ಕಾಂಗ್ರೆಸ್‌ ಬದ್ಧತೆಯುಳ್ಳ ಪಕ್ಷ, ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ :ರಣದೀಪ್‌ ಸಿಂಗ್ ಸುರ್ಜೇವಾಲ

ಕಾಂಗ್ರೆಸ್ ಪಕ್ಷವು ಕರುನಾಡಿನ ಜನತೆಗೆ ನೀಡಿದ ವಾಗ್ಧಾನದಂತೆ ನಡೆದಿದ್ದೇವೆ, 5ನೇ ಗ್ಯಾರಂಟಿ ಯುವನಿಧಿಯನ್ನು ಜಾರಿಗೊಳಿಸಿದ್ದೇವೆ.

ಮೋದಿಯವರೇ ನೀವು ಯುವಜನತೆಗೆ ನೀಡಿದ್ದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಲ್ಲಿ?

ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ;ಡಿಪ್ಲೊಮಾ ಪದವೀಧರರ ಖಾತೆಗೆ ಮಾಸಿಕ 1,500 ರೂಪಾಯಿ

 ಬೆಂಗಳೂರು : ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಸಿದ್ದು, ಇಂದು 5ನೇ ಗ್ಯಾರಂಟಿ ಯೋಜನೆ ಯುವ ನಿಧಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿಯನ್ನು ಎರಡು ವರ್ಷಗಳ ಅವಧಿವರೆಗೆ ನೀಡುತ್ತಿದ್ದೇವೆ. ಈ ಮೂಲಕ ಕರುನಾಡಿಗೆ ನಮ್ಮ ಪಕ್ಷ ನೀಡಿದ್ದ ವಾಗ್ದಾನವನ್ನು ಈಡೇರಿಸಿರುವ ಸಂತೃಪ್ತಿ ತಮಗಿದೆ ಎಂದು  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‌ಕಾಂಗ್ರೆಸ್‌ ಎಂಬುದು ಬದ್ಧತೆಯ ಪಕ್ಷ ಎಂಬುದನ್ನು ಸಮಸ್ತ ನಾಡಿನ ಜನತೆಗೆ ತೋರಿಸಿಕೊಟ್ಟಿದ್ದೇವೆ. ನಮ್ಮ ಕಾಂಗ್ರೆಸ್‌ ಪಕ್ಷದ ಮೇಲೆ ಜನರು ವಿಶ್ವಾಸವನ್ನಿಟ್ಟಿದ್ದಾರೆ, ಆ ವಿಶ್ವಾಸಕ್ಕೆ ನಾವು ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಭಾಗವೇ ಈ 5ನೇ ಗ್ಯಾರಂಟಿಯಾಗಿದೆ. ಇಂದು ಇದನ್ನು ಜಾರಿ ಮಾಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

 

ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇನ್ನು ಹಸಿದವರಿಗೆ ಅನ್ನ ನೀಡುವ ಅನ್ನಭಾಗ್ಯವನ್ನೂ ಅಷ್ಟೇ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದ್ದೇವೆ. ಆದರೆ, ನಮಗೆ ಈ ಯೋಜನೆ ಮೂಲಕ ತಲಾ 5 ಕೆಜಿ ಅಕ್ಕಿ ಕೊಡಬೇಕು ಎಂಬ ಆಶಯ ಇತ್ತು. ಈ ಸಂಬಂಧ ಕೇಂದ್ರ ಸರ್ಕಾರವನ್ನು ನಾವು ಕೇಳಿದೆವು ಕೂಡ. ಆದರೆ, ಕೇಂದ್ರ ಸರ್ಕಾರ ನಮಗೆ ಅಕ್ಕಿಯನ್ನು ಕೊಡಲು ನಿರಾಕರಣೆ ಮಾಡಿದರು. ಇದರಿಂದ ನಾವೇನೂ ಜಗ್ಗಲಿಲ್ಲ, ಕೊಟ್ಟ ಮಾತಿಗೂ ತಪ್ಪಲಿಲ್ಲ. ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಿದೆವು. ಅನ್ನ ಭಾಗ್ಯ ಯೋಜನೆಯಲ್ಲಿ 1.8 ಕೋಟಿ ಕುಟುಂಬಗಳ 3.92 ಕೋಟಿ ಸದಸ್ಯರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂ.ಗಳನ್ನು ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದಕ್ಕಾಗಿ ಮಾಸಿಕವಾಗಿ 646 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಖರ್ಚು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ನಾವು ನಮ್ಮ ವಾಗ್ದಾನದಂತೆ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದ್ದೇವೆ. ಇದು ಕಾಂಗ್ರೆಸ್‌ನ ಕಾರ್ಯವೈಖರಿ ಎಂದು ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಬಿಜೆಪಿ ಪರಾಮರ್ಶೆ ಮಾಡಿಕೊಳ್ಳಲಿ

