ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಹಂತದಲ್ಲಿದೆ.

ವಾರದೊಳಗೆ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ ಎಂದರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಮೋದಿ, ಶಾ, ಕುಮಾರಸ್ವಾಮಿ ಅವರೇ ತೀರ್ಮಾನ ಮಾಡ್ತಾರೆ, ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷರಾಗಿ ರಶ್ಮಿ ರಾಮೇಗೌಡ ಪದಗ್ರಹಣ.

ಬೆಂಗಳೂರು : ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಹಂತದಲ್ಲಿದ್ದು, ಬಹುಶಃ ಒಂದು ವಾರದೊಳಗೆ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹೇಳಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ರಾಜ್ಯ ಜೆಡಿಎಸ್ ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಶ್ಮಿ ರಾಮೇಗೌಡ ಅವರು ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಸೀಟು ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಬಹುಶಃ ಇನ್ನೊಮ್ಮೆ ಕೂತು ಚರ್ಚೆ ಮಾಡಿದರೆ ಅಲ್ಲಿಗೆ ಎಲ್ಲಾ ಅಂತಿಮ ಆಗುತ್ತದೆ ಎಂದರು ಅವರು

ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೇ ಎನ್ನುವ ಮತ್ತೊಂದು ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಅವರು; ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗುತ್ತದೆ. ಜೆಡಿಎಸ್ ಪಕ್ಷಕ್ಕೆ ಯಾವ ಯಾವ ಕ್ಷೇತ್ರ ಎನ್ನುವುದು ಮೋದಿ, ಅಮಿತ್ ಶಾ, ನಡ್ಡಾ, ಕುಮಾರಸ್ವಾಮಿ ಅವರು ಸಮಾಲೋಚನೆ ಮಾಡುತ್ತಾರೆ. ಅಲ್ಲಿ ಅವರು ಸ್ಪರ್ಧೆ ಮಾಡಬೇಕಾ ಬೇಡವಾ ಎನ್ನುವ ಅಂಶವನ್ನು ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದರು.

ಬಿಜೆಪಿ ಟಿಕೆಟ್ ವಿಚಾರವಾಗಿ ಕೆಲವು ಕ್ಷೇತ್ರಗಳ ಅಭಿಪ್ರಾಯ ಕೇಳಬಹುದು. ಆಗ ಅಭಿಪ್ರಾಯವನ್ನು ಹೇಳುತ್ತೇವೆ. ಮೈತ್ರಿ ಧರ್ಮವನ್ನು ನಾವು ಪಾಲಿಸುತ್ತೇವೆ. ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಜತೆ ಸೇರಿ ಕೆಲಸ ಮಾಡುತ್ತೇವೆ ಎಂದರು ಅವರು. ಚುನಾವಣೆ ಅಧಿಸೂಚನೆ ಆದ ಬಳಿಕ ರಾಜ್ಯದಲ್ಲಿ ನನ್ನ ಪ್ರವಾಸದ ಬಗ್ಗೆ ನಿರ್ಧಾರ ಮಾಡಲಾಗುವುದು. ಮೋದಿ ಅವರದ್ದು ಬಹಳ ಸ್ಪೀಡ್ ಇದೆ, 10 ದಿನಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅವರು ಪ್ರವಾಸ ಮಾಡುತ್ತಿದ್ದಾರೆ.  ಆದರೆ, ನಾನು ಎಲ್ಲಿಗೆ ಕರೆದರೆ ಅಲ್ಲಿಗೆ ಹೋಗುತ್ತೇನೆ. ಯಾವ ಜಿಲ್ಲೆಗೆ ಕರೆದರೂ ಹೋಗುತ್ತೇನೆ. ಕುಮಾರಸ್ವಾಮಿ ಅವರು  ಸೇರಿದಂತೆ ಜೆಡಿಎಸ್ ನಾಯಕರು ಎಲ್ಲರೂ ಪ್ರವಾಸ ಮಾಡುತ್ತಾರೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

 

ಮಾಧ್ಯಮಗಳಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅನಗತ್ಯವಾಗಿ ಚರ್ಚೆ ಆಗುತ್ತಿದೆ ಎಂದ ಮಾಜಿ ಪ್ರಧಾನಿಗಳು; ಆ ಜಿಲ್ಲೆಯಲ್ಲಿ ಪಕ್ಷ ಬಲಿಷ್ಟವಾಗಿದೆ. ಸಂಘಟನೆ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ  ಸಮಾವೇಶ ನಡೆಸಲಾಗುವುದು. ನನಗೆ ವಯಸ್ಸಾಗಿದ್ದರೂ ನಾನೇನು ಸುಮ್ಮನೆ ಕೂರಲ್ಲ ಎಂದರು.

