ವರ್ಷವಿಡೀ ಸಂಭ್ರಮಾಚರಣೆಗೆ ತೀರ್ಮಾನ : ಡಿ.ಕೆ.ಶಿವಕುಮಾರ್.

ಹುಬ್ಬಳ್ಳಿ: “ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿವೆ. ರಾಜ್ಯದ ಜನ ಹಾಗೂ ಸರ್ಕಾರಕ್ಕೆ ಈ ಸುವರ್ಣ ಹಬ್ಬ ಆಚರಿಸಲು ಒಂದು ಅವಕಾಶ ಇದೆ. ಇಡೀ ವರ್ಷ ಸಂಭ್ರಮಾಚರಣೆಗೆ ಸರ್ಕಾರ ತೀರ್ಮಾನ ಮಾಡಿದೆ.

ಕನ್ನಡ ಜ್ಯೋತಿಗೆ ನಿನ್ನೆ ಚಾಲನೆ ನೀಡಲಾಗಿದೆ. ಅದರ ಮುಂದುವರಿದ ಭಾಗವಾಗಿ ಗದಗದಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಭುವನೇಶ್ವರಿ ಭವನ ನಿರ್ಮಾಣ ಘೋಷಣೆ ಮಾಡಿದ್ದಾರೆ.”

ಪ್ರಶ್ನೋತ್ತರ:

 

ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮೀಕ್ಷೆ ಎಲ್ಲಿಯವರೆಗೂ ಬಂದಿದೆ ಎಂದು ಮಾಧ್ಯಮಗಳು ಕೇಳಿದಾಗ, “ಈಗಾಗಲೇ ಮಂತ್ರಿಗಳನ್ನು ಆಯಾ ಜಿಲ್ಲೆಗೆ ಕಳುಹಿಸಿದ್ದೇವೆ. ಅವರು ನಮಗೆ ವರದಿ ನೀಡಲಿದ್ದಾರೆ. ಶೆ.75ರಷ್ಟು ಮಂದಿ ನಮ್ಮ ಕಾರ್ಯಕರ್ತರು, ಶಾಸಕರು, ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ದೆಹಲಿ ನಾಯಕರು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಕೆಲವು ಮಾನದಂಡ ನಿಗದಿ ಮಾಡಿದ್ದೇವೆ” ಎಂದು ತಿಳಿಸಿದರು.

ಪಕ್ಷದಲ್ಲಿ ಇರುವ ಅಸಮಾಧಾನ ಹೇಗೆ ಪರಿಹರಿಸಿಕೊಳ್ಳುತ್ತೀರಿ ಎಂದು ಕೇಳಿದಾಗ, “ನಮ್ಮ ಪಕ್ಷದಲ್ಲಿ ಎಲ್ಲಿ ಅಸಮಾಧಾನ ಇದೆ? ಬಿಜೆಪಿಯಲ್ಲಿ ಅಸಮಾಧಾನ ಇದ್ದು, ಅದರಿಂದ ಅವರ ನಾಯಕರ ಆಯ್ಕೆ ಮಾಡಲು ಆಗುತ್ತಿಲ್ಲ. ಈ ಬಗ್ಗೆ ನೀವು ಪ್ರಶ್ನೆ ಮಾಡುತ್ತಿಲ್ಲ. ಸರ್ಕಾರ ರಚನೆ ಆಗಿ ಐದಾರು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆ ಆಗದ ಇತಿಹಾಸವನ್ನು ರಾಜ್ಯ ಅಥವಾ ದೇಶದಲ್ಲಿ ನೋಡಿದ್ದೀರಾ?” ಎಂದು ತಿಳಿಸಿದರು.

ಬಿಜೆಪಿ ಬರ ಅಧ್ಯಯನ ಪ್ರವಾಸದ ಬಗ್ಗೆ ಕೇಳಿದಾಗ, “ಅವರು ಅಧ್ಯಯನ  ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿ. ನಮ್ಮ ಸಚಿವರಾದ ಚೆಲುವರಾಯ ಸ್ವಾಮಿ ಹಾಗೂ ಕೃಷ್ಣಭೈರೇಗೌಡ ಅವರು ಅಧ್ಯಯನ ಮಾಡಿ ಸುಮಾರು 200 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಅವರು ಸುಮ್ಮನೆ ಘೋಷಣೆ ಮಾಡಿದ್ದಾರಾ? ಮಂಡ್ಯ, ಹಾವೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಪರಿಶೀಲನಾ ಸಭೆ ನಡೆಯುತ್ತಿದೆ” ಎಂದು ತಿಳಿಸಿದರು.

 

ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಹೋಗಿದೆ ನಂತರ ಏನಾಯ್ತು ಎಂದು ಕೇಳಿದಾಗ, “ನಾವು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ನಾವು ಸಾವಿರ ಕೋಟಿಯಷ್ಟು ಹಣವನ್ನು ಮೀಸಲು ಇಟ್ಟಿದ್ದೇವೆ” ಎಂದು ತಿಳಿಸಿದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top