2.05 ಕೋಟಿ ರೂ.ವೆಚ್ಚದಲ್ಲಿ ನೂತನ ಪಾಲಿಕ್ಲಿನಿಕ್ ಕಟ್ಟಡ ಉದ್ಘಾಟನೆ

ಜಿಲ್ಲೆಗೊಂದು ಗೋಶಾಲೆ,ಪಾಲಿಕ್ಲಿನಿಕ್ ನಮ್ಮ ಸರಕಾರದ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ,ಫೆ.04(ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿ ಆವರಣದಲ್ಲಿ 2.05ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ನೂತನ ಪಾಲಿಕ್ಲಿನಿಕ್ ಕಟ್ಟಡವನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶುಕ್ರವಾರ ಉದ್ಘಾಟಿಸಿದರುಈ ಸುಸಜ್ಜಿತ ನೂತನ ಪಾಲಿಕ್ಲಿನಿಕ್ ಕಟ್ಟಡದಲ್ಲಿ ಪಶು-ಪಕ್ಷಿಗಳ ಸಣ್ಣ ಚಿಕಿತ್ಸೆಯಿಂದ ಹಿಡಿದು ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆವರೆಗಿನ ಎಲ್ಲ ಚಿಕಿತ್ಸೆಗಳನ್ನು ಇನ್ಮುಂದೆ ಇದರಡಿಯೇ ಮಾಡಲಾಗುತ್ತಿದೆ.


ಕಟ್ಟಡ ಉದ್ಘಾಟಿಸಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಪಶುಕಲ್ಯಾಣ,ಪಶುಪಾಲನೆ ಮತ್ತು ಪಶುರಕ್ಷಣೆಯೇ ನಮ್ಮ ಸರಕಾರದ ಬದ್ಧತೆ. ಗೋವುಗಳ ರಕ್ಷಣೆ ಮಾಡುವ ಕೆಲಸಕ್ಕೆ ನಮ್ಮ ಸರಕಾರ ಆಧ್ಯತೆ ನೀಡಿದೆ. ಪಶುಗಳ ಚಿಕಿತ್ಸೆಗಾಗಿ ಪಶುಸಂಜೀವಿ, ಹೈಟೆಕ್ ಪಶು ಅಂಬ್ಯುಲೆನ್ಸ್,ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ, ಜಿಲ್ಲೆಗೊಂದರಂತೆ ಪಾಲಿಕ್ಲಿನಿಕ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಜಿಲ್ಲೆಗೊಂದು ಗೋಶಾಲೆ,ಜಿಲ್ಲೆಗೊಂದು ಪಾಲಿಕ್ಲಿನಿಕ್ ನಮ್ಮ ಸರಕಾರದ ಆದ್ಯತೆಯಾಗಿದ್ದು,ಪಶುವೈದ್ಯರ ಕೊರತೆ ಅರಿತು ನಮ್ಮ ಸರಕಾರ ಇತ್ತೀಚೆಗೆ 400 ಪಶುವೈದ್ಯರ ನೇಮಕಕ್ಕೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ನೀಡಿದೆ ಎಂದರು.


ಇತ್ತೀಚೆಗೆ ಪಶುಸಂಗೋಪನಾ ಸಚಿವರಾದ ಪ್ರಭುಚವ್ಹಾಣ ಅವರು 21 ಗೋವುಗಳನ್ನು ದತ್ತುಪಡೆದುಕೊಂಡಿದ್ದಾರೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ತ 11 ಗೋಶಾಲೆಗಳನ್ನು ದತ್ತುಪಡೆದುಕೊಂಡಿದ್ದಾರೆ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಎಲ್ಲ ಶಾಸಕರು,ಸಚಿವರು ಸಹ ಗೊವುಗಳನ್ನು ದತ್ತು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಕಟ್ಟಡಕ್ಕೆ ಎಲ್ಲ ಮಶೀನ್‍ಗಳು ಬಂದ ನಂತರ ಪಶು-ಪಕ್ಷಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಜತೆಗೂಡಿ ಬಂದು ಪರಿಶೀಲಿಸುವೆ ಎಂದರು.
ಬಳ್ಳಾರಿ ಬದಲಾವಣೆಗೆ ಸಂಕಲ್ಪ: ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಬದಲಾವಣೆಯೇ ನನ್ನ ಆದ್ಯತೆಯಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಹೇಳಿದರು.
16 ವರ್ಷಗಳ ನಂತರ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿದ್ದೇನೆ;ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಉದ್ಘಾಟನಾ ನಂತರ ಸುದ್ದಿಗಾರರಿಗೆ ತಿಳಿಸಿದರು.


ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಅವರು ಮತ್ತು ನಾನು ರಾಜಕೀಯ ಹೊರತುಪಡಿಸಿದ ಆತ್ಮೀಯ ಸ್ನೇಹಿತರು; ದೆಹಲಿ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟಪಡಿಸಿದರು.
ನವದೆಹಲಿಯಲಿ ಸಾರಿಗೆ ಸಚಿವ ನಿತೀನ್ ಗಡ್ಕರಿ ಭೇಟಿ ವಿವಿಧ ವಿಷಯಗಳ ಕುರಿತು ಚರ್ಚೆ: ಗುರುವಾರ ನವದೆಹಲಿಯಲ್ಲಿ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ಸಾರಿಗೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಸುದ್ದಿಗಾರರಿಗೆ ತಿಳಿಸಿದರು.
ಸೇತುಭಾರತ್ ಯೋಜನೆ ಅಡಿ ಬಳ್ಳಾರಿಯ ಸುಧಾಕ್ರಾಸ್ ಬಳಿ ಬರುವ(ಎಲ್‍ಸಿ ನಂ-110) ರೈಲ್ವೆ ಮೇಲ್ಸುತುವೆ ನಿರ್ಮಾಣ, ಎಸ್‍ಎಚ್ 132ರ ಅಡಿ ಬರುವ ಬಳ್ಳಾರಿಯಿಂದ ಮೋಕಾ ಮತ್ತು ಮೋಕಾದಿಂದ ಮಂತ್ರಾಲಯವರೆಗಿನ ನಾಲ್ಕುಪಥದ ರಸ್ತೆ ಯೋಜನೆ, ಗ್ಯಾಮನ್ ಸಂಸ್ಥೆಯ ನಿಧಾನಗತಿಯಿಂದಾಗಿ ಎನ್‍ಎಚ್ 63 ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದ್ದು, ಆ ಸಂಸ್ಥೆಗೆ ನೀಡಿದ ಗುತ್ತಿಗೆ ರದ್ದುಪಡಿಸಿ ಬೇರೆ ಸಂಸ್ಥೆಗೆ ಕಾಮಗಾರಿ ವಹಿಸಿ ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲು ಕ್ರಮವಹಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.


ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬರುವ ಭಾರತಮಾಲಾ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅವರಲ್ಲಿ ಮನವಿ ಮಾಡಲಾಗಿದ್ದು, ನಮ್ಮೆಲ್ಲ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರನಾಯಕ್,ಪಾಲಿಕ್ಲಿನಿಕ್ ಉಪನಿರ್ದೇಶಕ ದತ್ತಾತ್ರೇಯ, ಪಶುತಜ್ಞವೈದ್ಯ ಡಾ.ಶಶಿಧರ್ ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top