ವಾಲ್ಮೀಕಿ ಸಮುದಾಯದಲ್ಲಿ ಜನಿಸಿದ ಕಾರಣಕ್ಕೆ ನಾನಿಂದು ಶಾಸಕ, ಸಚಿವನಾಗಿರುವೆ: ಸಚಿವ ಬಿ.ನಾಗೇಂದ್ರ

ದಾವಣಗೆರೆ: ವಾಲ್ಮೀಕಿ ಸಮುದಾಯದಲ್ಲಿ ನಾನು ಜನಿಸಿರುವ ಕಾರಣಕ್ಕೇ ನಾನಿಂದು ಶಾಸಕನಾಗಿ, ಸಚಿವನಾಗಿ ನಿಮ್ಮ ಮುಂದೆ ನಿಂತಿದ್ದೇನೆ, ನಾನು ಸಚಿವನಾಗಿ ಮೊದಲ ಬಾರಿಗೆ ಗುರುಪೀಠಕ್ಕೆ ಬಂದ ಈ ದಿನ ನನಗೆ ತುಂಬ ವಿಶೇಷ ಅನುಭವವನ್ನು ನೀಡಿತು ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಲ್ಲಿ ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮಿಜೀಯವರ ದಿವ್ಯ ಸಾನಿದ್ಯದಲ್ಲಿ ಭಾನುವಾರ ಸಮುದಾಯದ ನೂತನ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಭಾಗವಹಿಸಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

 

ಇದೇ ಸಂದರ್ಭ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀಪಸನ್ನಾನಂದಪುರಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ ಅವರು, ಪೂಜ್ಯ ವಾಲ್ಮೀಕಿಯವರು ನಮ್ಮ ಸಮಾಜಕ್ಕೆ ಲೇಖನಿಯನ್ನು ಕೊಟ್ಟರೆ, ಡಾ. ಬಿ.ಆರ್. ಅಂಬೇಡ್ಕರ್ ರವರು ಮೀಸಲಾತಿಯನ್ನು ಕೊಟ್ಟಿದ್ದಾರೆ. ನಮ್ಮ ಪೂಜ್ಯರು ಮೀಸಲಾತಿಯನ್ನು ಹೆಚ್ಚಿಸಲು 257ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ  ಸಫಲರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಪೂಜ್ಯರ ಸತ್ಯಾಗ್ರಹದಕ್ಕೆ ನಾವೆಲ್ಲರೂ ಇಕ್ಕೊರಲಾಗಿ ಜೊತೆಗಿದ್ದೆವು. ಸ್ವಾಮೀಜಿಯವರ ಹೊರಾಟಕ್ಕೆ ಬೆಂಬಲವಾಗಿದ್ದೆವು. ಸ್ವಾಮೀಜಿವರ ಕರೆಗೆ ಬದ್ದವಾಗಿದ್ದೆವು. ಸ್ವಾಮೀಜಿವರು ನಿರಂತರವಾಗಿ ಬೋರ್ಗರೆದ  ಮಳೆಗೆ, ಬಿರುಗಾಳಿ, ಕೊರೆಯುವ ಚಳಿಯಲ್ಲೂ ಬಗ್ಗದೇ 257 ದಿನಗಳ ಕಾಲ  ಬೆಂಗಳೂರಿನ  ಪ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ  ಸತ್ಯಾಗ್ರಹ ನಡೆಸಿ, ಬೋರ್ಗರೆದ ಮಳೆಯಲ್ಲೂ ಛತ್ರಿ ಹಿಡಿದು ಸತ್ಯಾಗ್ರಹ ಮಾಡಿದರು. ಅಂತಹ ಪರಿಸ್ಥಿತಿಯಲ್ಲೂ ಛಲ ಬಿಡದೇ ಸಮಾಜವನ್ನು ಜಾಗೃತಗೊಳಿಸಿದರು. ಸಮಾಜದ ಕಲ್ಯಾಣಕ್ಕಾಗಿ ಯಾವುದನ್ನೂ ಲೆಕ್ಕಿಸದೇ  ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ ಎಂದರು.

ಪೂಜ್ಯರು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ಧರಣಿ ಕುಳಿತಾಗ ನಾನು, ಹಿರಿಯರಾದ ಸತೀಶ್ ಜಾರಕಿಹೊಳಿ ಅವರು, ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ಧರಣಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಬೆಂಬಲ ವ್ಯಕ್ತಪಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾತು ಕೊಟ್ಟಿದ್ದೆವು. ಇಂದು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಆಗಿದ್ದರೆ ಅದಕ್ಕೆ ಕಾರಣ ಕೆಳಗೆ ಕೂತಿರುವ ಸಮುದಾಯದ ಜನ, ವೇದಿಕೆ ಮೇಲೆ ಕೂತಿರುವ ಪರಮಪೂಜ್ಯರು ಎಂದು ಈ ಸಂದರ್ಭ ಹೇಳುತ್ತೇನೆ ಎಂದರು.

ಪರಿಶಿಷ್ಟ ಪಂಗಡಗಳ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಬದ್ದ

ಚಳ್ಳಕೆರೆಯ ನಾಯಕನಹಟ್ಟಿ ಭಾಗದಲ್ಲಿ ಸಮಾಜದ ಅಶಯದಂತೆ ಪರಿಶಿಷ್ಟ ಪಂಗಡಗಳ ವಿಶ್ವವಿದ್ಯಾನಿಲಯ ವ್ಯವಸ್ಥಾಪನೆ ಮಾಡಲು ಈಗಾಗಲೇ ಪ್ರಸ್ಥಾವನೆ ಸರ್ಕಾರಕ್ಕೆ ಸಲ್ಲಿಸಿದ್ದು ಇದಕ್ಕೆ ಹಿರಿಯ ಸಚಿವರುಗಳಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಸಮುದಾಯದ ಶಾಸಕರು ಕೈಕೋಡಿಸುವಂತೆ ಮನವಿ ಮಾಡಿದರು.

ಸಮುದಾಯದ ಬೇಡಿಕೆಯಂತೆ ಪ್ರತ್ಯೇಕ ಸಚಿವಾಲಯ ಶೀಘ್ರವಾಗಿ ಮಾಡಲಾಗುವುದು ಈ ಹಿಂದಿನ‌ ಸರ್ಕಾರದಲ್ಲಿ ಕ್ಯಾಬಿನೆಟ್ ನೋಟ್ ಅಗಿದ್ದು ಜಾರಿಗೊಳಿಸಲಾಗುವುದೆಂದರು. ಬೆಂಗಳೂರಿನ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗುವುದು.

 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಡಿ ಸಿಗುವ ಯೋಜನೆಗಳಿಗಾಗಿ ಯಾವ ಮಧ್ಯವರ್ತಿ ಬಳಿ ತೆರಳದೆ ನೇರವಾಗಿ ನಮ್ಮನ್ನು ಭೇಟಿ ಮಾಡಿ ಕಾನೂನಿನ ಚೌಕಟ್ಟಿನಲ್ಲಿ ಇಲಾಖೆಯಲ್ಲಿ ದೊರೆಯುವ ಸವಲತ್ತನ್ನ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಅವರ, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಸಂಸದರಾದ ವೈ.ದೇವೇಂದ್ರಪ್ಪ ಶಾಸಕರುಗಳಾದ ರಘುಮೂರ್ತಿ, ಶ್ರೀನಿವಾಸ್, ಅನಿಲ್ ಚಿಕ್ಕಮಾದು ಸೇರಿದಂತೆ ವಾಲ್ಮೀಕಿ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top