ಯುವ ಕಾಂಗ್ರೆಸ್‍ನವರು ಸಿದ್ದರಾಮಯ್ಯ, ಡಿ.ಕೆ.ಶಿ. ಮನೆ ಮುಂದೆ ಪ್ರತಿಭಟನೆ ಮಾಡಬೇಕು ಸಿ.ಟಿ.ರವಿ ಸಲಹೆ

ಬೆಂಗಳೂರು: ಯುವ ಕಾಂಗ್ರೆಸ್‍ನವರು ಅಡ್ರೆಸ್ ತಪ್ಪಿ ಬಂದು ಬಿಜೆಪಿ ಕಾರ್ಯಾಲಯದ ಮುಂದೆ ಅಕ್ಕಿ ಕೊಡಲು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವ್ಯಂಗ್ಯವಾಗಿ ತಿಳಿಸಿದರು.

 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕ್ಕಿ ಕೊಡುವುದಾಗಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ಟವರು ಮೋದಿಯವರೇ? ಗ್ಯಾರಂಟಿ ಕಾರ್ಡ್ ಕೊಟ್ಟು ನಂಬಿಸಿದವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯುವ ಕಾಂಗ್ರೆಸ್‍ನವರು ಗ್ಯಾರಂಟಿ ಕಾರ್ಡ್‍ಗೆ ಸಹಿ ಮಾಡಿದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಮನೆ ಮುಂದೆ ಪ್ರತಿಭಟನೆ ಮಾಡಬೇಕು. ಸಹಿ ಹಾಕಿ ಮೋಸ ಮಾಡಿದ್ದೀರಿ; ಮರ್ಯಾದೆಯಿಂದ ಅಕ್ಕಿ ಕೊಟ್ಟು ನಮ್ಮ ಮರ್ಯಾದೆ ಉಳಿಸಿ ಎಂದು ಕೇಳಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್‍ನವರು ಇವರು ಸಹಿ ಹಾಕಿ ಕೊಟ್ಟ ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ಕೊಟ್ಟು ಬಂದಿದ್ದಾರೆ. ಈಗ ಅಕ್ಕಿ ಕೇಳುವಾಗ ಮುಖ ತೋರಿಸಲು ಆಗುತ್ತಿಲ್ಲ. ಅದಕ್ಕಾಗಿ ಕಾರ್ಡ್ ತೆಗೆದು ನೋಡಿ ಸಹಿ ಹಾಕಿದ್ದ ಸಿಎಂ, ಡಿಸಿಎಂ ವಿರುದ್ಧ ಪ್ರತಿಭಟನೆ ಮಾಡಲಿ; ಇಲ್ಲವೇ ಯುವ ಕಾಂಗ್ರೆಸ್‍ಗೆ ರಾಜೀನಾಮೆ ಕೊಡುವುದಾಗಿ ಧಮ್ಕಿ ಹಾಕಲಿ. ಅವರ ಮನೆ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಅಕ್ಕಿ ಕೊಡಿಸಲಿ. ಸಹಿ ಹಾಕಿದವರು ಅವರು; ಬಿಜೆಪಿಯವರಲ್ಲ ಎಂದು ನೆನಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‍ನ ನಾಯಕರು ಅಪಪ್ರಚಾರ ಮಾಡುವಾಗಲೂ ಮೋದಿಜಿ ಅವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 3 ವರ್ಷಗಳ ಕಾಲ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿಗೂ ಹೆಚ್ಚು ಜನರಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದಾರೆ. ನಂತರ 5 ಕೆಜಿಯಂತೆ ಅಕ್ಕಿ ಕೊಡುತ್ತಿದ್ದಾರೆ. ಈಗ ಕರ್ನಾಟಕದ ಬಡವರಿಗೆ ಸಿಗುತ್ತಿರುವುದು ಮೋದಿಯವರ ಅಕ್ಕಿ. ಮಾತು ಕೊಟ್ಟ ಸಿದ್ದರಾಮಯ್ಯನವರು ಮಾತು ತಪ್ಪಿದ್ದಾರೆ. ಆದ್ದರಿಂದ ಯುವ ಕಾಂಗ್ರೆಸ್ಸಿನವರು ಸಿಎಂ, ಡಿಸಿಎಂ ವಿರುದ್ಧ ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿವಿಧ ತನಿಖೆಗಳನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಅಧಿಕಾರ ಮಾಡುವವರು ಬದಲಾಗಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳು ಬದಲಾಗಿಲ್ಲ. ಯಾರ್ಯಾರ ಮೇಲೆ ಆರೋಪ ಇತ್ತೋ ಆ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೂ ಹೋಗಿದ್ದಾರೆ ಎಂದರು. ಅರ್ಕಾವತಿ ಹಗರಣದಲ್ಲಿ ನ್ಯಾಯಾಂಗ ತನಿಖೆ ನಡೆಸಿ ವರದಿ ಬಂದಿದೆ. ನ್ಯಾಯಮೂರ್ತಿ ಕೆಂಪಣ್ಣನವರ ಆ ವರದಿಯನ್ನು ಯಾವಾಗ ಸದನದ ಮುಂದಿಡುತ್ತೀರಿ? 8 ಸಾವಿರ ಕೋಟಿ ನಷ್ಟ ಆಗಿದೆ ಎಂದು ನ್ಯಾಯಮೂರ್ತಿ ಕೆಂಪಣ್ಣನವರ ಆಯೋಗದ ವರದಿ ತಿಳಿಸಿದೆ. ಅದರ ಮೇಲೆ ಎಫ್‍ಐಆರ್ ದಾಖಲಿಸಿ; ಆಗ ನೀವು ಪ್ರಾಮಾಣಿಕರೆಂದು ಒಪ್ಪಲು ಸಾಧ್ಯ ಎಂದರು. ಇಲ್ಲವಾದರೆ ಅವರ ಗ್ಯಾರಂಟಿ ಅನುಷ್ಠಾನ ಮಾಡದಿರುವ, ಕಂಡಿಷನ್ ಹಾಕುವಂಥ ವೈಫಲ್ಯಗಳನ್ನು ಮರೆಮಾಚಲು ಈ ತನಿಖೆ ಎಂಬಂತಾಗುತ್ತದೆ ಎಂದು ಟೀಕಿಸಿದರು.

