ರಾಮನಗರ ಘಟನೆ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ನೀಡಿದ ಪ್ರತಿಕ್ರಿಯೆ

ಬೆಂಗಳೂರು : ರಾಮನಗರ ಘಟನೆ ಹಿನ್ನೆಲೆಯಲ್ಲಿ ಬಿಜೆಪಿಯವರು ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ‘ಬಿಜೆಪಿಯವರು ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶಾದ್ಯಂತ ಮಾಡಲಿ. ಅವರ ಸಚಿವರು ಆಡಿರುವ ನುಡಿಮುತ್ತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಆರ್. ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ. ಅವರ ಸಂಸ್ಕೃತಿಯ ದರ್ಶನ ಎಲ್ಲರಿಗೂ ಗೊತ್ತಾಗಿದೆ’ ಎಂದರು.


ಆರೋಗ್ಯ ಸಚಿವ ಸುಧಾಕರ್ ಅವರು ಕೊರೋನಾ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಲ್ಲಿಸಲು ಮನವಿ ಮಾಡುತ್ತೇನೆ ಎಂದು ನೀಡಿರುವ ಹೇಳಿಕೆಗೆ ಉತ್ತರಿಸಿದ ಅವರು ‘ಬಹಳ ಸಂತೋಷ, ಅವರು ತಮಗೆ ಸಿಕ್ಕಿರುವ ಜವಾಬ್ದಾರಿ ಬಳಸಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣವನ್ನು ವಸೂಲಿ ಮಾಡಿಕೊಂಡು ಬರಲಿ. ಜನರಿಗೆ ಸಹಾಯ ಮಾಡಲಿ ಸಾಕು. ಅವರು ಕೊರೋನಾ ತಡೆದರಾ ಇಲ್ಲವಾ ಎಂಬುದರ ಚರ್ಚೆ ಬೇಡ. ಕೊರೋನಾ ವಿಚಾರವಾಗಿ ವಿಮಾನ ನಿಲ್ದಾಣದಲ್ಲಿ ಯಾವ ರೀತಿ ಕಿರುಕುಳ ನೀಡಲಾಗುತ್ತಿದೆ ಎಂದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಸುಧಾಕರ್ ಅವರು ಮೊದಲು ಅಲ್ಲಿಗೆ ಹೋಗಿ ನೋಡಲಿ. ನಮ್ಮ ಪಾದಯಾತ್ರೆ ಅದರ ಪಾಡಿಗೆ ನಡೆಯುತ್ತದೆ’ ಎಂದರು.


ಸೋಂಕು ಹೆಚ್ಚಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆಗೆ, ‘ಬಿಜೆಪಿಯವರು ಈಗಾಗಲೇ ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಬಿಜೆಪಿಯವರು ಕೋವಿಡ್ ಸಮಯದಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಯಾಕೆ ಅವರ ವಿರುದ್ಧ ಸಮನ್ಸ್ ಜಾರಿ ಮಾಡಿ, ಪ್ರಕರಣ ದಾಖಲಿಸಿಲ್ಲ? ಸಚಿವರ ಮೇಲೆ ಪ್ರಕರಣ ಯಾಕಿಲ್ಲ? ೧೦೦ ನಾಟೌಟ್ ಪ್ರತಿಭಟನೆ ಮಾಡಿದ ನಮ್ಮೆಲ್ಲ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನೂರು ಪ್ರಕರಣ ದಾಖಲಿಸಿ, ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ. ರಾಜ್ಯದ ಜನರ ಪರವಾಗಿ, ಅವರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.
ರಾಮನಗರ ರಿಪಬ್ಲಿಕ್ ಆಗಲು ಬಿಡುವುದಿಲ್ಲ ಎಂಬ ಅಶ್ವಥ್ ನಾರಾಯಣ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದಕ್ಕೆ ಉತ್ತರ ನೀಡಲು ಜನರಿದ್ದು, ಅವರು ನೀಡುತ್ತಾರೆ’ ಎಂದರು.

Leave a Comment

Your email address will not be published. Required fields are marked *

Translate »
Scroll to Top