ಹುಲಿ ಉಗುರು ವಿವಾದಕ್ಕೆ ಮುಖ್ಯಮಂತ್ರಿ ತೆರೆ ಎಳೆಯಬೇಕು: ಆಭರಣ ಮಾಲೀಕರಿಗೆ ಕಿರುಕುಳ ಸಲ್ಲದು

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಹುಲಿ ಉಗುರು ಫೆಂಡೆಂಟ್ ವಿವಾದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಬೇಕು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಆಗ್ರಹಿಸಿದ್ದಾರೆ.

 

ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ಉಗುರು ಫೆಂಡೆಂಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಭರಣ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು,  ಈ ವಿವಾದಕ್ಕೆ ತೆರೆ ಎಲೆಯಬೇಕು. ಇಲ್ಲವಾದಲ್ಲಿ ಆಭರಣ ವ್ಯಾಪಾರಿಗಳು ಮುಕ್ತವಾಗಿ ವ್ಯಾಪಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ.  ರಾಜ್ಯವ್ಯಾಪಿ ಚಿನ್ನಾಭರಣ ಅಂಗಡಿಗಳ ಮಾಲೀಕರು ಮತ್ತು ಅಕ್ಕಸಾಲಿಗರು ಭಯಭೀತರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಇಂತಹ ಕಾಲಘಟ್ಟದಲ್ಲಿ ಹುಲಿ ಉಗುರು ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸರ್ಕಾರ ಈಗಾಗಲೇ ಹಲವು ವಿಚಾರಗಳಲ್ಲಿ ವೈಫಲ್ಯ ಕಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿ ವಿಚಾರ ಧ್ವನಿಸುತ್ತಿದೆ. ಜನಪರ ಸಮಸ್ಯೆಗಳನ್ನು ಮರೆಮಾಚಲು ಇದೀಗ ಅರಣ್ಯ ಇಲಾಖೆ ಹುಲಿ ಉಗುರಿನ ಫೆಂಡೆಂಟ್ ವಿಚಾರವನ್ನು ಕೆದುಕಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ. ಹಿಂದೂ ಧರ್ಮದ ಆರ್ಚಕರನ್ನು, ಸಿನಿಮಾ ತಾರೆಯರನ್ನು, ರಾಜಕಾರಣಿಗಳನ್ನು  ಟಾರ್ಗೆಟ್ ಮಾಡಲಾಗಿದೆ. ವನ್ಯಜೀವಿ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸದೇ ದಿಢೀರ್ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.

 

ಅರಣ್ಯ ಇಲಾಖೆಯ ಅಧಿಕಾರಿಗಳ ಹುಲಿ ಉಗುರಿನ ಫೆಂಡೆಂಟ್ ಬಗ್ಗೆ ಆಭರಣ ಮಾಲೀಕರಿಗೆ ನೋಟಿಸ್ ನೀಡದೆ ಏಕಾ ಏಕಿ ದಾಳಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೋಟಿಸ್ ನೀಡದೇ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಬಾರದು. ಪೆಂಡೆಂಟ್ ವಿಚಾರದಲ್ಲಿ ವಜ್ರಾಭರಣ ಅಂಗಡಿಗಳ ಮಾಲೀಕರಿಗೆ ಮಾನಸಿಕ ಕಿರುಕುಳ ನೀಡಿದರೆ. ರಾಜ್ಯವ್ಯಾಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಡಬೇಕಾದಿತು ಎಂದು ಎಚ್ಚರಿಸಿದರು.

ಕಾನೂನು ಎಲ್ಲರಿಗೂ ಸಮಾನ ಎಂದು ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಅರಣ್ಯ ಉತ್ಪನ್ನ ಹೊಂದಿರುವ ವ್ಯಕ್ತಿಗಳು ತಾವಾಗಿಯೇ ಅದನ್ನು ಸರ್ಕಾರಕ್ಕೆ ವಾಪಸ್ ನೀಡಲು ಗಡುವು ನಿಗದಿಮಾಡಬೇಕು. ಜನರಿಗೆ ತಿಳುವಳಿಕೆ ನೀಡದೇ ಸಾರ್ವಜನಿಕರ ಮೇಲೆ ದಾಳಿ ಮಾಡಿ ಮೊಕದ್ದಮೆ ಹೂಡಲು ಹೊರಟಿರುವುದು ಸರಿಯಲ್ಲ. ಹುಲಿ ಉಗುರು ಸೇರಿದಂತೆ ಕೆಲ ವನ್ಯಜೀವಿ ಉತ್ಪನ್ನಗಳಿಗೆ ಬಂಗಾರದ ಅಲಂಕಾರಿಕ ವಿನ್ಯಾಸ ಮಾಡುವ ಸಂಪ್ರದಾಯವಿದೆ. ಇದನ್ನು ಬಂಗಾರದ ಕವಚನದಿಂದಲೂ ಅಲಂಕಾರ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಚಿನ್ನಾಭರಣ ಮಾರಾಟಗಾರರ ಮೇಲೆ ಕ್ರಮ ಜರುಗಿಸಲು ಹೊರಟಿರುವುದು ಸರಿಯಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್‌ನ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಧರಿಸಿರುವ ಹುಲಿ ಉಗುರಿನ ಫೆಂಡೆಂಟ್ ಅಸಲಿ ಅಲ್ಲ. ಅದು ಪ್ಲಾಸ್ಟಿಕ್ ಆಗಿದೆ. ಆ ಪ್ಲಾಸ್ಟಿಕ್ ಪೆಂಡೆಂಟ್ ನೂರು ರೂಪಾಯಿ ಬೆಲೆಬಾಳುತ್ತದೆ. ಇದನ್ನು ನಿಖಿಲ್ ಕುಮಾರ ಸ್ವಾಮಿ ಅವರಿಗೆ ಮದುವೆ ವೇಳೆ ಅವರ ಸಂಬಂಧಿಕರು ಉಡುಗೊರೆ ನೀಡಿದ್ದಾರೆ. ವಜ್ರ ಮತ್ತು ಬಂಗಾರ ಲೆಪಿತ ಪೆಂಡೆಂಟ್ ಆದಾಗಿತ್ತು. ಅದನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.

 

ಈ ವೇಳೆ ಇಂಡಿಯನ್ ಜ್ಯೂವೆಲರಿ ಅಸೋಸಿಯೇಷನ್ ಉಪಾಧ್ಯಕ್ಷ ಚೇತನ್ ಕುಮಾರ್ ಮೆಹ್ತಾ, ಬೆಂಗಳೂರು ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಗನ್ನಾ, ಸುಮೇಶ್ ವಡೇರಾ ಸೇರಿದಂತೆ ಮತ್ತತಿರರು ಉಪಸ್ಥಿತರಿದ್ದರು

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top