150 ಪ್ಲಸ್ ಶಾಸಕ ಸ್ಥಾನ ಪಡೆಯಲು ಬಿಜೆಪಿ ಕಾರ್ಯತಂತ್ರ- ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150 ಪ್ಲಸ್ ಶಾಸಕ ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಮೂರು ತಂಡಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರವಾಸವೂ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು. ಇಲ್ಲಿನ ಜಯನಗರದ ದಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸದ ವೇಳೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಗಳ ಸಾಧನೆಯ ಕುರಿತು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯದಿಂದ ಬೂತ್ ವರೆಗೆ ಸಭೆಗಳನ್ನು ನಡೆಸಲಾಗಿದೆ. ನಮ್ಮ ಸಂಘಟನೆಯನ್ನು ಸರ್ವಸ್ಪರ್ಶಿ- ಸರ್ವವ್ಯಾಪಿ ಮಾಡಲು ಶ್ರಮಿಸುತ್ತಿದ್ದೇವೆ. ಬೂತ್ ಕಮಿಟಿ, ಪೇಜ್ ಕಮಿಟಿ ಹೆಚ್ಚು ಸದೃಢಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಪ್ರತಿ ಪೇಜ್‍ಗೆ ಆರು ಜನರ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು. ಒಂದು ಮಂಡಲದಿಂದ ಇನ್ನೊಂದು ಮಂಡಲಕ್ಕೆ ತೆರಳಿ ಪೇಜ್ ಕಮಿಟಿ ಕಾರ್ಯದ ಪರಿಶೀಲನೆ ನಡೆದಿದೆ. ಬೂತ್ ಅಧ್ಯಕ್ಷರ ನಾಮಫಲಕ ಜೋಡಣೆ ದೇಶದಲ್ಲೇ ಮೊದಲ ಬಾರಿಗೆ ನಡೆದಿದ್ದು, ಶೇ 90ರಷ್ಟು ಕಾರ್ಯ ಮುಕ್ತಾಯವಾಗಿದೆ ಎಂದರು. ಪಕ್ಷದ ಸ್ಥಿತಿಗತಿಯ ಅವಲೋಕನವೂ ನಡೆಯುತ್ತಿದೆ ಎಂದು ತಿಳಿಸಿದರು.


ಹೊಸಪೇಟೆ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರು ಪಾಲ್ಗೊಂಡು ಮಾರ್ಗದರ್ಶನ ನೀಡಿದ ಕುರಿತು ವಿವರಿಸಿದರು. ಕಾರ್ಯಕಾರಿಣಿ ಯಶಸ್ವಿಯಾಗಿದೆ ಎಂದರು. ಸರಕಾರದ ಹತ್ತಾರು ಸಾಧನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಗಿದೆ. ಕಾಂಗ್ರೆಸ್ ವಿರುದ್ಧ ಇನ್ನೊಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಹಾಸನ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದರು. ಕಾಂಗ್ರೆಸ್ ಕಾಲೆಳೆಯುವ, ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗಲಭೆ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ವಿವರಿಸಿದರು. ಮತೀಯವಾದದ ಹೆಸರಿನಲ್ಲಿ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದೆ. ಅಧಿಕಾರ ಪಡೆಯಲು ಅರಾಜಕತೆ ಸೃಷ್ಟಿಸುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದ್ದು, ಡಿಜೆ.ಹಳ್ಳಿ, ಕೆಜಿ.ಹಳ್ಳಿ ಪ್ರಕರಣ, ಹರ್ಷ ಕೊಲೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರದ ಘಟನೆ ಇದಕ್ಕೆ ಉದಾಹರಣೆ ಎಂದು ತಿಳಿಸಿದರು. ಭಿಂದ್ರನ್‍ವಾಲೆ, ದಾವೂದ್ ಇಬ್ರಾಹಿಂಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಗೆ ಪ್ರೇರಣೆ ಮತ್ತು ಭ್ರಷ್ಟಾಚಾರಕ್ಕೂ ಪ್ರೇರಣೆ ನೀಡಿದೆ ಎಂದು ಟೀಕಿಸಿದ ಅವರು, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯಲು ಹವಣಿಸುತ್ತಿದೆ ಎಂದರು.
ಜೀಪ್ ಹಗರಣ, ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಎಲ್ಲರ ಅಧಿಕಾರದ ಸಂದರ್ಭದಲ್ಲೂ ಒಟ್ಟು 4 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತದ ಭ್ರಷ್ಟಾಚಾರ ಹಗರಣಗಳು ನಡೆದಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂಬಂತಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲ ಹೊರತುಪಡಿಸಿ ಇತರ ಎಲ್ಲ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಒಂದಿಲ್ಲೊಂದು ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ ಎಂದರು. ಕಾಂಗ್ರೆಸ್ ಮುಕ್ತ ಭಾರತ ಎಂದರೆ ಭ್ರಷ್ಟಾಚಾರದಿಂದ ಮುಕ್ತಿ ಎಂಬ ಅರ್ಥದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿಯವರು ತಿಳಿಸಿದ್ದಾರೆ ಎಂದರು.


ಸರಕಾರ ಎಲ್ಲ ಯೋಚನೆಗಳನ್ನು ಮಾಡುತ್ತಿದೆ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಗಲಭೆ ನಿಯಂತ್ರಣಕ್ಕೆ ಜಾತಿ ಮತ ಪಂಥ ಇಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಂಥ ಗಲಭೆ ಸೃಷ್ಟಿಸುವುದಕ್ಕೆ, ಸರಕಾರಿ ಕಚೇರಿಗಳಿಗೆ ಬೆಂಕಿ ಹಾಕುವುದಕ್ಕೆ ಮತ್ತು ಪೊಲೀಸರ ಸ್ಥೈರ್ಯ ಕುಸಿತಕ್ಕೆ ಕಾರಣರಾಗುವುದಕ್ಕೆ ಮತ್ತು ಸಮಾಜದ ಧೈರ್ಯ-ಸ್ಥೈರ್ಯ ಕಸಿಯುವುದು ಭಯೋತ್ಪಾದನೆಗೆ ಸಮ. ಅಂಥ ಗಲಭೆಕೋರರ ವಿರುದ್ಧ ಸರಕಾರ ದಿಟ್ಟ ಮತ್ತು ದೃಢವಾದ ಕ್ರಮ ತೆಗೆದುಕೊಳ್ಳಬೇಕು. ಇದು ಪಕ್ಷದ ನಿಲುವು ಎಂದು ಬುಲ್‍ಡೋಸರ್ ಮೂಲಕ ಕ್ರಮ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಪಿಎಸ್‍ಐ ಹಗರಣದಡಿ ಯಾವುದೇ ಪಕ್ಷದವರಾದರೂ ಬಂಧನ ನಡೆಯುತ್ತಿದೆ ಎಂದ ಅವರು, ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಮತ್ತು ರಾಹುಲ್ ಕಾಂಗ್ರೆಸ್ ಬಿಟ್ಟು ಹೊರಬರಲಿ. ಆಗ ಆ ಪಕ್ಷಕ್ಕೆ ಒಳಿತಾದೀತು ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ರಾಜ್ಯದ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ಎಲ್. ರವಿಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್.ಆರ್. ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top