ಟೆಲಿ ಐಸಿಯು ಕ್ಲಸ್ಟರ್” ವ್ಯವಸ್ಥೆಯನ್ನು ಉದ್ಘಾಟಿಸಿದ ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ “ಬೆಂಗಳೂರು ಮತ್ತು ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್” ವ್ಯವಸ್ಥೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.

ಇದಕ್ಕೂ ಮೊದಲು 10 ಶ್ರೀಕಾಂತ್ ನಾದಮುನಿ ಅವರಿಂದ ವ್ಯವಸ್ಥೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರ ಪಡೆದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್ ಎಂ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ಸಚಿವ ಬಿ ನಾಗೇಂದ್ರ, ಶಾಸಕ ಡಾ. ಅಜಯ್ ಸಿಂಗ್ ವಿಡಿಯೋ ಸಂವಾದದ ಮೂಲಕ ಪಾಲ್ಗೊಂಡರು.

ಬೆಂಗಳೂರು ಮತ್ತು ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

 

ತಾಲೂಕು ಮಟ್ಟದಲ್ಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ಇಲ್ಲಿಂದಲೇ ಅವುಗಳನ್ನು ಪರಿಶೀಲಿಸುವಂತಹ ತಂತ್ರಜ್ಞಾನಗಳ ಬಳಕೆ ಕಾರ್ಯ ನಡೆಯುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರದ ಹೆಜ್ಜೆ. ಈ ಕಾರ್ಯಕ್ಕೆ ಅನೇಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ತಮ್ಮ ಸಹಕಾರ ನೀಡುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ 5-10 ಐಸಿಯು ಬೆಡ್ ಗಳ ಆರೋಗ್ಯ ಘಟಕ ಸ್ಥಾಪಿಸಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಅಲ್ಲಿ ದಾಖಲಿಸಿ ಇಲ್ಲಿಂದ ಅವರ ಆರೋಗ್ಯವನ್ನು ಪರಿಶೀಲಿಸಿ. ಅವರಿಗೆ ಅಗತ್ಯ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ಎಲ್ಲೆಡೆ ಜಾರಿ ಮಾಡಬೇಕು.

ಇದು ಆರೋಗ್ಯ ಕ್ಷೇತ್ರದ ಯೋಜನೆ ಮಾತ್ರವಲ್ಲ. ಶಿಕ್ಷಣ ಕ್ಷೇತ್ರದ ಕ್ರಾಂತಿಯೂ ಆಗಿದೆ. ನಮ್ಮ ಬದುಕಿನಲ್ಲಿ ಪ್ರತಿನಿತ್ಯ ತಾಂತ್ರಿಕತೆ ವಿಚಾರವಾಗಿ ಅನೇಕ ಸಂಶೋಧನೆ ನಡೆಯುತ್ತಿವೆ. ನಮ್ಮ ರಾಜ್ಯ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಆರೋಗ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಹೆಲ್ತ್ ಟೂರಿಸಂ ನಲ್ಲೂ ನಮ್ಮ ರಾಜ್ಯ ಹೆಸರು ಮಾಡಿದೆ. ಖಾಸಗಿ ಆರೋಗ್ಯ ಸೇವಾದಾರರು ಕೂಡ ಈ ವಿಚಾರವಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ದಿನೇಶ್ ಗೂಂಡುರಾವ್ ಅವರ ಆರೋಗ್ಯ ಇಲಾಖೆಯಲ್ಲಿರುವ ಅಧಿಕಾರಿಗಳು ಬಹಳ ಬದ್ಧತೆ ಹೊಂದಿದ್ದಾರೆ. ಇಂತಹ ತಂಡದಿಂದ ಮಾತ್ರ ಈ ರೀತಿಯ ಕಾರ್ಯಕ್ರಮ ನೀಡಲು ಸಾಧ್ಯ. ಗ್ರಾಮೀಣ ಪ್ರದೇಶದ ಜನರನ್ನು ಬೆಂಗಳೂರಿಗೆ ತರುವಷ್ಟರಲ್ಲಿ ಅನಾಹುತ ಸಂಭವಿಸುತ್ತವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಐಸಿಯು ಬೆಡ್ ಗಳ ಕೇಂದ್ರಗಳನ್ನು ಸ್ಥಾಪಿಸಬೇಕು.

 

ಜನರ ಆರೋಗ್ಯ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಆರೋಗ್ಯವೇ ನಮ್ಮ ನಿಜವಾದ ಆಸ್ತಿ. ಹೀಗಾಗಿ ನಾಡಿನ ಜನರ ಆರೋಗ್ಯ ಕಾಪಾಡಬೇಕು. ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಿದ್ದಾರೆ. ಈ ಕ್ಷೇತ್ರದಲ್ಲಿ 24 ತಾಸು ಕೂಡ ಕೆಲಸ ಮಾಡಬೇಕಾಗುತ್ತದೆ. ಅಂತಹ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮಾನವನ ಸೇವೆಗೆ ಮುಂದಾಗಿರುವುದಕ್ಕೆ ಅಭಿನಂದನೆಗಳು. ನಿಮ್ಮ ಜತೆ ಸರ್ಕಾರ ಸದಾ ನಿಲ್ಲಲಿದೆ. ಇಂತಹ ನೂರಾರು ಕ್ಯಾಂಪಸ್ ನಿರ್ಮಾಣ ಮಾಡಬೇಕು.

ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ರಾಜ್ಯ ಎಂದರೆ ಅದು ಕರ್ನಾಟಕ. ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ವೈದ್ಯರನ್ನು ತಯಾರು ಮಾಡಲಾಗುತ್ತಿದೆ. ಇಲ್ಲಿ ತಯಾರಾಗುವ ವೈದ್ಯರನ್ನು ಹೊರ ರಾಜ್ಯಗಳು ಹಾಗೂ ದೇಶಗಳಿಗೆ ರವಾನೆ ಮಾಡುತ್ತಿದ್ದೇವೆ. ನಮ್ಮ ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನು ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳುವಂತೆ ಮಾಡಿಕೊಳ್ಳುವಂತೆ ವ್ಯವಸ್ಥೆ ರೂಪಿಸುವಂತೆ ಸಲಹೆ ನೀಡುತ್ತೇನೆ.

ಖಾಸಗಿ ಮಾಫಿಯಾದಿಂದ 108 ಆಂಬುಲೆನ್ಸ್ ಗಳನ್ನು ದೂರವಿಡಬೇಕು:

 

ನಮ್ಮ 108 ಆಂಬುಲೆನ್ಸ್ ಗಳನ್ನು ಖಾಸಗಿ ಆಸ್ಪತ್ರೆ ಹಾಗೂ ಮಾಫಿಯಾಗಳ ಜತೆ ಕೈಜೋಡಿಸುವುದನ್ನು ತಪ್ಪಿಸಬೇಕು. ಆಂಬುಲೆನ್ಸ್ ಚಾಲಕರು ಖಾಸಗಿ ಆಸ್ಪತ್ರೆಗಳ ಜತೆ ಸೇರಿಕೊಂಡು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಅನೇಕ ದೂರುಗಳನ್ನು ಕೇಳಿದ್ದೇನೆ. ಈ ಮಾಫಿಯಾ ತಪ್ಪಿಸಬೇಕು. ಇತ್ತೀಚೆಗಷ್ಟೇ ನೂರಾರೂ ಆಂಬುಲೆನ್ಸ್ ಗಳನ್ನು ಪರಿಚಯಿಸಲಾಗಿತ್ತು. ಇಂತಹ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವುದು ನಮ್ಮ ಸರ್ಕಾರದ ಹೆಮ್ಮೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top