ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು

ಮಾಧ್ಯಮ ಕಾರ್ಯಾಗಾರದಲ್ಲಿ ಖ್ಯಾತ ಟಿವಿ ನಿರೂಪಕ ಗೌರೀಶ್ ಅಕ್ಕಿ ಸಲಹೆ

ಬಳ್ಳಾರಿ: ಇಂದು ಸಮಾಜದಲ್ಲಿ ತಾಂತ್ರಿಕತೆ ಅಭಿವೃದ್ಧಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತರು ಮಾಡುವಂಥಹ ಕೆಲಸಗಳನ್ನು ಕಂಪ್ಯೂಟರ್ ಒಂದೇ ಮಾಡುವ ಕಾಲ ಬರಲಿದೆ. ಹಾಗಾಗಿ ಪತ್ರಕರ್ತರು ನೂತನ ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಖ್ಯಾತ ಟಿವಿ ನಿರೂಪಕ, ಆಲ್ಮಾ ಮೀಡಿಯಾ ಸ್ಕೂಲ್ ಸಂಸ್ಥಾಪಕ ನಿರ್ದೇಶಕ ಗೌರೀಶ್ ಅಕ್ಕಿ ಹೇಳಿದರು.

 

          ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುದ್ದಿ ತಲುಪಿಸುವ ಕೆಲಸವನ್ನು ನಾವು ಯಾವ ಮಾಧ್ಯಮದ ಮೂಲಕ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಶೇ.೬೦ಕ್ಕೂ ಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಡಿಜಿಟಲ್ ಮಾಧ್ಯಮ ದಿನೇ ದಿನೇ ಬೆಳೆಯುತ್ತಿದೆ. ಮುಂದೊಂದು ದಿನ ಡಿಜಿಟಲ್ ಮಾಧ್ಯಮವನ್ನೂ ಹಿಂದಿಕ್ಕುವ ಹೊಸ ತಂತ್ರಜ್ಞಾನ ಕೂಡ ಬರಬಹುದು ಎಂದರು.

ಮುದ್ರಣ ಹಾಗೂ ಟಿವಿ ಮಾಧ್ಯಮಕ್ಕೆ ಒಂದು ಇತಿ ಮಿತಿ ಇದೆ. ಆದರೆ ಡಿಜಿಟಲ್ ಮಾಧ್ಯಮಕ್ಕೆ ಯಾವುದೇ ಮಿತಿ ಇಲ್ಲ. ಈ ಹಿಂದೆ ಪ್ರತಿಯೊಬ್ಬರು ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಓದುತ್ತಿದ್ದರು. ಆದರೆ ಇಂದು ಮೊಬೈಲ್‌ನಲ್ಲಿ ಪಿಡಿಎಫ್‌ಗಳ ಮೂಲಕ ಓದುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪತ್ರಿಕೆಗಳ ಮುದ್ರಣ ನಿಂತುಹೋದರೂ ಆಶ್ಚರ್ಯ ಪಡಬೇಕಿಲ್ಲ. ಈಗಿನ ಮಕ್ಕಳು ಹುಟ್ಟುತ್ತಲೇ ಮೊಬೈಲ್‌ನ ಬಳಕೆ ಮಾಡುವಂತಾಗಿದೆ. ಹೀಗಿದ್ದಾಗ ಅವರಿಗೆ ಪತ್ರಿಕೆಗಳ ಬಗ್ಗೆ, ಮಾಧ್ಯಮಗಳ ಬಗ್ಗೆ ಪರಿಚಯವೇ ಇಲ್ಲವಾಗುತ್ತಿದೆ ಎಂದರು.

ಡಿಜಿಟಲ್ ಮಾಧ್ಯಮದಲ್ಲಿ ಓದಬಹುದು, ಕೇಳಬಹುದು ಮತ್ತು ನೋಡಬಹುದಾಗಿದೆ. ಮುದ್ರಣ ಹಾಗೂ ವಿಶ್ಯೂವಲ್ ಮಿಡಿಯಾಗಳ ಸಂಗಮವೇ ಡಿಜಿಟಲ್ ಮಾಧ್ಯಮವಾಗಿದ್ದು, ಬರಲಿರುವ ಎಲ್ಲ ಬಗೆಯ ತಂತ್ರಜ್ಞಾನ ಮೀರಿ ಪತ್ರಕರ್ತರು ಬೆಳೆಯಬೇಕಾಗಿದೆ. ಡಿಜಿಟಲ್ ಮಾಧ್ಯಮ ಕೇವಲ ಪತ್ರಕರ್ತರಿಗಷ್ಟೇ ಅಲ್ಲ. ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ಎಲ್ಲ ವರ್ಗದವರಿಗೂ ಸವಾಲಾಗಿ ಪರಿಣಮಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.

