂಳು ತೆಗೆಯಲು ವೈಜ್ಞಾನಿಕವಾಗಿ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಆ ಕಾರಣದಿಂದ ಕಳೆದ 70 ವರ್ಷಗಳ ಅವಧಿಯಲ್ಲಿ 32 ಟಿಎಂಸಿಗೂ ಹೆಚ್ಚು ಹೂಳು ಜಲಾಶಯದಲ್ಲಿ ಸೇರಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿ ಕರ್ನಾಟಕ ರಾಜ್ಯದ ರೈತರಿಗೆ ಬಹಳ ತೊಂದರೆಯಾಗಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದವರಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದರು.
ಸುಮಾರು 32 ಟಿಎಂಸಿ ನೀರು ಸಂಗ್ರಹಣಾ ಜಾಗ ಹೂಳು ತುಂಬಿದೆ ಎಂದು ತುಂಗಭದ್ರಾ ಜಲಾಶಯ ಮಂಡಳಿಗೆ ರೈತರು ತಿಳಿಸುತ್ತಾ ಬಂದಿದ್ದರೂ ಏನೂ ಪ್ರಯೋಜನ ಆಗಿರುವುದಿಲ್ಲ. ಇದರ ಪರಿಣಾಮವಾಗಿ ಜಲಾಶಯದ ನೀರಿನ ಸಾಮರ್ಥ್ಯ 132 ಟಿಎಂಸಿ ಬದಲು 100 ಟಿಎಂಸಿಗೆ ಇಳಿದಿರುತ್ತದೆ. ಅಷ್ಟು ಪ್ರಮಾಣದ ಹೂಳು ಇದ್ದರೂ ತುಂಗಭದ್ರಾ ಜಲಾಶಯ ಮಂಡಳಿ ಹೂಳೆತ್ತುವುದಕ್ಕಾಗಲಿ ಅಥವಾ ಪರ್ಯಾಯವಾಗಿ ನೀರು ಸಂಗ್ರಹಿಸಲು ಮುಂದಾಗಿಲ್ಲ. ಇದರಿಂದ ಪ್ರತಿ ವರ್ಷ ಹೆಚ್ಚುವರಿಯಾಗಿ 300 ಟಿಎಂಸಿ ಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಇದರನ್ನು ಸರಿಪಡಿಸಲು ಮಂಡಳಿಯಾಗಲಿ, ಆಂಧ್ರ, ತೆಲಂಗಾಣ ಮತ್ತು ಕೇಂದ್ರ ಸರ್ಕಾರವಾಗಲಿ ಮುಂದಾಗದೆ ಇರುವುದು ವಿಪರ್ಯಾಸ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಕಾಂಗ್ರೆಸ್ ಮುಖಂಡ ಬಿ.ಎಂ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.