ಬೆಂಗಳೂರು,ಜ,2 : ತಾಲಿಬಾನ್‍ನದು ಮತಾಂಧತೆ; ಕಾಂಗ್ರೆಸ್‍ನವರದು ಮತದ ಮೇಲಿನ ಅಂಧತೆ. ತಾಲಿಬಾನ್‍ಗೂ ಸ್ಪರ್ಧೆ ಕೊಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರ ವರ್ತನೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ತಿಳಿಸಿದರು. ನಗರದ “ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್”ನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತರ ಭಾವನೆಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕುಟುಂಬಕ್ಕೆ ಜೋತು ಬಿದ್ದ ಪಕ್ಷವಾದ ಕಾಂಗ್ರೆಸ್ ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿಯನ್ನೂ ಹೊಂದಿಲ್ಲ ಎಂದು ಟೀಕಿಸಿದರು. ಬಿಜೆಪಿ ಏನೇನು ಪರಿವರ್ತನೆ ತರುತ್ತದೆಯೋ ಅದೆಲ್ಲವನ್ನೂ ವಿರೋಧಿಸಬೇಕು ಎಂಬ ಕೆಟ್ಟ ಚಾಳಿ ದೇಶದ ಅತ್ಯಂತ ಹಿರಿಯ ಅನುಭವಿ ರಾಜಕೀಯ ಪಕ್ಷ ಅಂದುಕೊಂಡಿರುವ ಕಾಂಗ್ರೆಸ್‍ಗೆ ಬಂದಿರುವುದು ದುರದೃಷ್ಟಕರ ಎಂದರು.
ಇಂದಿನದು ಮಹಾತ್ಮ ಗಾಂಧಿ ಕಾಂಗ್ರೆಸ್ ಅಲ್ಲ. ಇದು ಸೋನಿಯಾ ಗಾಂಧಿ ಕಾಂಗ್ರೆಸ್ ಎಂದು ಟೀಕಿಸಿದ ಅವರು, 2014, 2018, 2019ರ ಚುನಾವಣೆ ಫಲಿತಾಂಶ ನೋಡಿ. ಆಗಲೂ ಬುದ್ಧಿ ಬರದಿದ್ದರೆ ಜನ ನಿಮಗೆ ಮುಂದೆ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್‍ನ ಭ್ರಷ್ಟ ಮತ್ತು ಒಡೆದು ಆಳುವ ನೀತಿಯನ್ನು ಜನರು ಬೆಂಬಲಿಸುವುದಿಲ್ಲ. ಕಾಂಗ್ರೆಸ್‍ನ ಮನಸ್ಥಿತಿಗೆ ಜನರೇ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ಸನ್ನು ಹಿಂದೂಗಳು ನಂಬುವ ಸ್ಥಿತಿಯಲ್ಲಿಲ್ಲ ಎಂದು ನುಡಿದರು.