 

ಸೃಜನಶೀಲವಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಅಸ್ತಿತ್ವ ಉಳಿಯಲು ಸಾಧ್ಯ, ನಾವು ತಾಂತ್ರಿಕವಾಗಿ ರೂಪಾಂತರ ಆಗದ ಹೊರತು ನಮ್ಮ ಅಸ್ತಿತ್ವ ಉಳಿಯದು. ಇಂದು ಆರ್ಟಿಫಿಶಿಯಲ್ ಇಂಟಲೆಜೆನ್ಸ್ (ಎಐ) ಬೆಳವಣಿಗೆ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಹೊಸ ಸವಾಲುಗಳನ್ನು ಸೃಷ್ಟಿಸಿದೆ. ಪರಿಣಿತಿ ಅಲ್ಲದ ಯಾವುದೇ ಕೆಲಸವನ್ನು ಸಹ ಯಂತ್ರದ ಮೂಲಕ ಮಾಡಬಹುದಾಗಿದೆ. ಇಡೀ ಮಾನವ ಕುಲಕ್ಕೆ, ಕಸುಬುಗಾರಿಕೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ದೊಡ್ಡ ಬೆದರಿಕೆ ಒಡ್ಡಿದ ಕಾರಣ ಅಮೆರಿಕಾ ಸೇರಿದಂತೆ ಹಲವು ದೇಶಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಬ್ರೇಕ್ ಹಾಕಿವೆ ಎಂದು ಹೇಳಿದರು.

ಬೆಂಗಳೂರಿನ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಮಾತನಾಡಿ, ಜನಪರವಾಗಿ ಸುದ್ದಿಗಳನ್ನು ಬರೆದಾಗ ಹಲವರಿಂದ ಬೆದರಿಕೆ ಕರೆಗಳು ಬರುತ್ತವೆ. ಕೆಲವರಿಂದ ವಿರೋಧವೂ ವ್ಯಕ್ತವಾಗುತ್ತದೆ. ಅಂತಹವುಗಳನ್ನೆಲ್ಲ ಮಟ್ಟಿನಿಂತು ಕಾರ್ಯನಿರ್ವಹಿಸಬೇಕು. ಪತ್ರಕರ್ತರಾಗಿ ಠೀಕೆ, ವಿಮರ್ಶೆ ಮಾಡಬೇಕೇ ಹೊರತು ವೈಯಕ್ತಿಕವಾಗಿ, ಹಣಕ್ಕಾಗಿ ಸುದ್ದಿಗಳನ್ನು ಮಾಡಬಾರದು. ಅಷ್ಟೇ ಅಲ್ಲದೆ, ನಾವು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಮೂಲ ಶಬ್ಧ ಬಂಡಾರವನ್ನು ವೃದ್ಧಿ ಮಾಡಿಕೊಳ್ಳಬೇಕು. ಪತ್ರಕರ್ತರಾದವರು ಅಧ್ಯಯನಶೀಲರಾಗಬೇಕೆ ಹೊರತು ತಮಗೆ ಎಲ್ಲವೂ ಗೊತ್ತು ಎಂಬಂತೆ ವರ್ತಿಸಬಾರದು ಎಂದು ತಿಳಿಸಿದರು.

