ಬೆಂಗಳೂರು: ಬೆಸ್ಕಾಂನ ರಿಯಾಯಿತಿ ವಿದ್ಯುತ್ ಸೌಲಭ್ಯ ಗಳ ಕುರಿತು ಅರಿವು ಮೂಡಿಸಲು ಹಾಗು ನಿಯಮಿತ ವಿದ್ಯುತ್ ಪೂರೈಸಲು ಚಂದಾಪುರ ಕೈಗಾರಿಕೋದ್ಯಮಿಗಳ ಜತೆ ಬೆಸ್ಕಾಂ ಎಂಡಿ ಪಿ. ರಾಜೇಂದ್ರ ಚೋಳನ್ , ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಡಿ. ನಾಗಾರ್ಜುನ ಮತ್ತು ಹಿರಿಯ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿದರು. ಭಾರೀ ವಿದ್ಯುತ್ ಸಂಪರ್ಕಗಳನ್ನು ಪಡೆದಿರುವ ಕೈಗಾರಿಕಾ ಘಟಕಗಳಿಗೆ ಗುಣಮಟ್ಟದ ವಿದ್ಯುತ್ ಸೇವೆ ನೀಡುವುದು ಹಾಗು ಬೆಸ್ಕಾಂನ ರಿಯಾಯಿತಿ ಸೌಲಭ್ಯಗಳ ಕುರಿತು ಕೈಗಾರಿಕೋದ್ಯಮಿಗಳ ಜತೆ ಬೆಸ್ಕಾಂ ಎಂಡಿ ವಿಚಾರ ವಿನಿಮಯ ನಡೆಸಿದರು. ಬೆಸ್ಕಾಂ ನೀಡುತ್ತಿರುವ ರಿಯಾಯಿತಿ ದರದ ವಿದ್ಯುತ್ ಸೇವೆ, ವಿಶೇಷ ಸಬ್ಸಿಡಿ ಯೋಜನೆ ಹಾಗು ಹಸಿರು ವಿದ್ಯುತ್ ಯೋಜನೆಯ ಕುರಿತು ಕೈಗಾರಿಕೋದ್ಯಮಿಗಳಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ರಿಯಾಯಿತಿ ವಿದ್ಯುತ್ ಸೇವೆಗಳ ಪ್ರಯೋಜನ ಪಡೆಯಲು ಬೆಸ್ಕಾಂ ಎಂಡಿ ಕೈಗಾರಿಕೆ ವಲಯದ ಪ್ರತಿನಿಧಿಗಳಿಗೆ ಮನವಿ ಮಾಡಿದರು. ರಿಯಾಯಿತಿ ದರದ ವಿದ್ಯುತ್ ಸೇವೆಗಳ ಕುರಿತು ಇನ್ನಷ್ಟು ಜಾಗೃತಿ ಮೂಡಿಸಲು ಮಾರ್ಕೇಟಿಂಗ್ ಟೀಮ್ ರಚಿಸಲು ಬೆಸ್ಕಾಂ ನಿರ್ದರಿಸಿದ್ದು, ಮಾರ್ಕೇಟಿಂಗ್ ಟೀಮ್ ಭಾರೀ ವಿದ್ಯುತ್ ಸಂಪರ್ಕ ಪಡೆದಿರುವ ಕೈಗಾರಿಕೋದ್ಯಮಿಗಳನ್ನು ಭೇಟಿಮಾಡಿ ವಿದ್ಯುತ್ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದೆ. ಜತೆಗೆ ಕೈಗಾರಿಕೋದ್ಯಮಿಗಳಿಗೆ ರಿಯಾಯಿತಿ ವಿದ್ಯುತ್ ಸೇವೆ ಪಡೆಯಲು ನೋಂದಣಿ ಮಾಡಿಸಲು ಸಹಾಯ ಮಾಡಲಿದೆ. ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳನ್ನು 5ರಿಂದ 10 ವರ್ಷ ಗಳ ಅವಧಿಗೆ ವಿಸ್ತರಿಸಬೇಕೆಂಬ ಕೈಗಾರಿಕೋದ್ಯಮಿಗಳ ಮನವಿಯನ್ನು ಪರಿಗಣಿಸುವುದಾಗಿ ರಾಜೇಂದ್ರ ಚೋಳನ್ ಭರವಸೆ ನೀಡಿದರು. ಈ ಮನವಿಯನ್ನು ಕೆಇಆರ್ಸಿ ಗೆ ವಿದ್ಯುತ್ ಶುಲ್ಕ ಸಂಬಂಧ ಸಲ್ಲಿಸುವ ಪ್ರಸ್ತಾವನೆಯಲ್ಲಿ ಸೇರಿಸಲಾಗುವುದು ಎಂದು ಬೆಸ್ಕಾಂನ ಎಂಡಿ ಭರವಸೆ ನೀಡಿದ್ದಾರೆ. ರಿಯಾಯಿತಿ ದರದ ವಿದ್ಯುತ್ ಯೋಜನೆ ಅಡಿಯಲ್ಲಿ ಹಸಿರು ವಿದ್ಯುತ್ ಪ್ರಮಾಣ ಪತ್ರ ವನ್ನು ನೀಡಲು ಕೈಗೋರಿಕೋದ್ಯಮಿಗಳು ಬೆಸ್ಕಾಂಗೆ ಮನವಿ ಮಾಡಿದರು. ಈ ಸಂಬಂಧ ಪ್ರಸ್ತಾವನೆಯನ್ನು ಕೆಇಆರ್ಸಿ ಗೆ ರವಾನಿಸಲಾಗಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಬೆಸ್ಕಾಂ ಎಂಡಿ ಭರವಸೆ ನೀಡಿದರು.

ವಿದ್ಯುತ್ ಪೂರೈಕೆ ಬೇಡಿಕೆಗಳ ಕುರಿತು ಕೈಗಾರಿಕೆ ಗ್ರಾಹಕರ ಜತೆ ಚರ್ಚೆ ನಡೆಸುವಂತೆ ಚಂದಾಪುರ ಕಾರ್ಯನಿರ್ವಾಹಕ ಇಂಜನಿಯರ್ ಗೆ ಬೆಸ್ಕಾಂ ಎಂಡಿ ಸೂಚಿಸಿದರು.
ಅಲ್ಲದೆ ಕೈಗಾರಿಕೆ ಸಂಘದ ಜತೆ ಕಾಲಕಾಲಕ್ಕೆ ಸಭೆ ನಡೆಸುವಂತೆ ಕಾರ್ಯನಿರ್ವಾಹಕ ಇಂಜನಿಯರ್ ಗೆ ರಾಜೇಂದ್ರ ಚೋಳನ್ ಆದೇಶಿಸಿದರು. ಅಲ್ಲದೆ ವೊಲ್ಟೇಜ್ ಸಮಸ್ಯೆ ಕುರಿತು ಕೈಗಾರಿಕೆ ಗ್ರಾಹಕರು ಮತ್ತು ಕೆಪಿಟಿಸಿಎಲ್ ಜತೆ ಸಮನ್ವಯ ಸಾಧಿಸಲಾಗುವುದು ಎಂದು ಕಾರ್ಯನಿರ್ವಾಹಕ ಇಂಜನಿಯರ್ ಭರವಸೆ ನೀಡಿದರು.
ಜತೆಗೆ ಹೊಸ ಸರ್ವಿಸ್ ಸ್ಟೇಷನ್ ಅಳವಡಿಕೆ ಮತ್ತು ನಿಯಮಿತ ವಿದ್ಯುತ್ ಪೂರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದೆ. ಎಂಟಿಆರ್ ಮತ್ತು ಸನ್ಜಿನ್ ಕಂಪನಿಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಸುವ ಭರವಸೆಯನ್ನು ಚಂದಾಪುರ ವಿಭಾಗ ನೀಡಿದೆ.