ಬಳ್ಳಾರಿ: ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ರೂಪನಗುಡಿ,ಎತ್ತಿನಬೂದಿಹಾಳ(ಕಮ್ಮರಚೇಡು),ಮಿಂಚೇರಿ,ಬೆಳಗಲ್ ಕೆರೆ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ಕೆರೆಗಳಿಗೆ ಸೋಮವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಚಿವ ಶ್ರೀರಾಮುಲು ಅವರು ನೀರು ಸೋರುವಿಕೆಗೆ ತಡೆಗೆ ಅಗತ್ಯ ಕ್ರಮ ಮತ್ತು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆರೆಗಳ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ನಿಗದಿಪಡಿಸಿದ ಅವಧಿಯೊಳಗೆ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದರು.

1 ಸಾವಿರ ಸಣ್ಣ-ಪುಟ್ಟ ಕೆರೆಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದರು.
ಮೊದಲಿಗೆ ರೂಪನಗುಡಿ ಕೆರೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಅವರು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ 3.81ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.
ಕೆರೆಯ ನೀರು ಸೋರುವಿಕೆಯನ್ನು ಸಂಪೂರ್ಣ ಬಂದ್ ಮಾಡಿ;ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವುದು ಸೇರಿದಂತೆ ಏಪ್ರಿಲ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜೂನ್-ಜುಲೈ ತಿಂಗಳಲ್ಲಿ ಕಾಲುವೆಗೆ ನೀರು ಬಿಡುವ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯನಿರ್ವಾಹಕ ಎಂಜನಿಯರ್ ಸುರೇಂದ್ರನಾಥ ಅವರಿಗೆ ಸೂಚನೆ ನೀಡಿದರು. ಈ ಕೆರೆಯಿಂದ ಚೆಳಗುರ್ಕಿ,ಯಾಳ್ಪಿ ಸೇರಿದಂತೆ 7 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.
ನಂತರ ಎತ್ತಿನಬೂದಿಹಾಳ್(ಕಮ್ಮರಚೇಡು) ಕೆರೆಗೆ ಭೇಟಿ ನೀಡಿದ ಸಚಿವರು ಜಲಜೀವನ ಮಿಶನ್ ಅಡಿ 4.80 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎತ್ತಿನಬೂದಿಹಾಳ ಕೆರೆಯಲ್ಲಿ ಲೀಕೆಜ್ ಸಮಸ್ಯೆ ಹಾಗೂ ಪೈಪ್‍ಲೈನ್ ಮತ್ತು ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಬೇಕು. 15 ದಿನದೊಳಗೆ ಅಂದಾಜುಪಟ್ಟಿ ಸಿದ್ದಪಡಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.
ಮಿಂಚೇರಿ ಹಾಗೂ ಬೊಬ್ಬುಕುಂಟಾ ಕೆರೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೊಬ್ಬುಕುಂಟಾ ಕೆರೆಯಿಂದ ವಿಜಯನಗರ ಕ್ಯಾಂಪ್‍ಗೆ ನೀರು ಬರುತ್ತಿಲ್ಲ ಎಂದು ಜನರು ಪ್ರಸ್ತಾಪಿಸಿದರು; ಆರ್‍ಡಬ್ಲ್ಯೂಎಸ್ ಇಇ ಸುರೇಂದ್ರನಾಥ ಅವರು ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಮೂರ್ನಾಲ್ಕು ತಿಂಗಳಲ್ಲಿ ಕ್ಯಾಂಪ್‍ಗೆ ನೀರು ಒದಗಿಸಲಾಗುವುದು ಎಂದು ಸಚಿವರಿಗೆ ತಿಳಿಸಿದರು.
ನೀರಿನ ಲೀಕೇಜ್ ಸಮಸ್ಯೆಯಿಂದ ಬೆಳಗಲ್ ಕೆರೆಗೆ ನೀರು ಬಿಡಲಾಗಿಲ್ಲ;ಜಿಲ್ಲಾ ಖನಿಜ ನಿಧಿ ಅಡಿ 4 ಕೋಟಿ ರೂ. ಅನುದಾನದಡಿ ಬೆಳಗಲ್ ಕೆರೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಆರ್‍ಡಬ್ಲ್ಯೂಎಸ್ ಇಇ ಸುರೇಂದ್ರನಾಥ ಅವರು ಸಚಿವ ಶ್ರೀರಾಮುಲು ಅವರ ಗಮನಕ್ಕೆ ತಂದರು. ಸಚಿವರು ಕೂಡಲೇ ಅನುಮೋದನೆ ಪಡೆದುಕೊಂಡು ಟೆಂಡರ್ ಕರೆದು ನಿಯಮಾನುಸಾರ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.
ನಂತರ ಸಚಿವರು ಕೊಳಗಲ್ಲು,ಯರ್ರಂಗಳಿ,ಬಾದನಹಟ್ಟಿ, ಎಮ್ಮಿಗನೂರು, ನೆಲ್ಲೂರು,ಸೋಮಲಾಪುರ,ಎಚ್.ವೀರಾಪುರ,ಮುಸ್ಟಗಟ್ಟೆ ಗ್ರಾಮದ ಕೆರೆಗಳನ್ನು ವೀಕ್ಷಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ,ತಾಪಂ ಇಒ ಶ್ರೀಧರ್ ಬಾರೀಕೇರ್, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ದುರ್ಗಾಪ್ರಸಾದ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಎಂಜನಿಯರ್‍ಗಳು ಹಾಗೂ ಗ್ರಾಮಸ್ಥರು ಇದ್ದರು.