ಬೆಂಗಳೂರು : ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ಸೂಚನೆ ನೀಡಿದರೆ, ಮುಖ್ಯಮಂತ್ರಿ ಯಾಗಿ ಮುಂದುವರೆಯುತ್ತೇನೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಅವರ ಹೇಳಿಕೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುನ್ಸೂಚನೆ ನೀಡಿದೆ. ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ಬಂದಿದೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ನಾವು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ.
ನಮಲ್ಲಿರುವ ಹೈಕಮಾಂಡ್ ತೀರ್ಮಾನ ಮಾಡಿದರೆ ಅದಕ್ಕೆ ಬದ್ಧವಾಗಿರುತ್ತೆವೆ. ನೀವೇ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೆನೆ. ಅಂತಿಮವಾಗಿ ಹೈಕಮಾಂಡ್ ಹೇಳಿದಂತೆ ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರು ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಯೇ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದ ಮೇಲೂ ಪುನಃ ಇದೇ ರೀತಿಯ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.4-5 ತಿಂಗಳ ಹಿಂದೆ ಸಂಪುಟ ಪುನರ್‍ರಚನೆ ಮಾಡುವ ಸಲುವಾಗಿ ಚರ್ಚಿಸಲು ದೆಹಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಸಂಪುಟ ಪುನರ್ ರಚಿಸಿ ಎಂದು ಹೈಕಮಾಂಡ್ ಸಮತಿ ನೀಡಿತ್ತು. ಆದರೆ ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್‍ರಚನೆ ಮಾಡುವುದಾಗಿ ತಾವು ಹೇಳಿ ಬಂದಿದ್ದಾಗಿ ತಿಳಿಸಿದರು. ಈಗ ಹೈಕಮಾಂಡ್ ಹೇಳಿದರೆ ಸಂಪುಟ ಪುನರ್‍ರಚಿಸಲಾಗುತ್ತದೆ. ನಾಯಕತ್ವ ಬದಲಾವಣೆ ವಿಷಯದಲ್ಲೂ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಬಣದ ಕೆಲ ಶಾಸಕರು ದೆಹಲಿಗೆ ತೆರಳಿ ವರಿಷ್ಠ ನಾಯಕರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈವರೆಗೂ ಸಿದ್ದರಾಮಯ್ಯ ಅವರು 5 ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಪದೇಪದೇ ಪ್ರತಿಪಾದಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ವಿಶ್ವಾಸವನ್ನು ಕುಗ್ಗಿಸಿದಂತೆ ಕಂಡುಬರುತ್ತದೆ.
ಡಿ.ಕೆ.ಶಿವಕುಮಾರ್ ಶತಾಯಗತಾಯ ಮುಖ್ಯಮಂತ್ರಿ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದು ತಮದೇ ಆದ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇಬ್ಬರೂ ಮುಖಾಮುಖಿ ಭೇಟಿಯಾದರೂ ಕೂಡ ನಾಯಕತ್ವದ ವಿಚಾರದಲ್ಲಿ ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ಬಿರುಸಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳುವ ನಿರ್ಧಾರಗಳಿಗೆ ಬದ್ಧ ಎಂದು ಒಂದು ವಾಕ್ಯದ ಉತ್ತರಕ್ಕೆ ಸೀಮಿತವಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿಂದು ಮಾಧ್ಯಮದವರನ್ನು ಮುಖಾಮುಖಿಯಾದರೂ, ಯಾವುದೇ ಹೇಳಿಕೆ ನೀಡದೆ ಕೈಬೀಸಿ ಮುಂದೆ ಸಾಗಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿ ಭಾಗವಹಿಸಿದ್ದರು.
ಸಿಎಂ-ಡಿಸಿಎಂ ನಡುವೆ ವೈಮನಸ್ಯ : ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ವೈಮನಸ್ಯ, ಅಸಮಾಧಾನ ಇರುವುದು ಮೇಲ್ನೋಟಕ್ಕೆ ಕಂಡು ಬಂತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರ ಆಗಮನಕ್ಕೂ ಕಾಯದೆ ಗುದ್ದಲಿ ಪೂಜೆ ನೆರವೇರಿಸಿದರು.ಕಾರ್ಯಕ್ರಮವನ್ನು ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಂ. ಸಿ.ಸುಧಾಕರ್ ಎಚ್.ಸಿ. ಮಹಾದೇವಪ್ಪ ಅವರೊಂದಿಗೆ ಉದ್ಘಾಟಿಸಿದರು.
ತಡವಾಗಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ವೇದಿಕೆ ಮುಂಭಾಗದಲ್ಲಿ ಸೇರಿದ ಜನರತ್ತ ಕೈಬೀಸಿ ಅಭಿನಂದಿಸುವ ಮೂಲಕ ವೇದಿಕೆಯಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಸಂಚರಿಸಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಶಾಸಕರಿಗೆ, ಸಚಿವರಿಗೆ ಕೈ ಮುಗಿಯುತ್ತಲೇ ವಿಶ್ ಮಾಡಿದ ಡಿ.ಕೆ.ಶಿವಕುಮಾರ್, ಎಲ್ಲರಂತೆ ಸಿದ್ದರಾಮಯ್ಯ ಅವರ ಮುಂದೆಯೂ ಕೈಮುಗಿದುಕೊಂಡೇ ಸಾಗಿದರು.
ಈ ಮೊದಲೆಲ್ಲ ವೇದಿಕೆಗೆ ಆಗಮಿಸಿದಾಗ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪರಸ್ಪರ ಕೈ ಕುಲುಕಿ ಆತ್ಮೀಯತೆಯಿಂದ ಮಾತನಾಡಿಕೊಳ್ಳುತ್ತಿದ್ದರು.
ಇಂದು ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತುಕೊಂಡು ಮಾತನಾಡಿದರಾದರೂ, ಅವರಲ್ಲಿ ಮೊದಲಿದ್ದ ಆತ್ಮೀಯತೆ ಕಾಣಲಿಲ್ಲ. ಇಬ್ಬರ ಮುಖಗಳೂ ಗಂಟಿಕ್ಕಿದಂತೆ ಕಂಡು ಬಂತು. ರಾಜಕೀಯವಾಗಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿಯೇ ಕಂಡು ಬಂತು



