ಬೆಂಗಳೂರು, ನವೆಂಬರ್,16 – ಬಿಟ್ ಕಾಯಿನ್ ಹಗರಣದ ಬಗ್ಗೆ ರಾಜ್ಯ ಸರ್ಕಾರವೇ ನುರಿತ ತಜ್ಞರ ಸಹಕಾರ ಪಡೆದು ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.ತನಿಖೆಯನ್ನು ಇಡಿಗೆ (ಜಾರಿ ನಿರ್ದೇಶನಾಲಯ) ಕೊಡಲಾಗಿದೆ ಅಂತಿದ್ದಾರೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಮುಖ್ಯ ಆರೋಪಿಯನ್ನು ಏಳೆಂಟು ಬಾರಿ ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಲಾಗಿದೆ.ಆದರೆ ಗೊಂದಲ ಮಾತ್ರ ಮುಂದುವರಿದಿದೆ ಎಂದಿದ್ದಾರೆ.

ಆದರೆ ಸರ್ಕಾರವು ಈ ಹಗರಣದ ಬಗ್ಗೆ ನುರಿತ ತಜ್ಞರ ಸಹಕಾರ ಪಡೆದು ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ಸರಕಾರಕ್ಕೆ ಸಲಹೆ ಮಾಡಿದರು.ಆರೋಪಿ ಶ್ರೀಕಿ ಜೀವಕ್ಕೆ ಅಪಾಯ ಇದೆ. ಆತನಿಗೆ ಪೊಲೀಸ್ ರಕ್ಷಣೆ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯ ಮಾಡಿದ್ದರಲ್ಲಾ ಎಂದು ಗಮನ ಸೆಳೆದಾಗ ಆರೋಪಿಗೆ ರಕ್ಷಣೆ ಕೊಡುವುದು ತಪ್ಪಲ್ಲ ಎಂದರು.”ಇಷ್ಟು ವರ್ಷ ಆತನ ಜೀವಕ್ಕೆ ಅಪಾಯ ಇರಲಿಲ್ಲ. ಈಗ ಅವನಿಗೆ ಜೀವ ಬೆದರಿಕೆ ಇದೆ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ನಿಖರ ಮಾಹಿತಿ ಇರಬೇಕು. ರಕ್ಷಣೆ ಕೊಡೋದು ತಪ್ಪಲ್ಲ, ಕೊಡಲಿ. ಇದುವರೆಗೆ ಎಂಥೆಂತವರಿಗೋ ರಕ್ಷಣೆ ನೀಡಲಾಗಿದೆ. ಇವರಿಗೂ ಕೊಡಲಿ, ಬೇಡ ಅಂದವರು ಯಾರು?” ಎಂದು ಹೇಳಿದರು.

ಪೇಜಾವರ ಶ್ರೀಗಳ ಬಗ್ಗೆ ಹಾಗೂ ತಮ್ಮ ಗ್ರಾಮ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು; “ಮುಖ್ಯಮಂತ್ರಿ ಆಗಿದ್ದಾಗ ನಾನು ಮಾಡಿದ ಗ್ರಾಮ ವಾಸ್ತವ್ಯಕ್ಕೆ ಮಹಾತ್ಮ ಗಾಂಧೀಜಿ ಅವರೇ ಸ್ಪೂರ್ತಿ ಮತ್ತು ಆದರ್ಶ ಎಂದರು.ಗ್ರಾಮ ವಾಸ್ತವ್ಯ ಅನ್ನೋದು ನಾಟಕೀಯವಾಗಿ ಮಾಡಿದ್ದಲ್ಲ.ಆತ್ಮತೃಪ್ತಿಗಾಗಿ, ಜನರ ಕೆಲಸ ಮಾಡುವ ಉದ್ದೇಶದಿಂದ ಮಾಡಿದ್ದು ಎಂದು ಹೇಳಿದರು.ನನ್ನ ಗ್ರಾಮ ವಾಸ್ತವ್ಯದಿಂದ ಅನೇಕರಿಗೆ ಅನುಕೂಲವಾಗಿದೆ. ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಲಿಲ್ಲ ಎಂದ ಅವರು; ಆ ವಿಚಾರಗಳ ಬಗ್ಗೆ ಚರ್ಚೆ ಮಾತನಾಡುವ ಅಗತ್ಯ ಇರಲಿಲ್ಲ. ಮುಖ್ಯವಾಗಿ ಧರ್ಮ ಹಾಗೂ ಧಾರ್ಮಿಕ ಗುರುಗಳ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದರು. ಮಾಧ್ಯಮಗೋಷ್ಟಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಸರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ಇದ್ದರು.