ಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ ೪೬ ಜನ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರಸಾದದಲ್ಲಿ ಕಲುಷಿತ ಪದರ‍್ಥ ಸೇರಿದ್ದರಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.
ಗ್ರಾಮದಲ್ಲಿ ನಡೆದಿದ್ದ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಅನ್ನ ಪ್ರಸಾದ ಮತ್ತು ಮಾವಿನ ಹಣ್ಣಿನ ಸೀಕರಣೆಯನ್ನು ಗ್ರಾಮಸ್ಥರು ಸೇವಿಸಿದ್ದರು. ಆದರೆ, ಪ್ರಸಾದ ಸೇವಿಸಿದ ಜನರಲ್ಲಿ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಶಾಸಕ ವಿಶ್ವಾಸ್ ವೈದ್ಯ ಆಸ್ಪತ್ರೆಗೆ ದೌಡಾಯಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಸವದತ್ತಿ ಸರ‍್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಸದ್ಯ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ತೀವ್ರ ಅಸ್ವಸ್ಥಗೊಂಡ ಐವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಹಿತಕರ ಘಟನೆ ಆಗದಂತೆ ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆಯನ್ನು ತಾಲೂಕು ವೈದ್ಯರು ಮಾಡುತ್ತಿದ್ದಾರೆ.
ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಡಿಎಚ್ಓ ಮಾಹಿತಿ ನೀಡಿದ್ದಾರೆ. ಪ್ರಸಾದ ಸೇವಿಸಿದವರಲ್ಲಿ ವಾಂತಿಭೇದಿ ಕಂಡುಬಂದ ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್ಓ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.