ಜೆಡಿಎಸ್ ಮತ್ತು ಬಿಜೆಪಿ ಕ್ಷೇತ್ರ ಹಂಚಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು; ಹೆಚ್.ಡಿ.ಕುಮಾರಸ್ವಾಮಿ ಅವರು, ಮೋದಿ ಮತ್ತು ಅಮಿತ್ ಶಾ ಅವರುಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ನಡೆಯಬಹುದು ಎಂದರು. ಒಂದಿಷ್ಟು ಜನ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಹಾಗೆ ಹೇಳಿಕೆ ಕೊಡಲು ಅವರು ಸ್ವತಂತ್ರರು ಎಂದು ಮತ್ತೊಂದು ಪ್ರಶ್ನೆಗೆ ಮಾಜಿ ಪ್ರಧಾನಿಗಳು ಮಾರ್ಮಿಕವಾಗಿ ಉತ್ತರಿಸಿದರು.

ಬೆಂಗಳೂರು ಸ್ಪೋಟ ಪ್ರಕರಣ : ಬೆಂಗಳೂರಿನಲ್ಲಿ ಸ್ಪೋಟ ಸಂಭವಿಸಿದ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಅವರಿಬ್ಬರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಸರಕಾರ ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಅನಿಸುತ್ತಿದೆ ಎಂದರು ಮಾಜಿ ಪ್ರಧಾನಿಗಳು.

ಜೆಡಿಎಸ್; ರಾಜ್ಯ ನೂತನ ಅಧ್ಯಕ್ಷರ ಪದಗ್ರಹಣ : ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ  ಮಾಜಿ ಪ್ರಧಾನಿಗಳ ಸಮಕ್ಷಮದಲ್ಲಿ ರಶ್ಮಿ ರಾಮೇಗೌಡ ಅವರು ನಿಕಟಪೂರ್ವ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್ ಅವರಿಂದ ಪಕ್ಷದ ಭಾವುಟ ಸ್ವೀಕರಿಸುವ ಮೂಲಕ ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದರು.

ಕೋಲಾರದಲ್ಲಿ ಮಹಿಳಾ ಸಮಾವೇಶ : ಮಹಿಳಾ ಘಟಕದ ನೂತನ ಅಧ್ಯಕ್ಷರು ಕೋಲಾರ ಜಿಲ್ಲೆಯವರು. ಹೀಗಾಗಿ ಅವರ ನೇತೃತ್ವದಲ್ಲಿ ರೆ ತಿಂಗಳ 14 ಅಥವಾ 16ರಂದು ಕೋಲಾರದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ ನಡೆಸಲಾಗುವುದು. ಇದಕ್ಕೆ ರಾಜ್ಯದ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರ ಒಪ್ಪಿಗೆ ಪಡೆಯುತ್ತೇನೆ ಎಂದು ಇದೇ ವೇಳೆ ಮಾಜಿ ಪ್ರಧಾನಿಗಳು ಹೇಳಿದರು.

ಕೋಲಾರದಲ್ಲಿ ನಮ್ಮ ಶಕ್ತಿ ಹೆಚ್ಚಿದೆ. ಅದರ ಸಂಶಯ ಬೇಡ. ಕಳೆದ ಚುನಾವಣೆಯಲ್ಲಿ ಜನ ರಾಜಕೀಯ ಶಕ್ತಿ ಎಷ್ಟು ಕೊಟ್ಟಿದ್ದಾರೆ ನೋಡಿದ್ದೇವೆ. ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ನಮ್ಮ ತಯಾರಿ ನಾವು ಮಾಡಿಕೊಳ್ಳೋಣ ಎಂದರು ಅವರು.

ಕೋಲಾರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರು ಬರುತ್ತಾರೆ. ಲೋಕಸಭೆ ಚುನಾವಣೆ ಪ್ರಚಾರ ಕೋಲಾರದಿಂದಲೇ ಆರಂಭ ಆಗಲಿದೆ. ಪಕ್ಷದ ಶಕ್ತಿ ಏನಿದೆ ಅಂತ ಸಾಬೀತುಪಡಿಸಬೇಕು. ಬಿಜೆಪಿ ಹಾಗೂ ಜೆಡಿಎಸ್ ಸಂಬಂಧ ಹೇಗಿದೆ ಅಂತ ಸಂದೇಶ ಕೊಡಬೇಕಿದೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.

 

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕಿ ಸುನೀತಾ ಚೌಹಾಣ್, ರಶ್ಮಿ ರಾಮೇಗೌಡ ಹಾಗೂ ಲೀಲಾದೇವಿ ಆರ್ ಪ್ರಸಾದ್ ಅವರು ಮಾತನಾಡಿದರು. ಜೆಡಿಎಸ್ ಪಕ್ಷದ ನಾಯಕಿಯರಾದ ಮಹೇಶ್ವರಿ ವಾಲಿ, ರೂತ್ ಮನೋರಮಾ, ಮಾಲೂರಿನ ಹಿರಿಯ ನಾಯಕ ರಾಮೇಗೌಡ ಸೇರಿದಂತೆ ಪಕ್ಷದ ಅನೇಕ ಹಿರಿಯ, ಕಿರಿಯ ನಾಯಕಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top