ಬೆಳೆ ಸಮೀಕ್ಷೆ ರೈತನಿಗೆ ಶ್ರೀರಕ್ಷೆ

ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ: ಡಾ.ಎನ್.ಕೆಂಗೇಗೌಡ

ಬಳ್ಳಾರಿ: ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಆಪ್ ಬಳಸಿ ಮೊಬೈಲ್‌ನಲ್ಲೇ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಬೆಳೆ ಹಾನಿಯಾದಲ್ಲಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ಉಪ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ಅವರು ತಿಳಿಸಿದರು.

     ಕುರುಗೋಡು ಹೋಬಳಿಯ ಮುಸ್ಟಘಟ್ಟ ಗ್ರಾಮದ ರೈತರೊಂದಿಗೆ ಬೆಳೆ ಸಮೀಕ್ಷೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ವಿವರಿಸುತ್ತಾ, ಸರಕಾರಗಳ ಸೌಲಭ್ಯ ಸಿಗಲು ಬೆಳೆ ಸಮೀಕ್ಷೆಯೇ ಮೂಲವಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ರಕ್ಷಣೆಯಷ್ಟೇ ಮುಖ್ಯವಾಗಿ ಬೆಳೆ ಸಮೀಕ್ಷೆಯನ್ನು ಮಾಡಲು ಮುತುವರ್ಜಿ ವಹಿಸಬೇಕು ಎಂದರು.

 

          ರೈತರೇ ನೇರವಾಗಿ ಬೆಳೆ ಸಮೀಕ್ಷೆಯನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಹಿಂದೆಲ್ಲಾ ಅಧಿಕಾರಿಗಳು ಅಥವಾ ಗುತ್ತಿಗೆ ಸಿಬ್ಬಂದಿ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಙಾನ ಬೆಳೆದಂತೆ ಎಲ್ಲವೂ ಬದಲಾಗಿದೆ. ಮೊಬೈಲ್‌ನಲ್ಲೇ ಬೆಳೆ ಸಮೀಕ್ಷೆ ಮಾಡಿ, ಬೆಳೆ ಹಾನಿಯಾದಲ್ಲಿ ಸರ್ಕಾರದಿಂದ ಸೌಲಭ್ಯ ಪಡೆಯಬಹುದಾಗಿದೆ ಎಂದರು. 

ಬೆಳೆ ಸಮೀಕ್ಷೆಗೆ ಒತ್ತು ನೀಡಿ: ಬೆಳೆ ಸಮೀಕ್ಷೆ ವಿಷಯದಲ್ಲಿ ಮೊದಲ ಹಂತದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಲಾಗುತ್ತದೆ. ಆನಂತರ ಬೆಳೆ ಸಮೀಕ್ಷೆ ಮಾಡಲು ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ. ಮೂರನೇ ಹಂತದಲ್ಲಿ ಖಾಸಗಿ ವ್ಯಕ್ತಿಗಳು ಕೊಟ್ಟ ಮಾಹಿತಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದರಷ್ಟೇ ಬೆಳೆ ಸಮೀಕ್ಷೆ ಅಂತಿಮವಾಗಲಿದೆ. ಹೀಗಾಗಿ ರೈತರು ಪರಿಹಾರ ಸಿಗಲಿಲ್ಲ, ಬೆಳೆದ ಬೆಳೆಗೆ ಬದಲಾಗಿ ಬೇರೆ ಬೆಳೆ ನಮೂದಿಸಲಾಗಿದೆ ಎಂದು ಇಲಾಖೆಗಳಿಗೆ ದೂರು ಕೊಡುವುದನ್ನು ಬಿಟ್ಟು ಕಾಲಕಾಲಕ್ಕೆ ಬೆಳೆ ಸಮೀಕ್ಷೆಗೆ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.

          ಸರ್ಕಾರದ ಯೋಜನೆ ರೈತರಿಗೆ: ಪ್ರಕೃತಿ ವಿಕೋಪಗಳಾದಾಗ ನಷ್ಟದ ಸಮೀಕ್ಷೆ, ಬೆಳೆ ವಿಮೆ, ಬೆಂಬಲ ಬೆಲೆಯಡಿ ಖರೀದಿ, ಸಹಾಯಧನ, ಬೆಳೆ ಪರಿಹಾರ ಹೀಗೆ ಎಲ್ಲಕ್ಕೂ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಸರಕಾರದ ಯೋಜನೆಗಳು ರೈತರಿಗೆ ಸಿಗಲಿವೆ. ಹೀಗಾಗಿ ಎಲ್ಲ ರೈತರು ತಮ್ಮ ಜಮೀನಿನ ದಾಖಲೆಗಳ ಕಡೆ ಹೇಗೆ ಗಮನಹರಿಸುತ್ತೀರೋ ಹಾಗೇ ಬೆಳೆ ಸಮೀಕ್ಷೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

 

          ಯಾವುದು ಆ ಆಪ್?:  ಖಾರೀಫ್ ಫಾರ್ಮರ್ ಕ್ರಾಫ್ 2023-24 ಇದು ಬೆಳೆ ಸಮೀಕ್ಷೆ ಮಾಡಲು ಇರುವ ಆಪ್, ಸ್ಮಾರ್ಟ್ ಫೋನ್‌ಗಳಲ್ಲಿ  ಪ್ಲೇ ಸ್ಟೋರ್‌ಗೆ ಹೋಗಿ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಆಪ್‌ನಲ್ಲಿ ಲಭ್ಯವಾಗಲಿದೆ. ಬೆಳೆಯ ಫೋಟೋಗಳ ಜೊತೆಗೆ ಸರ್ವೆ ನಂಬರ್, ಬೆಳೆಯ ಸ್ಥಿತಿ ಎಲ್ಲವನ್ನೂ ಈ ಆಪ್‌ನಲ್ಲಿ  ಡೌನ್‌ಲೋಡ್  ಮಾಡಬಹುದು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಈ ಆಪ್‌ನ್ನು ಅಭಿವೃದ್ದಿಪಡಿಸಿದ್ದು, ರೈತರಿಗೆ ತಿಳಿಯದಿದ್ದರೆ ಮನೆಯಲ್ಲಿನ ವಿದ್ಯಾವಂತರಿಂದ ಬೆಳೆ ಸಮೀಕ್ಷೆ ಮಾಡಿಸಬಹುದು ಎಂದು ಮನವರಿಸಿದರು. 

ಬೆಳೆ ಸಮೀಕ್ಷೆ ಆಪ್ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾಗಲಿ ಅಥವಾ ತೋಟಗಾರಿಕಾ ಅಧಿಕಾರಿಗಳನ್ನಾಗಲಿ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಿದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

 

          ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top