ಬಳ್ಳಾರಿ: ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ರೈತವಿರೋಧಿ ನೀತಿಯನ್ನು ಖಂಡಿಸಿ ಸೆ.೦೮ರಂದು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲದ ಕರಿಛಾಯೆ ಆಚರಿಸಿದಾಗ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದ್ದ ಸಿಎಂ, ಡಿಸಿಎಂ ಮತ್ತು ಸರ್ಕಾರವು ಮೈಸೂರಿನಲ್ಲಿ ಕೋಟ್ಯಂತರ ರೂ.ಗಳನ್ನು ವ್ಯಯಿಸಿ ’ಗೃಹಲಕ್ಷ್ಮಿ’ ಯೋಜನೆಯ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿದ್ದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ರೈತರು, ಕೃಷಿ ಕಾರ್ಮಿಕರ ಪರವಾಗಿ ಕಾಳಜಿ ಇದ್ದಲ್ಲಿ, ಬರಪೀಡಿತ ಎಂದು ಘೋಷಿಸಿ ಯುದ್ದೋಪಾಧಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುಂಟು ನೆಪ ಹೇಳಬೇಡಿ: ಈಗಾಗಲೇ ರಾಜ್ಯದ ಯಾವ ಯಾವ ತಾಲ್ಲೂಕುಗಳಲ್ಲಿ ಗಂಭೀರ ಪರಿಸ್ಥಿತಿ ಕಂಡು ಬಂದಿದೆಯೋ ಆಯಾ ತಾಲ್ಲೂಕು, ಜಿಲ್ಲೆಗಳನ್ನು ಬರ ಪೀಡಿತ ಎಂದು ಪ್ರಕಟಿಸಿ ಸಮಗ್ರ ಸಮೀಕ್ಷೆ ನಡೆಸಿ ವರದಿ ಪಡೆಯಬೇಕು. ಕೇಂದ್ರ ಸರ್ಕಾರಕ್ಕೆ ಬರ ನೈಜ ಪರಿಸ್ಥಿತಿ ತಿಳಿಸಬೇಕು. ಸರ್ಕಾರಕ್ಕೆ ಈ ಬಗ್ಗೆ ಪ್ರಶ್ನಿಸಿದರೆ ಕೇಂದ್ರ ಸರ್ಕಾರದ ನಿಯಮಾವಳಿಗಳು ಅಡ್ಡಿ ಪಡಿಸುತ್ತವೆ ಎಂದು ಕುಂಟುನೆಪ ಹೇಳುತ್ತಿರುವುದು ಅವರ ಕೈಲಾಗತನವನ್ನು ಎತ್ತಿ ತೋರರಿಸುತ್ತದೆ ಎಂದು ಶ್ರೀರಾಮುಲು ಟೀಕಿಸಿದರು.
ಜನರು – ಜಾನುವಾರು ಸತ್ತ ನಂತರ ಬರ ಘೋಷಣೆ ಮಾಡುತ್ತೀರಾ ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶ್ರೀರಾಮುಲು ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವೊಬ್ಬ ಜಿಲ್ಲಾ ಸಚಿವರೂ ಕೂಡ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ. ಮೃತ ರೈತರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುತ್ತಿಲ್ಲ. ರೈತಾಪಿ ವರ್ಗಕ್ಕೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಗ್ಯಾರೆಂಟಿ ಅಲೆಯಲ್ಲಿ ಲಾಟರಿ ಸರ್ಕಾರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಐದು ಗ್ಯಾರೆಂಟಿಗಳನ್ನು ಘೋಷಿಸಿ ಲಾಟರಿಯಲ್ಲಿ ಅಧಿಕಾರಕ್ಕೆ ಬಂದಿದೆ. ಇವರು ಲಾಟರಿ ಶಾಸಕರು, ಲಾಟರಿ ಸಚಿವರೂ ಆಗಿದ್ದಾರೆ. ಬರಗಾಲದ ಗಂಭೀರ ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ನೆರವಿನ ಪ್ಯಾಕೇಜ್ ಕೂಡ ಘೋಷಿಸಿಲ್ಲ. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಯಾ ಪೈಸೆಯಷ್ಟೂ ಕಳಕಳಿ ಕಾಳಜಿ ಇಲ್ಲ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಕತ್ತಲೆ ಭಾಗ್ಯ: ರಾಜ್ಯ ಸರ್ಕಾರವು ಗ್ಯಾರೆಂಟಿಗಳ ಜಾರಿಗೆಗೆ ತಿಕ್ಕಾಟ ನಡೆಸುತ್ತಿದೆ. ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದವರು ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆದಿದ್ದಾರೆ. ರಾಜ್ಯದ ಎಲ್ಲೆಡೆ ಅಘೋಷಿತ ಅನಿಯಮಿತ ಲೋಡ್‌ಷೆಡ್ಡಿಂಗ್ ಜಾರಿಯಲ್ಲಿದ್ದು, ಜನತೆ ತತ್ತರಿಸಿದ್ದಾರೆ. ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು, ಹಳ್ಳಿ ಪಟ್ಟಣ, ನಗರಗಳಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಕಡಿತಗೊಳಿಸಿ ಕತ್ತಲೆ ಭಾಗ್ಯವನ್ನು ಸರ್ಕಾರವು ಕರುಣಿಸಿದೆ. ರೈತರ ಜಮೀನುಗಳಲ್ಲಿ ಇರುವ ತೆರೆದ ಬಾವಿಯಿಂದ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ನಿತ್ಯ ಹಗಲು ಹೊತ್ತಿನಲ್ಲಿ 7 ಗಂಟೆಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಆದುದರಿಂದ ಲೋಡ್‌ಶೆಡ್ಡಿಂಗ್ ರದ್ದು ಪಡಿಸಿ ಹಗಲಿನಲ್ಲಿ ನಿರಂತರ 7 ತಾಸುಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಹಿರಿಯ ಧುರೀಣ ಡಾ.ಎಸ್.ಜೆ.ವೆಂಕಟ ಮಹಿಪಾಲ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಗೌಡ, ಜಿಲ್ಲಾಧ್ಯಕ್ಷ ಪ್ರಕಾಶ್‌ಗೌಡ, ಸತ್ಯನಾರಾಯಣ, ಹೊನ್ನೂರ್‌ಸ್ವಾಮಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ರಾಜೀವ್ ತೊಗರಿ ಮತ್ತಿತರರು ಉಪಸ್ಥಿತರಿದ್ದರು.