ಬಳ್ಳಾರಿ : ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಇದೀಗ ಸಡಿಲಗೊಂಡಿದೆ ಎಂತಲೂ, ಎಲ್ಲರ ಸರ್ವ ಸಮ್ಮತ ಅಭಿಪ್ರಾಯದಂತೆ, ನಾಲ್ಕು ಬಾರಿ ಸಂಡೂರು ಶಾಸಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿರುವ ಶಾಸಕ ಇ.ತುಕಾರಾಂ ಅವರ ಹೆಸರು ಫೈನಲ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಬಳ್ಳಾರಿ ಗ್ರಾಮೀಣ ಶಾಸಕರೂ ಆಗಿರುವ ರಾಜ್ಯದ ಕ್ರೀಡಾ ಸಚಿವ ಬಿ.ನಾಗೇಂದ್ರ ಹಾಗೂ ಅವರ ಸಹೋದರ (ಅಣ್ಣ) ಬಿ.ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರ ಜೊತೆ ಸಂಡೂರು ಶಾಸಕ ಇ.ತುಕಾರಾಂ ಅವರ ಹೆಸರು ಕೂಡಾ ಬಳ್ಳಾರಿ ಲೋಕಸಭೆಗೆ ಪ್ರಬಲವಾಗಿ ಕೇಳಿಬಂದಿತ್ತು.
ಬೆಂಗಳೂರಿನ ಕೆಪಿಸಿಸಿಯಿಂದ ದೆಹಲಿಯ ಎಐಸಿಸಿ ಕಚೇರಿಯವರೆಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಕಾಂಗ್ರೆಸ್ ಧುರೀಣರು, ರಾಜ್ಯ ಹಾಗೂ ರಾಷ್ಟ್ರ ಕಾಂಗ್ರೆಸ್ ನಾಯಕರು ತೀವ್ರ ಚರ್ಚೆ ನಡೆಸಿ ತಲೆ ಕೆಡಿಸಿಕೊಂಡಿದ್ದರು.
ಬಳ್ಳಾರಿಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ, ಪ್ರಭಾವಿ ನಾಯಕ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ಘೋಷಣೆಯಾದ ನಂತರ, ಕಾಂಗ್ರೆಸ್ ವರಿಷ್ಠರೂ ಸೇರಿದಂತೆ ಸಿಎಂ, ಡಿಸಿಎಂ ಅವರು ತೀವ್ರ ಚರ್ಚೆ ನಡೆಸಿ ಅಳೆದು ತೂಗಿ ಸಂಡೂರಿನ ಶಾಸಕ ಇ.ತುಕಾರಾಂ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ಸಚಿವರಲ್ಲೊಬ್ಬರಾಗಿರುವ, ಪ್ರಮುಖ ಧುರೀಣ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅತ್ಯಾಪ್ತರು ಎಂದೇ ಗುರುತಿಸಿಕೊಂಡಿರುವ ಶಾಸಕ ಇ.ತುಕಾರಾಂ ಅವರಿಗೆ ಬಳ್ಳಾರಿ ಲೋಕಸಭೆ ಟಿಕೆಟ್ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅವರ ಹೆಸರೂ ಪ್ರಮುಖವಾಗಿ, ಪ್ರಬಲವಾಗಿ ಕೇಳಿ ಬಂದಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಕೂಲಂಕುಷವಾಗಿ ಚರ್ಚೆ, ಸಾಧಕ – ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ಶಾಸಕ ಇ.ತುಕಾರಾಂ ಅವರ ಹೆಸರನ್ನು ಫೈನಲ್ ಮಾಡಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಮಾಹಿತಿ ಕಳುಹಿಸಿ ಕೊಡಲಾಗಿದೆ ಎಂದು ಈ ಮೂಲಗಳು ವಿವರಿಸಿವೆ. ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ಲಾಡ್ ಅವರ ನೇತೃತ್ವದಲ್ಲಿ ಸಿಎಂ ನಿವಾಸದಲ್ಲಿ ನಡೆದ ಸಭೆ ಹಾಗೂ ಚರ್ಚೆಯಲ್ಲಿ, ರಾಜ್ಯದ ವಸತಿ ಹಾಗೂ ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹಮ್ಮದ್, ಬಳ್ಳಾರಿ ಜಿಲ್ಲಾ ಸಚಿವ ಬಿ.ನಾಗೇಂದ್ರ, ಸಂಡೂರು ಶಾಸಕ ತುಕಾರಾಂ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ವಿಜಯನಗರ ಜಿಲ್ಲಾ ಕಾಂಗ್ರೆಸ್‌ನ ಬಿ.ವಿ.ಶಿವಯೋಗಿ, ಮಾಜಿ ಎಂಎಲ್‌ಸಿಗಳಾದ ಕೆ.ಎಸ್.ಎಲ್.ಸ್ವಾಮಿ ಸೇರಿದಂತೆ ಇನ್ನಿತರೆ ಪ್ರಮುಖರು ಪಾಲ್ಗೊಂಡಿದ್ದರೆಂದೂ, ಸುಧೀರ್ಘ ಚರ್ಚೆ ನಡೆಸಿದ ನಂತರ ಶಾಸಕ ತುಕಾರಾಂ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂತಲೂ ಅವರಿಗೇ ಬಹುತೇಕವಾಗಿ ಟಿಕೆಟ್ ಫಿಕ್ಸ್ ಎಂಬುದಾಗಿಯೂ ಹೇಳಲಾಗಿದೆ.
ಬಹುಷಃ ಇನ್ನು ಇಂದೆರಡು ದಿನಗಳಲ್ಲಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಗಳಿದ್ದು, ಬಹುತೇಕವಾಗಿ ಶಾಸಕ ಇ.ತುಕಾರಾಂ ಅವರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ದೊರೆಯುವುದು ಖಚಿತ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.