ನಮ್ಮ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರೇ ಸುಪ್ರೀಂ. ಆದರೆ, ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಬಿಟ್ಟು ಸಭೆ ಮಾಡಬೇಡ ಅಂದದ್ದು ನೋಡಿದರೆ, ಇಲ್ಲಿ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಅಥವಾ ವಿಪಕ್ಷ ನಾಯಕರು ಸುಪ್ರೀಂ ಸ್ಥಾನ ಪಡೆದಿದ್ದಾರಾ ಎಂಬ ಸಂದೇಹ ಮೂಡುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾಲದಲ್ಲಿ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯ್ದೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದನ್ನು ಅದೇ ಪಕ್ಷದವರು ವಿರೋಧಿಸುತ್ತಿದ್ದಾರೆ. ಬಲವಂತ, ಪ್ರಲೋಭನೆಯ ಮತಾಂತರ ನಿಯಂತ್ರಿಸುವ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಯಾವುದೇ ಒಂದು ಸಮುದಾಯವನ್ನು ಹೊರಗಿಟ್ಟು ಅಥವಾ ಒಂದು ಸಮುದಾಯವನ್ನು ಒಳಗಿಟ್ಟು ಈ ಕಾಯ್ದೆ ತಂದಿಲ್ಲ. ಮತಾಂತರಕ್ಕೆ ಮಾತ್ರ ನಿಯಂತ್ರಣ ಹೇರಿದೆ. ಮತಾಂತರ ಆಗುವುದಕ್ಕೆ ಕೆಲವು ನಿಯಮಾವಳಿ ರೂಪಿಸಿದೆ. ದೇವಸ್ಥಾನಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೂ ವಿರೋಧ, ಲವ್ ಜಿಹಾದ್ ಕಾಯ್ದೆಗೂ ವಿರೋಧ, ಯುವತಿಯ ಮದುವೆ ವಯಸ್ಸನ್ನು ಹೆಚ್ಚಿಸಿದ್ದನ್ನೂ ಕಾಂಗ್ರೆಸ್‍ನವರು ಆಕ್ಷೇಪಿಸುತ್ತಾರೆ ಎಂದು ಖಂಡಿಸಿದರು. ಮೊದಲು ಪೌರತ್ವ ಕೊಡುವ ವಿಧೇಯಕ ಸಿಎಎ ತಂದಾಗ ಕಾಂಗ್ರೆಸ್ ವಿರೋಧಿಸಿತು. ಜವಾಹರಲಾಲ್ ನೆಹರೂ ಅವರು ಪ್ರಧಾನಿ ಆಗಿದ್ದಾಗ ಅದನ್ನು ತಂದಿದ್ದರು. ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾದಾಗಲೂ ಅದನ್ನೇ ಮಾಡಿದ್ದರು. ಆದರೆ, ಅದನ್ನು ಬಿಜೆಪಿ ತಂದಾಗ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ಅಲ್ಲಿಂದ ಶುರುವಾಗಿ 370ನೇ ವಿಧಿ ರದ್ದು ಪಡಿಸಿದಾಗ ಈ ವಿಧಿ ಮತ್ತೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಮುಖಂಡರು ಪುಂಖಾನುಪುಂಖವಾಗಿ ಹೇಳಿಕೆ ಕೊಟ್ಟರು ಎಂದು ವಿವರಿಸಿದರು. ದೇವಸ್ಥಾನಕ್ಕೆ ದಾನ ಕೊಡುತ್ತಾರೆ. ಅದರ ಹಣದಲ್ಲಿ ದೇವಾಲಯ ಅಭಿವೃದ್ಧಿ, ಸಮಾಜಮುಖಿ ಕೆಲಸ ಆಗಬೇಕು. ಬ್ರಿಟಿಷರು, ಔರಂಗಜೇಬನಿಗೆ ದೇವಸ್ಥಾನದ ಹಣದ ಅನಿವಾರ್ಯತೆ ಇತ್ತು. ದೇವಸ್ಥಾನ ಸಮಾಜದ ಸ್ವತ್ತು. ದೇವಸ್ಥಾನದ ಸ್ವಾಯತ್ತತೆ ಕುರಿತು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಮತ್ತು ಅದರ ಪರವಾಗಿ ನಿಲ್ಲುತ್ತೇವೆ. ಧರ್ಮಸ್ಥಳದ ಬೆಳವಣಿಗೆ ಮತ್ತು ದೇವಸ್ಥಾನಗಳ ಪುನರುತ್ಥಾನದ ಅಧ್ಯಯನಕ್ಕೆ ಕೆಪಿಸಿಸಿ ಅಧ್ಯಕ್ಷರು ಮುಂದಾಗಲಿ ಎಂದು ಸವಾಲೆಸೆದರು. ದೇವಾಯಲದ ಆದಾಯದ ಮೇಲಿನ ಪ್ರೀತಿಯಿಂದ ಬ್ರಿಟಿಷರು ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕವೂ ದೇವಾಲಯದ ಮೇಲೆ ಆದಾಯದ ಮೇಲೆ ಕಣ್ಣಿಡುವುದು ಸ್ವಾತಂತ್ರ್ಯದ ನೈಜ ಅರ್ಥಕ್ಕೇ ವಿರೋಧ ಮೂಡಿಸುವಂತಿದೆ. ಕೆಪಿಸಿಸಿ ಅಧ್ಯಕ್ಷರು ಸರಕಾರ ಭಸ್ಮವಾಗುವ ಹೇಳಿಕೆ ನೀಡಿದರು.

