200ಕೋಟಿ ರೂ.ವೆಚ್ಚದಲ್ಲಿ 100ಪೊಲೀಸ್ ಠಾಣೆಗಳ ನಿರ್ಮಾಣ ಗೃಹ ಸಚಿವ ಆರಗ ಜ್ಞಾನೇಂದ್ರ

ಬಳ್ಳಾರಿ: ಕಂಪ್ಲಿಯಲ್ಲಿ 2.70ಕೋಟಿ ರೂ.ವೆಚ್ಚದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ಸೇರಿದಂತೆ ನಾಲ್ಕು ಕಡೆ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ 200ಕೋಟಿ‌ ರೂ.ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ.

ರಾಜ್ಯದಲ್ಲಿ ಪೊಲೀಸರಿಗೆ 2 ಬೆಡ್ ರೂಂಗಳ 20 ಸಾವಿರ ‌ಮನೆಗಳನ್ನು ನಿರ್ಮಿಸಲಾಗುತ್ತಿದೆ.ಈಗಾಗಲೇ 2ಬೆಡ್ ರೂಂಗಳ 10ಸಾವಿರ ಮನೆಗಳನ್ನು ನಿರ್ಮಿಸಿ ಪೊಲೀಸರಿಗೆ ಹಂಚಿಕೆ ಮಾಡಲಾಗಿದೆ;ಉಳಿದ 10ಸಾವಿರ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ ಎಂದರು.

ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗಿದ್ದು, ಶಿವಮೊಗ್ಗದಲ್ಲಿಯೂ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ ಅವರು ಆರೋಪಗಳ ದೃಢಪಡುವಿಕೆ ಶೇಕಡಾವಾರು(ಕನ್ವಿನ್ಷನ್ ರೇಟ್)ಪ್ರಮಾಣ ತೀರಾ ಕಡಿಮೆ ಇದೆ. ವಿಧಿವಿಜ್ಞಾನ ಪ್ರಯೋಗಾಲಯಗಳು ಬಲಪಡಿಸಿದರೇ ಪೊಲೀಸರ ಸಾಕ್ಷ್ಯಾಧಾರಗಳು ಸ್ಟ್ರಾಂಗ್ ಆಗಲು ಸಾಧ್ಯ ಎಂದರು. ಸೈಬರ್ ವಿಭಾಗವನ್ನು ಬಲಪಡಿಸುವುದಕ್ಕೆ ಎಲ್ಲ ರೀತಿಯ ಯಂತ್ರಗಳನ್ನು ಪೊಲೀಸ್ ಇಲಾಖೆ ಖರೀದಿಸಿದೆ. ಪ್ರತಿ ಜಿಲ್ಲೆಯಲ್ಲಿ ಸೈಬರ್ ವಿಭಾಗಗಳನ್ನು ಆರಂಭಿಸಲಾಗಿದ್ದು,ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ‌ಭರ್ತಿಗೆ ಕ್ರಮವಹಿಸಲಾಗುತ್ತಿದೆ ಎಂದು ವಿವರಿಸಿದ ಅವರು ಪೊಲೀಸ್ ಇಲಾಖೆ ಸದೃಢಗೊಳಿಸುವುದರ ಮೂಲಕ ನಮ್ಮ ಸರಕಾರ ಜನರ ರಕ್ಷಣೆಗೆ ಹಾಗೂ ಅವರು ನೆಮ್ಮದಿಯಿಂದ ಜೀವನ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಗೆ 12ಪಡೆಗಳ‌ ಅಗತ್ಯವಿದೆ ಎಂದು ತಿಳಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಕೇಳಿಕೊಂಡಿದ್ದು,ಅವರು ಸಕಾರಾತ್ಮಕವಾಗಿ ಸ್ಪಂದಿಸಿ 50ಎಕರೆ ಜಾಗ ಗುರುತಿಸಿ ಸಂಪುಟ ಸಭೆಯಲ್ಲಿ ಅನುಮೋದಿಸಿ ತನ್ನಿ ಎಂದಿದ್ದಾರೆ ಎಂದರು.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವೆಸಗಿರುವುದಕ್ಕೆ ಸಂಬಂಧಿಸಿದಂತೆ ಕಲಬುರಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕ್ಷಿಪ್ರಗತಿಯಲ್ಲಿ ವಿಚಾರಣೆ ನಡೆಸುವಂತೆ ತಿಳಿಸಲಾಗಿದೆ ಈಗಾಗಲೇ ಈ ಪ್ರಕರಣವನ್ನು ಸಿಒಡಿಗೆ ವಹಿಸಲಾಗಿದ್ದು,ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು;ಕಷ್ಟಪಟ್ಟು ಓದಿದವರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ‌ಕಂಪ್ಲಿ ಶಾಸಕ ಜೆ.ಎನ್.ಗಣೇಶ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜೆ.ಲಿಂಗಮೂರ್ತಿ,ಕಂಪ್ಲಿ ಪುರಸಭೆ ಅಧ್ಯಕ್ಷರು ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top