ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ

ಬೆಂಗಳೂರು:ಇಂದು ಶಿವಮೊಗ್ಗ,ಮಡಿಕೇರಿ,ಚಿತ್ರದುರ್ಗ,ಯಾದಗಿರಿ,ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ ಮತ್ತಷ್ಟು ತೀವ್ರವಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ,ಹಿಜಾಬ್ ವಿವಾದವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಲು ಮತಾಂಧ ಶಕ್ತಿಗಳು ಪ್ರಯತ್ನ ನಡೆಸಿವೆ.ಇವನ್ನು ದಮನ ಮಾಡಲೇಬೇಕು ಎಂದರು.ಎಸ್.ಎಫ್.ಐ ಮತ್ತು ಸಿ.ಎಫ್.ಐ ಸಂಘಟನೆಗಳು ಹಿಜಾಬ್ ವಿವಾದ ದೇಶದಲ್ಲಿ ರಕ್ತಪಾತಕ್ಕೆ ಕಾರಣವಾಗಬೇಕು ಎಂದು ಬಯಸಿವೆ.ಯಾವ ಕಾರಣಕ್ಕೂ ಇದ‍ನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ದಿನ ಕಳೆದಂತೆ ಹಿಜಾಬ್ ವಿವಾದವನ್ನು ತೀವ್ರಗೊಳಿಸುವುದು ಈ ಸಂ‍‍‍ಘಟನೆಗಳ ಗುರಿ.ಆದರೆ ಈ ಸಂಘಟನೆಗಳ ಮಾತಿಗೆ ಯಾರೂ ಕಿವಿಗೊಡಬಾರದು.ಅದೇ ಕಾಲಕ್ಕೆ ಅವುಗಳ ದಮನವಾಗಬೇಕು ಎಂದು ನುಡಿದರು.ಹಿಜಾಬ್ ವಿವಾದ ಪಡೆಯುತ್ತಿರುವ ತಿರುವುಗಳನ್ನು ನಾವು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ.ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ವರದಿ ನೀಡಿ ಸದರಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳುವಂತೆ ಹೇಳುತ್ತೇವೆ ಎಂದು ವಿವರ ನೀಡಿದರು.ಹಿಜಾಬ್ ವಿವಾದ ಪ್ರತಿಪಕ್ಷ ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಿದ ಅವರು,ಸ್ವಾತಂತ್ರ್ಯಾನಂತರ ವೋಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಪಕ್ಷದವರು ನಿರಂತರವಾಗಿ ಮತಾಂಧ ಶಕ್ತಿಗಳನ್ನು ಬೆಂಬಲಿಸುತ್ತಾ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಈಗ ಹಿಜಾಬ್ ವಿವಾದ ಅವರಿಗೆ ನುಂಗಲಾರದ ತುತ್ತಾಗಿದೆ.ಇವತ್ತು ಹಿಜಾಬ್ ಅನ್ನು ಬೆಂಬಲಿಸಿದರೆ ಅವರು ಒಂದು ಮತ ಬ್ಯಾಂಕ್‍ನ ವಿರೋಧ ಕಟ್ಟಿಕೊಳ್ಳುತ್ತಾರೆ.ವಿರೋಧಿಸಿದರೆ ಮತ್ತೊಂದು ಮತಬ್ಯಾಂಕ್‍ನ ವಿರೋಧ ಕಟ್ಟಿಕೊಳ್ಳುತ್ತಾರೆ.ಹೀಗಾಗಿ ಏನು ಮಾಡಬೇಕೋ ತೋಚದೆ ಅವರು ಕಂಗಾಲಾಗಿದ್ದಾರೆ.ಆದರೆ ಯಾವ ಕಾರಣಕ್ಕೂ ಹಿಜಾಬ್ ವಿಷಯದಲ್ಲಿ ಮತಾಂಧ ಶಕ್ತಿಗಳನ್ನು ಬೆಂಬಲಿಸದಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು.ಈ ಮಧ್ಯೆ ರಾಜ್ಯದ ವಿವಿಧ ಭಾಗಗಳಲ್ಲಿ ಹಿಜಾಬ್ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಹಿಜಾಬ್ ಇಲ್ಲದೆ ಶಾಲೆಗೆ ಬರಲಾರೆವು ಎಂಬ ಮಾತು ಮುಸ್ಲಿಂ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.ವಿದ್ಯೆ ಇಲ್ಲದಿದ್ದರೂ ಪರವಾಗಿಲ್ಲ,ಆದರೆ ಧರ್ಮ ಮಾತ್ರ ಬಿಡೆವು ಎಂಬಂತಹ ಘೋಷಣೆಗಳ ಮೂಲಕ ಹಿಜಾಬ್ ವಿವಾದಕ್ಕೆ ತೀವ್ರ ಸ್ವರೂಪ ನೀಡಲಾಗುತ್ತಿದ್ದು,ಹಲವು ಶಾಲಾ ಕಾಲೇಜುಗಳ ಮುಂದೆ ಇಂದು ನಡೆದ ಪ್ರತಿಭಟನೆಯನ್ನು ತಡೆಯಲು ಪೋಲೀಸರು ಹರಸಾಹಸ ನಡೆಸಿದರು.ನಾವು ಶಾಲಾ ಸಮವಸ್ತ್ರ ಧರಿಸಿದ್ದೇವೆ.ಅದರ ಮೇಲೆ ಹಿಜಾಬ್ ಧರಿಸಿದ್ದೇವೆ.ಇದರಲ್ಲಿ ಯಾವ ತಪ್ಪೂ ಇಲ್ಲ,ನಮ್ಮ ಧರ್ಮದ ಸಂಕೇತವಾದ ಇದನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹಲವು ಕಡೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು.ಚಿಕ್ಕಮಗಳೂರಿನಲ್ಲಿ ಬುಧವಾರದ ಹಾಗೆ ಗುರುವಾರವೂ ವಿದ್ಯಾರ್ಥಿಗಳ ಪೋಷಕರೂ ಶಿಕ್ಷಣ ಸಂಸ್ಥೆಗಳ ಪೋಷಕರೂ ವಿದ್ಯಾಸಂಸ್ಥೆಗಳ ಮುಂದೆ ಬಂದಿದ್ದಲ್ಲದೆ,ಮಕ್ಕಳನ್ನು ಶಾಲೆಯಿಂದ ಹೊರಗೆ ನಿಲ್ಲಿಸಿದ ಕ್ರಮವನ್ನು ಪ್ರಶ್ನಿಸಿದರು.ಅವರಿಗೆ ಹೈಕೋರ್ಟ್ ತೀರ್ಪಿನ ಬಗ್ಗೆ ವಿವರಿಸಿದರೂ ಪ್ರಯೋಜನವೇನೂ ಆಗಲಿಲ್ಲ,ಬದಲಿಗೆ,ನಮ್ಮ ಧಾರ್ಮಿಕ ಹಕ್ಕಿಗೆ ಅಡ್ಡಿ ಮಾಡಬಾರದು ಎಂದು ಪೋಷಕರು ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.ಹೀಗೆ ಹಿಜಾಬ್ ವಿವಾದ ಮುಂದುವರಿಯುತ್ತಿದ್ದಂತೆಯೇ ಸದರಿ ಬೆಳವಣಿಗೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದ್ದು,ಈ ಘಟನೆಯ ಹಿಂದೆ ಮತಾಂಧ ಸಂಘಟನೆಗಳಿದ್ದು ಅವುಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ವಿವರಿಸಲು ಬಯಸಿದೆ.ಉದ್ದೇಶಪೂರ್ವಕವಾಗಿ ಈ ವಿವಾದವನ್ನು ಬೆಳೆಸುವ ಯತ್ನವಾಗುತ್ತಿದೆ.ಹೀಗಾಗಿ ಸಕಾಲದಲ್ಲಿ ಅವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ವಿವರಿಸಲು ರಾಜ್ಯ ಸರ್ಕಾರ ಬಯಸಿದೆ.

Leave a Comment

Your email address will not be published. Required fields are marked *

Translate »
Scroll to Top