ಅರ್ಕಾವತಿ ಹಗರಣ ಸಂಬಂಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಎಂದು ಕೇಳಿದರು. ಪತ್ರಕರ್ತರು ಅರ್ಕಾವತಿ ಹಗರಣ ಕುರಿತ ವರದಿ ಸಂಬಂಧ ಸಿಎಂ ಅವರನ್ನು ಪ್ರಶ್ನಿಸಬೇಕೆಂದು ಮನವಿ ಮಾಡಿದರು. ಬಹಳ ವಿನಯದಿಂದ ಸಿ.ಟಿ.ರವಿ ಈ ಸಲಹೆ ಕೊಟ್ಟಿದ್ದಾಗಿ ತಿಳಿಸಿ; ನನ್ನ ಸಲಹೆಯನ್ನು ಸಿದ್ದರಾಮಯ್ಯನವರು ಸ್ವೀಕರಿಸುತ್ತಾರೆ ಎಂದು ನುಡಿದರು.

ನಾವು ಮಂಗಾಟ ಮಾಡುತ್ತಿಲ್ಲ. ಸಿದ್ದರಾಮಯ್ಯನವರು ಜೆಡಿಎಸ್‍ನಲ್ಲಿದ್ದಾಗ ಮಂಗಾಟ ಮಾಡಿಯೇ ರಾಜಕೀಯದ ಬೇರನ್ನು ಗಟ್ಟಿ ಮಾಡಿಕೊಂಡವರು. ಕಾಂಗ್ರೆಸ್‍ನಲ್ಲೂ ಅವರ ಮಂಗಾಟವನ್ನು ಆ ಪಕ್ಷದವರು ಕೇಳಿದರೆ ಹೇಳುತ್ತಾರೆ. ಮಂಗಾಟ ಮತ್ತು ಅವರಿಗೆ ಅವಿನಾಭಾವ ಸಂಬಂಧವಿದೆ ಎಂದು ಈ ಸಂಬಂಧ ಪ್ರಶ್ನೆಗೆ ಉತ್ತರಿಸಿದರು.

ವಿಪಕ್ಷ ನಾಯಕನ ಆಯ್ಕೆ ಸಂಬಂಧ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾನು ಯಾವುದೇ ಹುದ್ದೆ ಕೇಳಿಕೊಂಡು ಹೋಗಿಲ್ಲ; ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೂ ಕೇಳಿದ್ದಲ್ಲ. ರಾಜ್ಯದಲ್ಲಿ ಅನ್ಯಾನ್ಯ ಜವಾಬ್ದಾರಿ, ಇಂಥದ್ದೇ ಬೇಕೆಂದು ಕೇಳಿದ್ದೇನಾ? ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

 

ಯಾವುದೇ ಹೊಂದಾಣಿಕೆಗೆ, ಮುಲಾಜಿಗೆ ಒಳಗಾಗದ ವ್ಯಕ್ತಿ ವಿಪಕ್ಷ ನಾಯಕನಾಗಲಿ ಮತ್ತು ರಾಜ್ಯಾಧ್ಯಕ್ಷನಾಗಲಿ ಎಂದು ಅವರು ಆಶಿಸಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top