ಬೆಂಗಳೂರು: ಬಿಜೆಪಿ- ಜೆಡಿಎಸ್ ನಡುವೆ ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಸಹ ಎಲ್ಲವೂ ಸುಖಾಂತ್ಯ ಆಗಲಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜೆಡಿಎಸ್‍ನವರಿಗೂ ಸಮಾಧಾನ ಆಗುವ ರೀತಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಸಮರ್ಪಕ ತೀರ್ಮಾನ ಮಾಡುವ ವಿಶ್ವಾಸ ಇದೆ; ಚರ್ಚೆಯಿಂದ ವಿಷಯ ಬಗೆಹರಿಯಲಿದೆ ಎಂದು ತಿಳಿಸಿದರು.
ನಮ್ಮ ರಾಷ್ಟ್ರೀಯ ನಾಯಕರ ಜೊತೆ ನಿನ್ನೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದೇನೆ. ಬಳಿಕ ಮಾಜಿ ಪ್ರಧಾನಿ ದೇವೇಗೌಡಜೀ ಅವರ ಜೊತೆಗೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಬೆಳಿಗ್ಗೆ ಮಾಹಿತಿ ನೀಡಿದ್ದೇನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಿಷಯಗಳ ಕುರಿತು ನಮ್ಮ ಪಕ್ಷದ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರು ಚರ್ಚೆ ಮಾಡಿದ್ದಾರೆ; ಅಲ್ಲದೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಕೂಡ ಸುಖಾಂತ್ಯ ಕಾಣಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಕಳೆದ ಒಂದು ವಾರದ ಘಟನೆಗಳನ್ನು ಅವಲೋಕನ ಮಾಡಿದರೆ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರ ನಾಯಕರಿಂದ ಬಿಜೆಪಿ ಮುಖಂಡರ ಬಗ್ಗೆ ಹೆಚ್ಚು ವಿಶ್ವಾಸ ಬಂದಿದೆ. ಎಂ.ಬಿ.ಪಾಟೀಲ್ ಮತ್ತು ಇತರರ ಹೇಳಿಕೆ ಗಮನಿಸಿದರೆ, ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದರು. ಸದಾನಂದಗೌಡರು ಕೂಡ ಬಿಜೆಪಿಯಲ್ಲೇ ಇರುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು. ಈಶ್ವರಪ್ಪ ಅವರು ಹಿರಿಯ ನಾಯಕರು. ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ. ಹಾಗಾಗಿ ಈ ರೀತಿ ಚರ್ಚೆಗಳು ನಡೆಯುತ್ತಿವೆ. ಅವರಿಗೆ ಸತ್ಯ ಅರ್ಥ ಆದಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ನನಗೆ ಈಗಲೂ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ದಿನೇದಿನೇ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಎತ್ತರಕ್ಕೆ ಹೋಗುತ್ತಿರುವುದು ಚುನಾವಣಾ ರಣಭೂಮಿಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗದ ಪ್ರವಾಸ, ಸಭೆ ಯಶಸ್ವಿಯಾಗಿದೆ. ಕೇವಲ ಒಂದು ವಾರದಲ್ಲಿ ಇಷ್ಟು ದೊಡ್ಡ ಸಮಾವೇಶ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಶಿವಮೊಗ್ಗ, ಗುಲ್ಬರ್ಗ ಕಾರ್ಯಕ್ರಮಗಳÀ ಕುರಿತು ಸ್ವತಃ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.