ಅವರನ್ನು ಅವರು ಭಸ್ಮಾಸುರ ಅಂದುಕೊಂಡಿದ್ದಾರೆ. ಆದರೆ, ಅವರೇ ಶಾಪಗ್ರಸ್ತರು; ಅವರೇ ಬೇಲ್‍ನಲ್ಲಿದ್ದಾರೆ. ಸಿಬಿಐ, ಇ.ಡಿ ಕುಣಿಕೆಯಲ್ಲಿದ್ದಾರೆ. ಕುಣಿಕೆ ಬಿಗಿಯಾದರೆ ರಾಜಕೀಯವಾಗಿ ಅವರು ಉಳಿಯುವುದೇ ಕಷ್ಟ ಎಂದು ನುಡಿದರು. ತಾವು ಆಸೆ ಆಮಿಷದ ಮತ್ತು ಬಲಪ್ರಯೋಗದ ಮತಾಂತರದ ಪರ ಎಂದು ಕಾಂಗ್ರೆಸ್ ಹೇಳಿಕೆ ನೀಡಲಿ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂ ಭಾವನೆಗಳನ್ನು ಘಾಸಿ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಕುಂಬಳಕಾಯಿ ಕಳ್ಳ ಎಂದೊಡನೆ ಇವರು ಹೆಗಲು ಮುಟ್ಟಿ ನೋಡಿಕೊಳ್ಳುವುದ್ಯಾಕೆ? ಮತಾಂತರ ಎಂದರೆ ಅದು ರಾಷ್ಟ್ರಾಂತರಕ್ಕೆ ಸಮ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅಂಬೇಡ್ಕರರು ನಾನು ನನ್ನ ಸಾಂಸ್ಕøತಿಕ ಬೇರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದರಲ್ಲದೆ, ಭಾರತೀಯ ಸಾಂಸ್ಕøತಿಕತೆ ಇರುವ ಬೌದ್ಧ ಧರ್ಮಕ್ಕೆ ಸೇರಿದ್ದರು. ಬೌದ್ಧ ಧರ್ಮ ಹಿಂದೂ ಧರ್ಮಕ್ಕೆ ಸುಧಾರಣೆ ತಂದಿದೆ ಎಂದೂ ನುಡಿದಿದ್ದರು ಎಂದರು. ಮೇಕೆದಾಟು ಸಂಬಂಧ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಸುಧಾರಣೆಗಾಗಿ ಪಾದಯಾತ್ರೆ ಮಾಡಲಿ ಎಂದ ಸಿ.ಟಿ.ರವಿ ಅವರು, ಆಂತರಿಕ ಗದ್ದುಗೆಯ ಗುದ್ದಾಟಕ್ಕಾಗಿ ಮೇಲುಗೈ ಸಾಧನೆಗೆ ಈ ಪಾದಯಾತ್ರೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ 6 ವರ್ಷ ಕಾಲ ಈ ಯೋಜನೆಗಾಗಿ ಮಾಡಿದ ಪ್ರಯತ್ನಗಳೇನು ಎಂದು ವಿವರ ಕೊಡಲಿ ಎಂದು ಸವಾಲೆಸೆದರು. ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆ ಅನುಮೋದನೆ ಸಿಗಬೇಕಾಗಿದೆ. ಯೋಜನೆಗೆ ರಾಜ್ಯ ಸರಕಾರ ಬದ್ಧತೆಯನ್ನೂ ವ್ಯಕ್ತಪಡಿಸಿದೆ. ಹೀಗಿರುವಾಗ ತಮ್ಮ ಪಾದಯಾತ್ರೆ ಯಾವ ಉದ್ದೇಶಕ್ಕೆ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಚುನಾವಣೆಯಿಂದ ಚುನಾವಣೆಗೆ ಪರಿಸ್ಥಿತಿಗಳು ಭಿನ್ನ ಇರುತ್ತವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಶೇ 50ರಷ್ಟು ಪ್ರಭಾವ ಬೀರುತ್ತದೆ. ಅಲ್ಲಿನ ರಾಜಕೀಯ ಸನ್ನಿವೇಶಗಳೇ ಬೇರೆ ಇರುತ್ತವೆ. ವಿಧಾನಸಭೆಯ ರಾಜಕೀಯ ಸನ್ನಿವೇಶಗಳೇ ಬೇರೆ ಇರುತ್ತವೆ. ಈಗ ರಾಜ್ಯದ ಜನ ಜೈಲ್ ಮತ್ತು ಬೇಲ್, ಭ್ರಷ್ಟಾಚಾರದ ಮಾದರಿಯನ್ನು ಬಯಸುತ್ತಿಲ್ಲ. ಅಭಿವೃದ್ಧಿ ಮಾಡುವ ರಾಜಕಾರಣವನ್ನು ಬಯಸುತ್ತಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನನ್ನ ನಾಯಕತ್ವದಲ್ಲೇ ಚುನಾವಣೆ ಎನ್ನುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್‍ನಲ್ಲಿ ಸಾಮೂಹಿಕ ನಾಯಕತ್ವದ ಧ್ವನಿಯೂ ಕೇಳುತ್ತಿದೆ. ಒಂದು ಚುನಾವಣೆ ಆಧಾರದಲ್ಲಿ ಇನ್ನೊಂದು ಚುನಾವಣೆಯನ್ನು ಅಳೆಯಲಾಗದು ಎಂದರು. ರಾಜ್ಯದಲ್ಲಿ ಚುನಾವಣೆ ನೇತೃತ್ವದ ಕುರಿತು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ಚುನಾವಣೆ ಹಿನ್ನಡೆ, ಪಕ್ಷ- ಸರಕಾರದ ಕಾರ್ಯವೈಖರಿ ಬಗ್ಗೆ ಆಗಾಗ ಅವಲೋಕನ ನಡೆಯುತ್ತದೆ ಎಂದೂ ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ನಾನು ಯಾವುದೇ ಹುದ್ದೆಯ ರೇಸ್‍ನಲ್ಲಿಲ್ಲ. ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಸುದೈವವಶಾತ್ ಪಕ್ಷ ಈಗಾಗಲೇ ನನಗೆ ರಾಷ್ಟ್ರಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಮತಾಂತರ ನಿಯಂತ್ರಣ ಮಸೂದೆಯಡಿ ಅವರವರ ಚಟುವಟಿಕೆ ನಡೆಸಲು ಅಡ್ಡಿ ಇಲ್ಲ. ಕಪಾಲಿ ಬೆಟ್ಟದ ಹೆಸರು ಬದಲಿಸಿ ಅಲ್ಲಿ ಏಸು ಪ್ರತಿಮೆ ನಿರ್ಮಿಸಲು ಮುಂದಾದಾಗ ಸಮಸ್ಯೆ ಆಗುತ್ತದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಒಂದರ ಅಸ್ತಿತ್ವವನ್ನು ಅಳಿಸಿ ಮತ್ತೊಂದರ ಅಸ್ತಿತ್ವಕ್ಕೆ ಮುಂದಾದಾಗ ಸಂಘರ್ಷ ಆಗುತ್ತದೆ ಎಂದರು. ಆರೆಸ್ಸೆಸ್ ಶಾಖೆಗಳನ್ನು ಮಾಡುತ್ತಾ ರಾಷ್ಟ್ರಭಕ್ತಿ ತುಂಬುತ್ತಿದೆ. ಆದರೆ, ಸಂಘದ ಕುರಿತು ತಪ್ಪು ಕಲ್ಪನೆ ಮೂಡಿಸುತ್ತಾ ಬರಲಾಗಿದೆ ಎಂದು ವಿವರಿಸಿದರು.