 

ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆಯೇ? ಈ ಪ್ರಶ್ನೆಯನ್ನು ಆ ಪಕ್ಷದವರು ಒಮ್ಮೆ ತಮಗೆ ತಾವೇ ಹಾಕಿಕೊಳ್ಳಬೇಕು. ತಮ್ಮ ಕಾರ್ಯವೈಖರಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿಕೊಳ್ಳಬೇಕು. ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಹೇಳಿತ್ತು? ಆದರೆ, ಈಗ ಏನಾಗಿದೆ? ಅಷ್ಟು ಪ್ರಮಾಣದ ಉದ್ಯೋಗಗಳು ಸೃಷ್ಟಿಯಾದವೇ? ಇದಕ್ಕೆ ಉತ್ತರ ಕೊಡಿ ಬಿಜೆಪಿಯವರೇ? 15 ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬ ಭಾರತೀಯನ ಖಾತೆಗೆ ಹಾಕುವುದಾಗಿ ಹೇಳಿದ್ದರು. ಕೊನೆಗೆ ಹಾಕಿದರೇ? ಆ ಹಣವನ್ನೂ ಹಾಕಲಿಲ್ಲ. ಅವರ ಭರವಸೆಗಳು ಭರವಸೆಯಾಗಿಯೇ ಉಳಿಯಿತು. ಇಲ್ಲಿ ನಾವು ಭರವಸೆಯನ್ನು ಈಡೇರಿಸಿದ್ದೇವೆ. ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನೂ ಅನುಷ್ಠಾನ ಮಾಡಿದ್ದೇವೆ. ಇದು ನಮ್ಮ ಕಾಂಗ್ರೆಸ್‌ನ ಬದ್ಧತೆಯಾಗಿದೆ ಎಂದು ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ. 

ಜನರ ವಿಶ್ವಾಸ ಗಳಿಸಿದ್ದೇವೆ

ಇನ್ನು ನಮ್ಮ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಅಣಕಿಸುವ, ಕುಹುಕವಾಡುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಇಲ್ಲಿ ನಮ್ಮ ರಾಜ್ಯದ ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಮಾಡಿ, ಬಿಜೆಪಿ ಆಡಳಿತದಲ್ಲಿ ಇರುವ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಾರೆ. ಈ ದ್ವಂದ್ವ ನಿಲುವು ಬೇಕಾ? ಇನ್ನು ಕರ್ನಾಟಕದಲ್ಲಿ ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅಣಕಿಸುವ ಮೂಲಕ ನಾಡಿನ ಯೋಜನೆಯ ಫಲಾನುಭವಿಗಳಿಗೆ ಅಪಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ನಾವು ಜನರ ವಿಶ್ವಾಸವನ್ನು ಗಳಿಸಿದ್ದೇವೆ ಎಂದು ರಣದೀಪ್‌ ಸುರ್ಜೇವಾಲ ತಿಳಿಸಿದ್ದಾರೆ.

ಅಪಪ್ರಚಾರಕ್ಕೆ ಕಿವಿಗೊಡಬೇಡಿ

 

ಈಗ ಯುವ ನಿಧಿ ಯೋಜನೆ ಅದ್ಧೂರಿಯಾಗಿ ಜಾರಿಯಾಗುತ್ತಿದೆ. ಹಾಗಂತ ನಾವು ಇಷ್ಟಕ್ಕೆ ವಿರಮಿಸುವುದಿಲ್ಲ. ಯುವ ಜನತೆಗೆ ಕೌಶಲ್ಯಯುಕ್ತ ಶಿಕ್ಷಣ ನೀಡಿ ಅವರಿಗೆ ಉದ್ಯೋಗಗಳು ಹೆಚ್ಚು ಸಿಗುವಂತೆ ಮಾಡುತ್ತೇವೆ. ಇದೂ ಸಹ ನಮ್ಮ ಬದ್ಧತೆಯಲ್ಲಿ ಒಂದಾಗಿದೆ. ಅಲ್ಲದೆ, ರಾಷ್ಟ್ರ ನಿರ್ಮಾಣಕ್ಕೆ ಯುವ ಜನತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಬದ್ಧವಾಗಿದೆ. ಬಿಜೆಪಿ ಸೇರಿದಂತೆ ಅದರ ಮಿತ್ರಪಕ್ಷಗಳ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಬಾರದು. ಇಂದು ಬಿಜೆಪಿಯವರ ಭಾಷಣದಿಂದ ಯುವ ಜನತೆ ಭ್ರಮನಿರಸವಾಗಿರುವುದು ಕಂಡುಬಂದಿದೆ. ವಾಸ್ತವ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top