 

ಸಂಘಟನೆ ವಿಚಾರವಾಗಿ ಮಾತನಾಡಿದ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಾವು ವೈಯಕ್ತಿಕವಾಗಿ ಎಷ್ಟೇ ಶಕ್ತಿವಂತರಿದ್ದರೂ ಗುಂಪಾಗಿ ಕೆಲಸ ಮಾಡಿದಾಗ ಆ ಶಕ್ತಿ ಹೆಚ್ಚಳವಾಗುತ್ತದೆ.  ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಹಣ ಮತ್ತು ಹೆಸರು ತನ್ನಷ್ಟಕ್ಕೆ ತಾನೇ ಹುಡುಕಿಕೊಂಡು ಬರುತ್ತದೆ ಎಂದರಲ್ಲದೆ, ಸಂಘವನ್ನು ಯಾರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಪ್ರಾಮಾಣಿಕವಾಗಿ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವವರು ಸಂಘದ ಸದಸ್ಯರಾಗಬೇಕು, ಪತ್ರಕರ್ತರಲ್ಲದವರು ಸದಸ್ಯತ್ವ ಪಡೆಯಬಾರದು, ಸಂಘಟನೆಯ ಕಾರ್ಯ ವೈಖರಿ ಮೆಚ್ಚಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರು ಕಡ್ಡಾಯವಾಗಿ ಪತ್ರಕರ್ತರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲೇಬೇಕು ಎಂದು ತಿಳಿಸಿದರು.

ರಾಜ್ಯಾಧ್ಯಕ್ಷರ ಮನವಿ ಮೇರೆಗೆ ಕಾರ್ಯಾಗಾರದ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಖನಿಜ ನಿಧಿ ವಿಶೇಷಾಧಿಕಾರಿ ಮಂಜುನಾಥ್ ಮಾತನಾಡಿ, ಪತ್ರಕರ್ತರಿಗೆ ಭಾಷಣ ಮಾಡುವುದೆಂದರೆ ಹುಲಿಗಳ ಹಿಂಡಿನಲ್ಲಿ ಕುರಿ ಬಿಟ್ಟ ಹಾಗೆ ಎಂದು ತಮಾಷೆ ಮಾಡಿದ ಅವರು, ಇಂದು ಪತ್ರಿಕೋದ್ಯಮ ಬದಲಾವಣೆಗೊಂಡಿದೆ. ಪತ್ರಕರ್ತರು ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಪರಿವರ್ತನೆ ತರಲು ಮುಂದಾಗಲಿ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಒಂದಾಗಿ ಕೆಲಸ ಮಾಡಿದರೆ ಮಾತ್ರ ಜನಮನದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ದ್ವೇಷದಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನಾವು ಮಾಡುವ ಕೆಲಸ ನಮ್ಮ ವೃತ್ತಿಗೆ ಗೌರವ ತರುವಂತಿರಬೇಕೇ ಹೊರತು ಧಕ್ಕೆ ತರುವಂತಾಗಬಾರದು ಎಂದರಲ್ಲದೆ, ಇಂದು ಸುದ್ದಿ ವಾಹಿನಿಗಳೆಂದರೆ ಅಲರ್ಜಿ ಆಗ್ತಾ ಇದೆ. ಕೇವಲ ಅರಚಾಟ, ಕಿರುಚಾಟ ಹೆಚ್ಚಾಗ್ತಿದೆ. ಬೇಡವಾದ ಪದಗಳನ್ನು ಬಳಸುತ್ತಾ, ದೊಡ್ಡ ನಿರೂಪಕರೆಂದು ಬೀಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

 

ಕಾರ್ಯಕ್ರಮದಲ್ಲಿ ಕಾನಿಪ ರಾಜ್ಯ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಸ್ವಾಗತಿಸಿದರು. ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಬಾಷ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ದನ್ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಪತ್ರಕರ್ತರು ತಮಗೆ ಎಲ್ಲ ಗೊತ್ತಿದೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ನಿಜಕ್ಕೂ ಆವರಿಗೆ ಏನೂ ಗೊತ್ತಿರುವುದಿಲ್ಲ. ಸುದ್ದಿ ಸಂಗ್ರಹಣೆ ಮಾಡಬೇಕೆಂಬ ದಾವಂತದಲ್ಲಿ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪತ್ರಕರ್ತರಿಗೆ ಆಲಿಸುವ ಮನಃಸ್ಥಿತಿ ಇರಬೇಕು.

 

ಅಜ್ಜಮಾಡ ರಮೇಶ್ ಕುಟ್ಟಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ 

Facebook
Twitter
LinkedIn
Telegram
WhatsApp
Email
Pinterest

Leave a Comment

Your email address will not be published. Required fields are marked *

Translate »
Scroll to Top