ಬಳ್ಳಾರಿ: ತಾಲ್ಲೂಕಿನ ಸಿಂಧುವಾಳ್ ಕ್ರಾಸ್ ಬಳಿ ಬೈಕ್ ಅಪಘಾತ ಸಂಭವಿಸಿದ್ದು, ಮಲ್ಲಿಕಾರ್ಜುನ ರೆಡ್ಡಿ (48) ಎಂಬ ವ್ಯಕ್ತಿ ಮೃತ ಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಇನ್ನೂ ಅಪಘಾತದಲ್ಲಿ ಶಿವಶಂಕರಗೌಡ (45) ಗಂಭೀರ ಗಾಯಗೊಂಡಿದ್ದು, ನಗರದ ಸ್ಯಾನಿಟೋರಿಯಂನಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಜಾಲಿಹಾಳ್ ಗ್ರಾಮದವರು ಎಂದು ತಿಳಿದು ಬಂದಿದೆ.
ಘಟನೆ ತಿಳಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ
ಗಾಯಾಳುವಿನ ಯೋಗ ಕ್ಷೇಮ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಇನ್ನೂ ಮೃತ ಮಲ್ಲಿಕಾರ್ಜುನ ರೆಡ್ಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವರು ಈ ದುರಂತ ತುಂಬಾ ನೋವುಂಟು ಮಾಡಿದೆ. ಘಟನೆಯ ಸುದ್ದಿ ತಿಳಿದು ದಿಗ್ಭ್ರಾಂತನಾಗಿದ್ದೇನೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ವೆಂಕಟೇಶ್ ಪ್ರಸಾದ್ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.