ಕಾಂಗ್ರೆಸ್ ಸರಕಾರದ ‘ದೆಹಲಿ ಚಲೋ’ ನಾಟಕ- ವಿಜಯೇಂದ್ರ

ಬೆಂಗಳೂರು: ದೆಹಲಿ ಚಲೋ ಮಾಡಿದ ಕಾಂಗ್ರೆಸ್ಸಿಗರಿಗೆ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ಷೇಪಿಸಿ, ಸರಕಾರದ ವಿರುದ್ಧ ರಾಜ್ಯ ಬಿಜೆಪಿ ವತಿಯಿಂದ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಇದರ ನೇತೃತ್ವ ವಹಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರವು ಬರಗಾಲದ ಸಂದರ್ಭದಲ್ಲೂ ಸಮರ್ಪಕವಾಗಿ ವಿದ್ಯುತ್ ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರವು ಸರಿಯಾಗಿ ವಿದ್ಯುತ್ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರವು ಬರಗಾಲ ಸಂಬಂಧಿತ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಸರಕಾರವು ತನ್ನ ಖಜಾನೆಯನ್ನು ಖಾಲಿ ಮಾಡಿಕೊಂಡಿದೆ. ದೆಹಲಿ ಚಲೋ ಮೂಲಕ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಅಸಮರ್ಥ ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲೂ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಯುಕೆಪಿ ಬಗ್ಗೆ ಮಾತನಾಡಿದರೂ ಅನುದಾನ ಕೊಟ್ಟಿಲ್ಲ. ಬಿಜೆಪಿ ಸರಕಾರ ಇದ್ದಾಗ ಕಾಂಗ್ರೆಸ್ಸಿಗರು ಮೇಕೆದಾಟು ಹೋರಾಟ ಮಾಡಿದ್ದರು. ದೆಹಲಿ ಚಲೋ ನಾಟಕವು ರಾಜ್ಯದ ಮತದಾರರ ಕಣ್ಣಿಗೆ ಮಣ್ಣೆರಚುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು.

 

ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು. ರಾಜ್ಯದ ಕಾಂಗ್ರೆಸ್ ಸರಕಾರವು ಬಡವರ ವಿರೋಧಿ, ದಲಿತರ ವಿರೋಧಿ ಮಾತ್ರವಲ್ಲದೆ ರೈತವಿರೋಧಿಯಾಗಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್‍ನಿಂದ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಒಳಿತುಗಳೇ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿಯವರು, ಕಾಂಗ್ರೆಸ್ ಕಾಲದಲ್ಲಿ 85 ಕಿಮೀ ರೈಲ್ವೆ ಮಾರ್ಗ ವಿದ್ಯುದೀಕರಣ ಆಗಿತ್ತು. ನಮ್ಮ ಕಾಲದಲ್ಲಿ 3,500 ಕಿಮೀ ರೈಲ್ವೆ ಇಲೆಕ್ಟ್ರಿಫಿಕೇಶನ್ ಆಗಿದೆ. 85 ಕಿಮೀ ಮಾಡಿದವರು ಅನ್ಯಾಯ ಮಾಡಿದ್ದಾರಾ? 3,500 ಕಿಮೀ ಮಾಡಿದ ಮೋದಿಯವರು ಅನ್ಯಾಯ ಮಾಡಿದ್ದಾರಾ? ಎಂದು ಕೇಳಿದರು. ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ಸಿನಿಂದ ಅನ್ಯಾಯ ಆಗಿದೆ ಎಂದು ಟೀಕಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

 

ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಸಿದ್ದರಾಮಯ್ಯರ ಸರಕಾರಕ್ಕೆ ಧಿಕ್ಕಾರ, ರಾಜ್ಯದ ರೈತರನ್ನು ಕಣ್ಣೀರು ಹಾಕಿಸುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಕೂಗಲಾಯಿತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top