ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿ ನೀಡಲು ಹಿಂಜರಿದಿರುವ ಕೇಂದ್ರದ ವಿರುದ್ಧ ಇದೇ 20 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಕೆಪಿಸಿಸಿ ಕಛೇರಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಷಯ ತಿಳಿಸಿದ್ದಾರೆ.
ಇದೇ 20 ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ ಎಂದ ಅವರು,ಕೇಂದ್ರ ಸರ್ಕಾರ ಬಡವರ ವಿರುದ್ಧ ನಿಂತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಚುನಾವಣೆಯ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು,ಕರ್ನಾಟಕದಲ್ಲಿ ಬಿಜೆಪಿ ಸೋತರೆ ಕೇಂದ್ರದ ಅನುದಾನ ಸ್ಥಗಿತವಾಗಲಿದೆ ಎಂದು ಹೇಳಿದ್ದರು.ಅವರ ಮಾತು ನಿಜವಾಗಿದೆ ಎಂದು ವ್ಯಂಗ್ಯವಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ನಾವು ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12 ರಂದು ಜುಲೈ ತಿಂಗಳಲ್ಲಿ ಇ ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು.
2.85 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ರಾಜ್ಯಕ್ಕೆ ಪತ್ರ ಬರೆದಿತ್ತು. ಇದಾದ ಮರುದಿನ ಅಂದರೆ ಜೂನ್ 13 ರಂದು, ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ತಿಳಿಸಿದೆ.
ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ಪಕ್ಷಕ್ಕೆ ಜನ ಹಾಕಿರುವ ಮತಗಳಿಗೆ ಬಿಜೆಪಿಯ ಭ್ರಷ್ಟ ಸರ್ಕಾರ ಧಿಕ್ಕಾರ ಹಾಕಿದೆ. ಬಡವರಿಗೆ ದ್ರೋಹ ಮಾಡುತ್ತಿದೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಬಿಜೆಪಿ ಎಂದರೆ ಬಡವರಿಗೆ ದ್ರೋಹ ಬಗೆಯುವ ಪಕ್ಷವಾಗಿದೆ. ಕೇಂದ್ರದ ಈ ದ್ರೋಹ ಖಂಡಿಸಿ ಬರುವ ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದುಎಂದರು. ಕೇಂದ್ರ ಸರಕಾರ ನೀಡದಿದ್ದರೂ ನಾವು 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನ ಭಾಗ್ಯ ಯೋಜನೆ ಜಾರಿ ಆಗಲಿದೆ ಎಂದ
ಅವರು, ನಾವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಕೇಂದ್ರದ ಈ ಧೋರಣೆ ಪ್ರತಿಭಟಿಸಿ, ಜನರಿಗೆ ಅರಿವು ಮೂಡಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ.
ಎಫ್ ಸಿಐ ನೀತಿ ಬದಲಾಗಿದ್ದು, ಈ ಬಗ್ಗೆ ಕರ್ನಾಟಕದ ಅಧಿಕಾರಿಗಳಿಗೆ ಗೊತ್ತಿಲ್ಲದೇ ಅನುಮತಿ ಕೋರಿ ಪತ್ರ ಬರೆದಿದ್ದಾರೆ ಎಂಬ ಭಾರತೀಯ ಆಹಾರ ನಿಗಮದ ಅಧಿಕಾರಿಗಳ ಸ್ಪಷ್ಟನೆ ಬಗ್ಗೆ ಕೇಳಿದಾಗ,‘ಅಲ್ಲಿಗೆ ಭಾರತ ಆಹಾರ ನಿಗಮಕ್ಕೆ ತಮ್ಮ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ?’ ಎಂದರು. ಗೃಹಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ,“ಗೃಹಲಕ್ಷ್ಮಿ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಸೇವಾ ಸಿಂಧುವಿನಲ್ಲಿ ಪ್ರತಿನಿತ್ಯ 200ಕ್ಕಿಂತ ಹೆಚ್ಚು ಅರ್ಜಿ ಪಡೆಯಲು ಆಗುವುದಿಲ್ಲ. ಪ್ರತಿ ಪಂಚಾಯ್ತಿಯಲ್ಲಿ ಒಂದು ಗ್ರಾಮ ಒನ್ ಮಾತ್ರ ಇದೆ. ಈ ಪ್ರದೇಶದಲ್ಲಿ ಎರಡೂವರೆ ಸಾವಿರ ಕುಟುಂಬಗಳಿವೆ. ಹೀಗಾಗಿ ಅಲ್ಲಿ ಮಹಿಳೆಯರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಇದರ ಬದಲಿಗೆ, ಅವರ ಅರ್ಜಿ ಅವರೇ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಸ್ವಲ್ಪ ತಡವಾದರೂ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಆಪ್ ನಿರ್ಮಾಣ ಮಾಡಬಹುದು. ಪ್ರತಿಯೊಬ್ಬರು ತಮ್ಮ ಅರ್ಜಿಯನ್ನು ಅವರದೇ ಸ್ಮಾರ್ಟ್ ಫೋನ್ ಮೂಲಕ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಕುರಿತು ಕೇಳಿದಾಗ, “ಬಿಜೆಪಿ ನಾಯಕರು ಏನಾದರೂ ಟೀಕೆ ಮಾಡಲಿ. ಆದರೆಅವರು ಮೊದಲು ತಾವು ಕೊಟ್ಟಿರುವ ಭರವಸೆ ಈಡೇರಿಸುವ ಬಗ್ಗೆ ಮಾತನಾಡಲಿ. ಅವರು ವಿದೇಶದಿಂದ ಎಷ್ಟು ಕಪ್ಪು ಹಣ ತಂದಿದ್ದಾರೆ, ಎಷ್ಟು ಜನರ ಖಾತೆಗೆ 15 ಲಕ್ಷ ಹಾಕಿದ್ದಾರೆ? ರೈತರ ಆದಾಯ ಡಬಲ್ ಮಾಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟರಾ? ಎಂಬುದರ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಸಾಧ್ಯವಾಗದಿದ್ದರೆ ಸರ್ಕಾರದ ಮುಂದಿನ ನಡೆ ಏನು? ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುವುದಕ್ಕಿಂತ ದೆಹಲಿಯಲ್ಲಿ ಪ್ರತಿಭಟನೆ ಮಾಡಬಹುದಿತ್ತಲ್ಲವೇ ಎಂದು ಕೇಳಿದಾಗ, ‘ನಾವು ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದೇವೆ. ಯಾರನ್ನು ಸಂಪರ್ಕಿಸುತ್ತೇವೆ ಎಂದು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ಅವರಿಗೂ ಅಕ್ಕಿ ಮಾರಾಟ ಮಾಡದಂತೆ ಬೆದರಿಕೆ ಹಾಕುತ್ತಾರೆ. ಈ ಯೋಜನೆ ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ. ಎಲ್ಲಾ ಪಕ್ಷದ ಬೆಂಬಲಿಗರು, ಮತದಾರರಿಗೆ ಲಭ್ಯವಾಗುತ್ತದೆ. ಹೀಗಾಗಿ ರಾಜ್ಯದ ಸಂಸದರು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ. ಚುನಾವಣೆ ಮುಗಿದಿದೆ. ಜನಪ್ರತಿನಿಧಿಗಳಾಗಿ ರಾಜ್ಯದ ನೆಲ, ಜಲ, ಭಾಷೆ, ಗಡಿ ವಿಚಾರವಾಗಿ ಒಟ್ಟಾಗಿ ಕೆಲಸ ಮಾಡಬೇಕು.
ನಾನು ಬೆಂಗಳೂರಿನ ಅಭಿವೃದ್ಧಿ ಕುರಿತು ನಡೆಸಿದ ಸಭೆಯಲ್ಲಿ ಎಲ್ಲಾ ಪಕ್ಷದವರನ್ನು ಅಹ್ವಾನ ಮಾಡಿದ್ದೆ. ಜೂನ್ 21 ರಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದ ಸಚಿವರುಗಳನ್ನು ಕರೆದಿದ್ದು, ಪಕ್ಷದ ಪ್ರಣಾಳಿಕೆ ಜಾರಿ ವಿಚಾರವಾಗಿ ಮಾರ್ಗದರ್ಶನ ನೀಡಲಿದ್ದಾರೆ. ಈ ಸಮಯದಲ್ಲಿ ಕೇಂದ್ರದ ಸಚಿವರುಗಳನ್ನು ಭೇಟಿ ಮಾಡಿ ಬಾಕಿ ಇರುವ ಯೋಜನೆ ಜಾರಿಗೆ ಒತ್ತಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.
ಎಫ್ ಸಿಐ ಜತೆ ಮನವಿ ಮಾಡದೇ ಕಾನೂನು ಹೋರಾಟ ಮಾಡಿ ಪಡೆಯಬಹುದಲ್ಲವೇ ಎಂದು ಕೇಳಿದಾಗ,‘ಕಾನೂನು ಹೋರಾಟ ಬೇಡ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರಿಗೆ ಏನು ಸಿಗಬೇಕೋ ಅವರಿಗೆ ಸಿಗಬೇಕು. ನಾವು ಕೇಂದ್ರ ಸರ್ಕಾರಕ್ಕೆ ಶೇ.40 ರಷ್ಟು ತೆರಿಗೆ ಪಾವತಿ ಮಾಡುತ್ತೇವೆ. ಆದರೆ ನಮಗೆ ವಾಪಸ್ ಕೇವಲ ಶೇ.17ರಷ್ಟು ಮಾತ್ರ ಸಿಗುತ್ತದೆ. ಬೇರೆ ರಾಜ್ಯಗಳು ಅಕ್ಕಿಯನ್ನು ಹೆಚ್ಚಿನ ದರಕ್ಕೆ ನೀಡುತ್ತೇವೆ ಎಂದರೆ ಏನು ಮಾಡುತ್ತೀರಿ ಎಂದು ಕೇಳಿದಾಗ,ಈಗ ಎಫ್ ಸಿಐನಲ್ಲಿ ಏನು ದರ ನಿಗದಿಯಾಗಿದೆಯೋ ಆ ದರದಲ್ಲಿ ಖರೀದಿ ಮಾಡುತ್ತೇವೆ’ ಎಂದು ತಿಳಿಸಿದರು.