ಕೋಲಾರ ಕ್ಷೇತ್ರದಲ್ಲಿ ಡಿ.ಎಸ್. ವೀರಯ್ಯ ಅವರಿಗೆ ಟಿಕೆಟ್ ನೀಡಿ – ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಕ್ಕೂಟ ಆಗ್ರಹ

ಬೆಂಗಳೂರು :  ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದಲಿತ ಸಮುದಾಯದ ಹಿರಿಯ ಮುಖಂಡ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅವರಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಕ್ಕೂಟ ಬಿಜೆಪಿ ಹೈಕಮಾಂಡ್ ಗೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕರು ಡಾ. ಎಸ್.ಎನ್.ಮಂಜುನಾಥ್, ಕೋಲಾರ ಕ್ಷೇತ್ರವನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಳ್ಳಬೇಕು. ಕೋಲಾರ ಜನರ ನಾಡಿ ಮಿಡಿತ ಬಲ್ಲ, ಹಿರಿಯ ಧುರೀಣ ಡಿ.ಎಸ್. ವೀರಯ್ಯ ಅವರನ್ನು ಕಣಕ್ಕಿಳಿಸಿದರೆ ಅವರ ಗೆಲುವು ನಿಶ್ಚಿತ. ಡಿ.ಎಸ್. ವೀರಯ್ಯ ಕೋಲಾರ ಲೋಕಸಭಾ ಚುನಾವಣೆಯಲ್ಲಿ 2004 ಮತ್ತು 2009ರಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪನವರ ವಿರುದ್ದ ಸ್ಪರ್ಧಿಸಿ ಕ್ರಮವಾಗಿ ಕೇವಲ 11 ಮತ್ತು 13 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಂದಿನಿಂದಲೂ ಕೋಲಾರ ಜಿಲ್ಲೆಯ ಜನರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡು ಸಂಘಟನೆ ಮಾಡಿಕೊಂಡು ಬರುತ್ತಿರುವ ಡಿ.ಎಸ್. ವೀರಯ್ಯ ಅವರ ಬಗ್ಗೆ ಕ್ಷೇತ್ರದಲ್ಲಿ ಅನುಕಂಪವಿದೆ. ಯಾವುದೇ ವಿವಾದವಿಲ್ಲದ, ಪ್ರಾಮಾಣಿಕ ವ್ಯಕ್ತಿತ್ವದ ವೀರಯ್ಯ ಅವರ ಪರವಾಗಿ ಕೋಲಾರ ಜನತೆಯ ಒಲವಿದೆ ಎಂದರು.

 

ಕೋಲಾರ ಜಿಲ್ಲೆಯಲ್ಲಿನ ಪರಿಶಿಷ್ಟ ಜನಾಂಗದ ಬಲಗೈ ಮತದಾರರ ಸಂಖ್ಯೆ 4 ಲಕ್ಷದಷ್ಟಿದ್ದು,  2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿದ್ದು, ಗೆಲ್ಲುವ ಅವಕಾಶವಿದ್ದರೂ, ದುರದೃಷ್ಟವಶಾತ್  ಡಿ.ಎಸ್. ವೀರಯ್ಯ ಟಿಕೆಟ್ ನಿಂದ ವಂಚಿತರಾದರು. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಕೀರ್ತಿಯೂ ವೀರಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಹಾಲಿ ಚುನಾವಣೆಯಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್ ಮೈತ್ರಿಯಾಗಿರುವುದು ಸ್ವಾಗತಾರ್ಹ. ಇದರಿಂದ ಪಕ್ಷ ಗೆಲ್ಲುವ ಬಹುದೊಡ್ಡ ಅವಕಾಶ ದೊರೆತಿದೆ. ಡಿ.ಎಸ್ ವೀರಯ್ಯ ನವರು ರಾಜ್ಯದ ನೂರಾರು ದಲಿತ ಮತ್ತು ನೌಕರರ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿನ ಅನೇಕ ದಲಿತ ಸಮಾಜದ ಪ್ರಬಲ ನಾಯಕರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಡಿ.ಎಸ್ ವೀರಯ್ಯ ಅವರೇ ಸಮರ್ಥ ಅಭ್ಯರ್ಥಿ ಎಂಬುದು ದಲಿತ ಸಂಘಟನೆಗಳ ಆಗ್ರಹವಾಗಿದೆ. 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಅವರು, ಸಮಾಜದ ಅತ್ಯಂತ ದುರ್ಬಲ ವರ್ಗದಿಂದ ಹಂತ ಹಂತವಾಗಿ ಬೆಳೆದು ಬಂದವರು. ಬಡವರ ಬಗ್ಗೆ, ದೀನ ದಲಿತರ ಬಗ್ಗೆ ಚಿಂತಿಸುತ್ತಾ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆಯುತ್ತಾ ಬಂದಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಜನಪರವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

 

ಒಕ್ಕೂಟದ ಪ್ರಧಾನ ಕಾರ್ಯದರ್ಶಿ. ಅನಂತ ರಾಯಪ್ಪ, ಬುದ್ಧ ಧಮ್ಮ ಸಮಿತಿ ಹಾಗೂ . ಬಸವಲಿಂಗಪ್ಪ ಜಯಂತಿ ಆಚರಣೆ ಸಮಿತಿ ಸಂಚಾಲಕ ವೆಂಕಟೇಶ್ ಕುಮಾರ್, ಬಹುಜನ ಸಂಘರ್ಷ ಸಮಿತಿಯ ಚೆಲುವಯ್ಯ, ಕಮಲಾಮಗರದ ಡಿ.ಎಸ್.ಎಸ್‌  ಮುಖಂಡ ಆ.ಕೋ.ಗಂಗಾಧರ್, ಸಿದ್ದರಾಮಯ್ಯ. ಎನ್.ಜಿ.ಎಫ್‌ ಎಸ್.ಸಿ/ಎಸ್.ಟಿ ಫೆಡರೇಷನ್‌ ಮುಖಂಡ ಚನ್ನಯ್ಯ, ಕರ್ನಾಟಕ ವಿಡೋದಲೆ ಚಿರತೆಗಲ್ ಅಧ್ಯಕ್ಷರಾದ ಶ್ರೀ ನಜೀಬ್, ಎಸ್ಸಿ ಎಸ್ಟಿ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಯಶೋಧ, ಜಿಕೆವಿಕೆ ಕೃಷಿ ಕಾರ್ಮಿಕ ಮುಖಂಡರಾದ ಶ್ರೀ ಸಿದ್ದಪ್ಪ, ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top