ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಲಾಭ ಮಾಡಿಕೊಳ್ಳುವ ರಾಜಕಾರಣಿಗಳ ಧೋರಣೆ ಬದಲಾಗಬೇಕು

ಬೆಂಗಳೂರು: -ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಲಾಭ ಮಾಡಿಕೊಳ್ಳುವ ರಾಜಕಾರಣಿಗಳ ಧೋರಣೆ ಬದಲಾಗಬೇಕು,ಇಂತವರ ಹೇಳಿಕೆಗಳನ್ನು ವೈಭವೀಕರಿಸುವ ಮಾಧ್ಯಮಗಳ ಧೋರಣೆಯೂ ಬದಲಾಗಬೇಕು,ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಮಂಡಲ ಕಲಾಪ ಅನಿರ್ದಿಷ್ಟಾವಧಿ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಒಂದು ಹೇಳಿಕೆಯ ಆಧಾರದ ಮೇಲೆ ಸದನ ಕಲಾಪವೇ ನಡೆಯದಂತಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಿಸಿದರು.ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಲಾಭ ಮಾಡಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದು ಚುಚ್ಚಿದ ಅವರು,ಇಂತಹ ಹೇಳಿಕೆಗಳನ್ನು ವೈಭವೀಕರಿಸುವ ಮಾಧ್ಯಮಗಳ ಧೋರಣೆಯೂ ಸರಿಯಲ್ಲ ಎಂದು ನುಡಿದರು.

ಸದನದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇ ಈ ಬಾರಿಯ ದೊಡ್ಡ ಕಲಾಪ.ಉಳಿದಂತೆ ಅಗಲಿದ ಮೌಲ್ಯಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕೆಲಸ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು,ಸದನದ ಮೌಲ್ಯಗಳು ಕುಸಿಯುತ್ತಿರುವುದಂತೂ ನಿಜ ಎಂದು ಆತಂಕ ವ್ಯಕ್ತಪಡಿಸಿದರು.

ಆದರೆ ಇದು ಕೇವಲ ವಿಧಾನಸಭೆಗೆ ಮಾತ್ರವಲ್ಲ,ಬದುಕಿನ ಎಲ್ಲ ರಂಗಗಳಲ್ಲೂ ಮೌಲ್ಯಗಳು ಕುಸಿಯುತ್ತಾ ಸಾಗಿವೆಹೀಗಾಗಿ ಇದನ್ನು ಎತ್ತಿ ಹಿಡಿಯಲು ಸಮಾಜದ ಎಲ್ಲ ರಂಗಗಳಿಂದಲೂ ನಿರಂತರ ಪ್ರಯತ್ನ ನಡೆಯಬೇಕು ಎಂದರು.ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದೇ ನಮ್ಮ ಹಲವು ಶಾಸಕರಿಗೆ ಗೊತ್ತಿಲ್ಲ.ಹಾಗಂತ ಎಲ್ಲರ ಬಗ್ಗೆಯೂ ಈ ಮಾತು ಹೇಳಲಾಗದು.ಆದರೆ ಅನುಭವವಿದ್ದವರು ನಡೆದುಕೊಂಡ ರೀತಿ ಆತಂಕ ಹುಟ್ಟಿಸುತ್ತಿದೆ ಎಂದರು.

ತಮ್ಮ ಹಕ್ಕಿಗೆ ಚ್ಯುತಿಯಾದಾಗ ಶಾಸಕರು ಸದನದಲ್ಲಿ ಹಕ್ಕುಚ್ಯುತಿ ಸೂಚನೆ ಮಂಡಿಸುತ್ತಾರೆ.ಆದರೆ ಜನರ ಹಿತ ಕಾಪಾಡಲು ಅವರು ಮುಂದಾಗದೇ ಇದ್ದಾಗ ಅವರ ವಿರುದ್ದ ಹಕ್ಕುಚ್ಯುತಿ ಮಂಡಿಸಲು ಜನರಿಗೆ ಅವಕಾಶವಿರಬೇಕು ಎಂಬ ಮಾತಿಗೆ ಉತ್ತರಿಸಿದ ಅವರು,ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ.ನಾನು ಸದನದ ನಿಯಮಾವಳಿಗಳ ಪಾಲಕ.ಉಳಿದಂತೆ ತಮ್ಮ ಹಕ್ಕಿಗೆ ಚ್ಯುತಿಯಾದಾಗ ಜನರೇ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡಬೇಕು ಎಂದರು.ಈ ಬಾರಿಯ ಸದನ ಹತ್ತು ದಿನಗಳ ಕಾಲ ನಡೆಯಬೇಕಿತ್ತು.ಆದರೆ ಎರಡು ದಿನ ಕಲಾಪ ನಡೆಯಿತು.ಐದು ದಿನ ಗದ್ದಲದಲ್ಲಿ ಕಳೆಯಿತು.ಉಳಿದಂತೆ ಮೂರು ದಿನಗಳ ಕಲಾಪವನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು ಎಂದು ಇದೇ ಸಂದರ್ಭದಲ್ಲಿ ಅವರು ವಿಷಾದಿಸಿದರು.

ಸದನ ಕಲಾಪ ಸರಿಯಾಗಿ ನಡೆಯದಿದ್ದರೂ ಶಾಸಕರ ಸಂಬಳ ಏರಿಕೆ ಮಾಡಲಾಯಿತು.ಇದು ಸರಿಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಹಲವು ಶಾಸಕರು ಮತ್ತು ಬಹುತೇಕ ನಿವೃತ್ತ ಶಾಸಕರು ಸಂಕಷ್ಟದಲ್ಲಿದ್ದಾರೆ.ಇದನ್ನು ಗಮನದಲ್ಲಿಟ್ಟುಕೊಂಡರೆ ಶಾಸಕರ ವೇತನ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡರು.

ಈ ಬಾರಿ ಸದನದಲ್ಲಿ ಒಂದೇ ರಾಷ್ಟ್ರ-ಒಂದೇ ಚುನಾವಣೆ ಎಂಬ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಎರಡು ದಿನಗಳ ಕಾಲ ಚರ್ಚೆ ನಡೆಸುವ ಉದ್ದೇಶವಿತ್ತು.ಆದರೆ ಕಾಂಗ್ರೆಸ್ ಸದಸ್ಯರ ಗದ್ದಲದಿಂದ ಇದು ಸಾಧ್ಯವಾಗದೆ ಹೋಯಿತು ಎಂದು ವಿಷಾದಿಸಿದರು.

Leave a Comment

Your email address will not be published. Required fields are marked *

Translate »
Scroll to Top