ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಡಿ ನಕಲಿ ಮಂಜೂರಾತಿಗಳನ್ನು ಸೃಷ್ಟಿಸಿ ವಂಚಿಸಿರುವ ಭೋವಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯ ರವಿ ಕುಮಾರ್ ಎಂಬುವರ ವಿರುದ್ಧ ಮಹಾಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಭಾರೀ ಪ್ರಮಾಣದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಲೀಲಾವತಿ ಅವರು ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಮ್ಮದೇ ನಿಗಮದ ನಾಮನಿರ್ದೇಶಿತ ಸದಸ್ಯರ ವಿರುದ್ಧವೇ ದೂರು ದಾಖಲಿಸಿದ್ದಾರೆ. ನಿಗಮದ ಹೆಸರು ಹೇಳಿಕೊಂಡು ಅಕ್ರಮ ನಡೆಸುತ್ತಿರುವ ಇವರು ಹಲವರಿಗೆ ವಂಚಿಸಿದ್ದಾರೆ. ಜತೆಗೆ ಪ್ರತಿನಿತ್ಯ ಇವರ ವಿರುದ್ಧ ನಿಗಮಕ್ಕೆ ದೂರುಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಯಾರಾದರು ಹಣ ಕೇಳಿದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಯಾರೂ ಹಣ ಕೊಟ್ಟು ವಂಚನೆಗೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ಧಾರೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಡಿ ನಕಲಿ ಮಂಜೂರಾತಿಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ. ಉಳಿದ ನಿರ್ದೇಶಕರ ಹೆಸರಿನಲ್ಲಿ ಸಾರ್ವಜನಿಕರಿಂದ ವಿವಿಧ ಸೌಲಭ್ಯಗಳಿಗೆ ಮಂಜೂರಾತಿ ನೀಡುವುದಾಗಿ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಿರ್ದೇಶಕರ ಕೋಟಾದಡಿಯಲ್ಲಿ ಯಾವುದೇ ಮಂಜೂರಾತಿ ನೀಡಲು ಅವಕಾಶವಿಲ್ಲ. ಆದ್ದರಿಂದ ನಿರ್ದೇಶಕರ ಹೆಸರು ಹೇಳಿಕೊಂಡು ಮಂಜೂರಾತಿ ಮಾಡಿಸುತ್ತೇನೆಂದ ಯಾರಾದರು ಹಣ ಕೇಳಿದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಲೀಲಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.