ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಕ್ಲೈಮ್ಯಾಕ್ಸ್ ತಲುಪುತ್ತಿದ್ದಂತೆ, ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಘೋಷಣೆಯ ಬೆನ್ನಲ್ಲೇ ಉದ್ಭವಿಸಬಹುದಾದ ಅಸಮಾಧಾನವನ್ನು ತಣಿಸಲು ಮತ್ತು ಪಕ್ಷದಲ್ಲಿ ಭಿನ್ನಮತ ತಲೆದೋರದಂತೆ ತಡೆಯಲು ಕಾಂಗ್ರೆಸ್ ಹೈಕಮಾಂಡ್ ಹೈಪರ್ ಆಕ್ಟಿವ್ ಆಗಿದ್ದು, ರಾಜ್ಯದಲ್ಲಿ ಬರೋಬ್ಬರಿ 3 ರಿಂದ 4 ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸಲು ಗಂಭೀರ ಚಿಂತನೆ ನಡೆಸಿದೆ.
2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿ ಮತ್ತು ಸಮುದಾಯಗಳ ಸಮೀಕರಣವನ್ನು ಬ್ಯಾಲೆನ್ಸ್ ಮಾಡಲು ಹೈಕಮಾಂಡ್ ಈ “ಬಹು ಡಿಸಿಎಂ” ಫಾರ್ಮುಲಾ ಕೈಗೆತ್ತಿಕೊಂಡಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ರೇಸ್‌ನಲ್ಲಿ ಮುಂಚೂಣಿಯಲ್ಲಿರುವ 4 ಪ್ರಮುಖ ನಾಯಕರು ಯಾರು?
ಹೊಸ ಸರ್ಕಾರದಲ್ಲಿ ಸೃಷ್ಟಿಯಾಗಲಿರುವ ಡಿಸಿಎಂ ಹುದ್ದೆಗಳಿಗಾಗಿ ಪ್ರಮುಖವಾಗಿ ನಾಲ್ಕು ಹೆಸರುಗಳು ದಟ್ಟವಾಗಿ ಕೇಳಿಬರುತ್ತಿವೆ:
ಪ್ರಿಯಾಂಕ್ ಖರ್ಗೆ (ದಲಿತ ಕೋಟಾ): ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿರುವ ಇವರ ಆಡಳಿತ ವೈಖರಿ ಹಾಗೂ ಪಕ್ಷದ ರಾಷ್ಟ್ರೀಯ ನಾಯಕತ್ವದೊಂದಿಗಿನ ನಿಕಟ ಬಾಂಧವ್ಯ ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಎಂ.ಬಿ. ಪಾಟೀಲ್ (ಲಿಂಗಾಯತ ಕೋಟಾ): ಪ್ರಭಾವಿ ವೀರಶೈವ-ಲಿಂಗಾಯತ ಸಮುದಾಯದ ಪ್ರಾತಿನಿಧ್ಯವಾಗಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಈ ಉನ್ನತ ಜವಾಬ್ದಾರಿ ಸಿಗುವ ಸಾಧ್ಯತೆ ದಟ್ಟವಾಗಿದೆ.
ಜಮೀರ್ ಅಹ್ಮದ್ ಖಾನ್ (ಮುಸ್ಲಿಂ ಕೋಟಾ): ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಜಮೀರ್ ಮಾಡಿದ ಕೆಲಸ ಹೈಕಮಾಂಡ್ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಜಮೀರ್ ಅಹ್ಮದ್ ಅವರಿಗೆ ಅಲ್ಪಸಂಖ್ಯಾತ ಕೋಟಾದಡಿ ಅದೃಷ್ಟ ಒಲಿಯುವ ಸಾಧ್ಯತೆಯಿದೆ.
ಡಾ. ಯತೀಂದ್ರ ಸಿದ್ದರಾಮಯ್ಯ (ಕುರುಬ/ಹಿಂದುಳಿದ ಕೋಟಾ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನ ತ್ಯಾಗ ಮಾಡಲು ಒಪ್ಪಿಸುವ ಪ್ರಕ್ರಿಯೆಯ ಭಾಗವಾಗಿ ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರಮುಖ ಸ್ಥಾನ ನೀಡುವ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಯತೀಂದ್ರ ಅವರನ್ನು ಡಿಸಿಎಂ ಗಾದಿಗೇರಿಸಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ದೆಹಲಿಯಿಂದಲೇ ನಡೆದಿತ್ತು ‘ಸೀಕ್ರೆಟ್ ಕಾಲ್’ ಆಪರೇಷನ್!
ಮೂಲಗಳ ಪ್ರಕಾರ, ದೆಹಲಿಯಲ್ಲಿ ನಾಯಕತ್ವ ಬದಲಾವಣೆಯ ಅಧಿಕೃತ ಮಾತುಕತೆಗಳು ಹಳಿಗೆ ಬರುವ ಮುನ್ನವೇ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಅಲರ್ಟ್ ಆಗಿದ್ದರು. ಅವರು ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ಖುದ್ದಾಗಿ ಫೋನ್ ಮಾಡಿ ಹೈಕಮಾಂಡ್‌ನ ಈ “ಮಲ್ಟಿ-ಡಿಸಿಎಂ” ಯೋಜನೆಯ ಬಗ್ಗೆ ಮುನ್ಸೂಚನೆ ನೀಡಿ, ಸಮಾಧಾನಪಡಿಸಿದ್ದರು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ.
ಲಿಸ್ಟ್‌ನಲ್ಲಿ ಇನ್ನೂ ಇವೆ ಮೂರು ಪ್ರಮುಖ ಹೆಸರುಗಳು!
ಈ ನಾಲ್ವರಷ್ಟೇ ಅಲ್ಲದೆ ಡಿಸಿಎಂ ರೇಸ್‌ನಲ್ಲಿ ಇನ್ನೂ ಮೂವರು ಹಿರಿಯ ನಾಯಕರ ಹೆಸರುಗಳು ಚಾಲ್ತಿಯಲ್ಲಿವೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್
ಅರಣ್ಯ ಸಚಿವ ಈಶ್ವರ್ ಖಂಡ್ರೆ
ಮೈಸೂರಿನ ನರಸಿಂಹರಾಜ ಕ್ಷೇತ್ರದ ಹಿರಿಯ ಶಾಸಕ ತನ್ವೀರ್ ಸೇಠ್
ಒಟ್ಟಾರೆಯಾಗಿ, ಸಿದ್ದರಾಮಯ್ಯ ಅವರ ನಿರ್ಗಮನದ ನಂತರ ಸೃಷ್ಟಿಯಾಗಬಹುದಾದ ಯಾವುದೇ ಬಂಡಾಯದ ಕಿಡಿಯನ್ನು ಆರಂಭದಲ್ಲೇ ಚಿವುಟಿ ಹಾಕಲು ಕಾಂಗ್ರೆಸ್ ಹೈಕಮಾಂಡ್ ಈ ಮಾಸ್ಟರ್ ಸ್ಟ್ರೋಕ್ ಇಟ್ಟಿದ್ದು, ಹೊಸ ಮುಖ್ಯಮಂತ್ರಿಯ ಜೊತೆಗೆ ಈ ನಾಲ್ವರು ಉಪಮುಖ್ಯಮಂತ್ರಿಗಳ ಜೂಟಾಟ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.



