ನಾಡಿನ ಹೆಮ್ಮೆಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಶತಮಾನೋತ್ಸವ ಸಂಭ್ರಮ

ನವೆಂಬರ್ 4 ಮತ್ತು 5 ರಂದು ಭದ್ರಾವತಿಯಲ್ಲಿ ವೈಭವದಿಂದ ಆಚರಣೆ

ಬೆಂಗಳೂರು: ನಾಡಿನ ಕೈಗಾರಿಕಾ ವಲಯದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿ ಮುನ್ನಡೆಯುತ್ತಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ನವೆಂಬರ್ 4 ಮತ್ತು 5 ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭ ನಡೆಯಲಿದೆ.

 

ಕಾರ್ಖಾನೆ ಮಾಜಿ ಉದ್ಯೋಗಿ ಹಾಗೂ ಹಿರಿಯ ಕಲಾವಿದ ಎಸ್. ದೊಡ್ಡಣ್ಣ ಮತ್ತು ಮಾಜಿ ಉದ್ಯೋಗಿ, ಹಿರಿಯ ನ್ಯಾಯವಾದಿ ಎಂ.ಎ. ರೇವಣ ಸಿದ್ಧಯ್ಯ ಅವರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ರತ್ನ ಸರ್,ಎಂ. ವಿಶ್ವೇಶ್ವರಾಯ ಮತ್ತು ಮೈಸೂರು ಯದುವೀರ ಅರಸರ  ಆಸಕ್ತಿಯಿಂದ ಕಾರ್ಖಾನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 4 ರಂದು ಶತಮಾನೋತ್ಸವ ಸಮಾರಂಭವನ್ನು ಯದುವೀರ ಕೃಷ್ಣದತ್ತ  ಚಾಮರಾಜ ಒಡೆಯರ್ ಅವರಿಂದ ಉದ್ಘಾಟಿಸಲಾಗುತ್ತಿದೆ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮಿಗಳು, ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕೋಡಿ ಮಠದ  ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 

ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಜ್ಯೋತಿರಾದಿತ್ಯ ಸಿಂಧ್ಯ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ನಾಡಿನ ಶ್ರೇಷ್ಠ ಸಾಧಕರಾದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜನಾಥ್, ಕೆ.ಎಲ್.ಇ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ ಕೋರೆ, ವಿಆರ್‍ಎಲ್ ಸಂಸ್ಥೆಯ ಸಂಸ್ಥಾಪಕರಾದ ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಲಾಗುತ್ತಿದೆ. ನಾಡಿನ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಹೇಳಿದರು.

 

ನವೆಂಬರ್ 5 ರಂದು ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಸಚಿವರಾದ ಎಚ್,ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ, ಎನ್. ಚಲುವರಾಯ ಸ್ವಾಮಿ, ಕೃಷ್ಣ ಭೈರೇಗೌಡ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ,  ಮಲ್ಲಿಕಾರ್ಜುನ್, ಈಶ್ವರಖಂಡ್ರೆ ಅವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಲ್ಫ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಯನ್ನು ಮೈಸೂರು ಐರನ್ ಅಂಡ್ ಸ್ಟೀಲ್ ವಕ್ರ್ಸ್ ಎಂದು ನಾಮಕರಣ ಮಾಡಲಾಯಿತು. 1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂಬುದಾಗಿ ಮರುನಾಮಕರಣವಾಯಿತು. ಭಾರತೀಯ ಉಕ್ಕು ಪ್ರಾಧಿಕಾರ 1989ರಲ್ಲಿ ಇದನ್ನು ತನ್ನ ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಭದ್ರಾವತಿಯ ಜೀವನಾಡಿಯಾಗಿ ಉಳಿದು ಲಕ್ಷಾಂತರ ಜನರಿಗೆ “ಬದುಕು ಮತ್ತು ಜೀವನ” ನಿರ್ಮಿಸಿಕೊಟ್ಟಿದೆ ಈ ಕಾರ್ಖಾನೆ ಎಂದರು.

 

ಪತ್ರಿಕಾ ಗೋಷ್ಠಿಯಲ್ಲಿ ವೇದವ್ಯಾಸ, ಬಿ.ಟಿ. ಶ್ರೀನಿವಾಸಗೌಡ, ಎನ್.ಟಿ. ಸತ್ಯನಾರಾಯಣ, ಎಸ್.ಎಸ್ ಶ್ರೀನಾಥ್ ನಾಗಭೂಷಣ್ ಭಾಗವಹಿಸಿದ್ದರು.

Facebook
Twitter
LinkedIn
Telegram
Email
WhatsApp
Print

Leave a Comment

Your email address will not be published. Required fields are marked *

Translate »
Scroll to Top