ದಿಗ್ಗಜ ಕಪಿಲ್ ದೇವ್ ದಾಖಲೆಯನ್ನ ಮುರಿದ ಜಸ್‌ಪ್ರೀತ್ ಬುಮ್ರಾ !
IND vs ENG 3rd test: ಜೋ ರೂಟ್ ಅವರ ವಿಕೆಟ್ ಕಿತ್ತ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ ಅವರನ್ನು 11ನೇ ಬಾರಿ ಔಟ್ ಮಾಡಿದಂತಾಯಿತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಕೂಡ ಇಷ್ಟೇ ಸಲ ರೂಟ್ ಅವರನ್ನು ಔಟ್ ಮಾಡಿದ್ದಾರೆ. ಇದೀಗ ಈ ಸಾಲಿನಲ್ಲಿ ಈ ಇಬ್ಬರು ಜಂಟಿ ಸ್ಥಾನವನ್ನು ಅಲಂಕರಿಸಿದ್ದಾರೆ.
ಕಪಿಲ್ ದೇವ್ ದಾಖಲೆ ಮುರಿದ ಜಸ್‌ಪ್ರೀತ್ ಬುಮ್ರಾ
ಲಾರ್ಡ್ಸ್: ದ್ವಿತೀಯ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದು ಮಿಂಚುವ ಜತೆಗೆ ದಿಗ್ಗಜ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಿದೇಶಿ ನೆಲದಲ್ಲಿ 13ನೇ ಬಾರಿ 5 ವಿಕೆಟ್ ಗೊಂಚಲು ಪಡೆದು ಕಪಿಲ್ ದೇವ್ (12) ಅವರನ್ನು ಹಿಂದಿಕ್ಕಿ ವಿದೇಶದಲ್ಲಿ ಗರಿಷ್ಠ 5 ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಕಪಿಲ್ ದೇವ್ ವಿದೇಶದಲ್ಲಿ 66 ಟೆಸ್ಟ್ ಆಡಿದ್ದರೆ, ಬುಮ್ರಾ 35 ಟೆಸ್ಟ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ (10), ಇಶಾಂತ್ ಶರ್ಮ (9) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಒಟ್ಟಾರೆಯಾಗಿ 15ನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಬುಮ್ರಾ ಲಾರ್ಡ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದ 15ನೇ ಭಾರತೀಯ ಬೌಲರ್ ಆಗಿದ್ದಾರೆ. ಈ ಮೂಲಕ ಲಾರ್ಡ್ಸ್ ಆನರ್ಸ್ ಬೋರ್ಡ್ನಲ್ಲಿ ಮೊದಲ ಬಾರಿ ಹೆಸರು ಬರೆಸಿದರು. ಒಟ್ಟು 27 ಓವರ್‌ಗಳನ್ನು ಬೌಲ್ ಮಾಡಿದ್ದ ಬುಮ್ರಾ 74 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು.
ಜೋ ರೂಟ್ ಅವರ ವಿಕೆಟ್ ಕಿತ್ತ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ ಅವರನ್ನು 11ನೇ ಬಾರಿ ಔಟ್ ಮಾಡಿದಂತಾಯಿತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಕೂಡ ಇಷ್ಟೇ ಸಲ ರೂಟ್ ಅವರನ್ನು ಔಟ್ ಮಾಡಿದ್ದಾರೆ. ಇದೀಗ ಈ ಸಾಲಿನಲ್ಲಿ ಈ ಇಬ್ಬರು ಜಂಟಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಜೋ ರೂಟ್ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎಂಬ ದಾಖಲೆ ಜಸ್‌ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಅವರು ಒಟ್ಟು 15 ಬಾರಿ ಜೋ ರೂಟ್ ಅವರನ್ನು ಔಟ್ ಮಾಡಿದ್ದಾರೆ. ಟೆಸ್ಟ್‌ನಲ್ಲಿ 11 ಬಾರಿ, ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹಾಗೂ ಟಿ 20ಐ ಕ್ರಿಕೆಟ್‌ನಲ್ಲಿ ಒಂದು ಸಲ.